More

    ದ.ಕ. ಜಿಲ್ಲೆಯ 8 ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್‌ಗೆ 40ಕ್ಕೂ ಅಧಿಕ ಅರ್ಜಿ!

    -ಪಿ.ಬಿ.ಹರೀಶ್ ರೈ ಮಂಗಳೂರು
    ಆರು ಮಂದಿ ಮಾಜಿ ಶಾಸಕರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ 40ಕ್ಕೂ ಅಧಿಕ ಮಂದಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿ 2 ಲಕ್ಷ ರೂಪಾಯಿ ಡಿ.ಡಿ.ಯೊಂದಿಗೆ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಕೆ ಅವಧಿಯನ್ನು ನ.21ರವರೆಗೆ ವಿಸ್ತರಿಸಲಾಗಿದ್ದು, ಇನ್ನಷ್ಟು ಆಕಾಂಕ್ಷಿಗಳು ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ.

    2018ರ ಚುನಾವಣೆಯಲ್ಲಿ ಪರಾಭವಗೊಂಡು ಮಾಜಿಗಳಾದ ಬಿ.ರಮಾನಾಥ ರೈ, ವಸಂತ ಬಂಗೇರ, ಮೊಯಿದ್ದೀನ್ ಬಾವ, ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ ಮತ್ತೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮೂಡುಬಿದಿರೆ ಕ್ಷೇತ್ರದಲ್ಲಿ ಶಾಸಕರಾಗಿದ್ದ ಅಭಯಚಂದ್ರ ಜೈನ್ ಇನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆಯೇ ಘೋಷಿಸಿದ ಕಾರಣ ಅರ್ಜಿ ಸಲ್ಲಿಸುವ ಗೋಜಿಗೆ ಹೋಗಿಲ್ಲ. ಕಳೆದ ಬಾರಿ ಕುಂದಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಂಟಕ್ ನಾಯಕ ರಾಕೇಶ್ ಮಲ್ಲಿ ಸ್ವಕ್ಷೇತ್ರ ಬಂಟ್ವಾಳದಲ್ಲಿ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದಾರೆ.

    ಪುತ್ತೂರಿಗೆ ಅತಿ ಹೆಚ್ಚು: ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಪುತ್ತೂರು ಕ್ಷೇತ್ರಕ್ಕೆ ಅತಿ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ. ಸುಳ್ಯ ಮೀಸಲು ಕ್ಷೇತ್ರವಾಗಿರುವುದು ಮತ್ತು ಮಂಗಳೂರು ನಗರ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾದ ಕಾರಣ ಹೆಚ್ಚಿನ ಆಕಾಂಕ್ಷಿಗಳು ಪುತ್ತೂರು ಕ್ಷೇತ್ರದತ್ತ ಕಣ್ಣಿಟ್ಟಿದ್ದಾರೆ.

    ಖಾದರ್‌ಗೆ ಟಿಕೆಟ್ ಖಚಿತ: ಮಂಗಳೂರು ಕ್ಷೇತ್ರದಿಂದ ಮತ್ತೆ ಯು.ಟಿ.ಖಾದರ್ ಅವರಿಗೆ ಟಿಕೆಟ್ ನೀಡುವುದು ಖಚಿತವಾದ ಕಾರಣ ಈ ಕ್ಷೇತ್ರದಲ್ಲಿ ಅರ್ಜಿಯ ಭರಾಟೆ ಕಂಡು ಬಂದಿಲ್ಲ. ಮೂಡುಬಿದಿರೆ ಕ್ಷೇತ್ರದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಟಿಕೆಟ್ ಪಡೆಯುವ ಸಾಧ್ಯತೆ ಹೆಚ್ಚಿರುವ ಕಾರಣ ಕೇವಲ 2 ಅರ್ಜಿ ಸಲ್ಲಿಕೆಯಾಗಿದೆ. ಮೀಸಲು ಕ್ಷೇತ್ರ ಸುಳ್ಯದಿಂದ ಕೂಡ 2 ಅರ್ಜಿ ಮಾತ್ರ ಸಲ್ಲಿಕೆಯಾಗಿದೆ. ಟಿಕೆಟ್ ಸಿಗುವ ಯಾವುದೇ ಸಾಧ್ಯತೆ ಇಲ್ಲ ಎಂದು ಖಚಿತವಾಗಿ ತಿಳಿದಿದ್ದರೂ ಕೆಲವರು ಪ್ರಚಾರದ ದೃಷ್ಟಿಯಿಂದ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

    ಅರ್ಜಿ ಸಲ್ಲಿಸದ ಡಾ.ರಘು: ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಸುಳ್ಯದಿಂದ ಈ ಹಿಂದೆ 4 ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡ ಡಾ.ರಘು ಅವರು ಟಿಕೆಟ್‌ಗೆ ಅರ್ಜಿ ಸಲ್ಲಿಸಿಲ್ಲ. ಈ ಬಾರಿ ಅವರ ಪುತ್ರರಾದ ಪ್ರಹ್ಲಾದ್ ಬೆಳ್ಳಿಪ್ಪಾಡಿ ಮತ್ತು ಅಭಿಷೇಕ್ ಬೆಳ್ಳಿಪ್ಪಾಡಿ ಅರ್ಜಿ ಸಲ್ಲಿಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಅಪ್ಪಿ ಎಸ್. ಅವರೂ ಸುಳ್ಯದಿಂದ ಟಿಕೆಟ್ ಬಯಸಿ ಅರ್ಜಿ ಹಾಕಿದ್ದಾರೆ.

    ಆರಂಭದಲ್ಲೇ ಅಪಸ್ವರ: ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಲೇ ಅಲ್ಲಲ್ಲಿ ಅಪಸ್ವರ ಕೂಡ ಕೇಳಲಾರಂಭಿಸಿದೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಬಾರದೆಂದು ಮಾಜಿ ಸಚಿವ ಗಂಗಾಧರ ಗೌಡ ಬಹಿರಂಗ ಹೇಳಿಕೆ ನೀಡಿದ್ದಾರೆ. ಪುತ್ತೂರು ಕ್ಷೇತ್ರದಲ್ಲೂ ಇದೇ ರೀತಿಯ ಬೇಡಿಕೆ ಇದ್ದು, ಕಾವು ಹೇಮನಾಥ ಶೆಟ್ಟಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

    ಅರ್ಜಿ ಸಲ್ಲಿಸಿದವರು:

    • ಬೆಳ್ತಂಗಡಿ: ವಸಂತ ಬಂಗೇರ, ಗಂಗಾಧರ ಗೌಡ, ರಕ್ಷಿತ್ ಶಿವರಾಂ
    • ಮಂಗಳೂರು ದಕ್ಷಿಣ: ಜೆ.ಆರ್.ಲೋಬೊ, ಐವನ್ ಡಿಸೋಜ, ಶಾಲೆಟ್ ಪಿಂಟೊ, ಎ.ಸಿ.ವಿನಯರಾಜ್, ಮೆರಿಲ್ ರೇಗೊ, ಅಶಿತ್ ಪಿರೇರಾ, ಲಾರೆನ್ಸ್ ಡಿಸೋಜ
    • ಮಂಗಳೂರು ಉತ್ತರ: ಮೊಯಿದ್ದೀನ್ ಬಾವಾ, ಇನಾಯತ್ ಆಲಿ, ಅನಿಲ್ ಕುಮಾರ್, ಪ್ರತಿಭಾ ಕುಳಾಯಿ, ಲುಕ್ಮಾನ್,ಪುರುಷೋತ್ತಮ ಚಿತ್ರಾಪುರ, ಕವಿತಾ ಸನಿಲ್, ಶಶಿಧರ್ ಹೆಗ್ಡೆ.
    • ಮೂಡುಬಿದಿರೆ: ಮಿಥುನ್ ರೈ, ರಾಜಶೇಖರ್ ಕೋಟ್ಯಾನ್
    • ಬಂಟ್ವಾಳ: ಬಿ.ರಮಾನಾಥ ರೈ, ಅಶ್ವನಿ ಕುಮಾರ್ ರೈ, ರಾಕೇಶ್ ಮಲ್ಲಿ
    • ಪುತ್ತೂರು: ಶಕುಂತಳಾ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ಎನ್.ಚಂದ್ರಹಾಸ ಶೆಟ್ಟಿ, ಧನಂಜಯ ಅಡ್ಪಂಗಾಯ, ಕೃಪಾ ಆಳ್ವ, ಪ್ರಸಾದ್ ಕೌಶಲ್ ಶೆಟ್ಟಿ, ಎಂ.ಬಿ.ವಿಶ್ವನಾಥ ರೈ, ಡಾ.ರಾಜಾರಾಮ್.ಕೆ.ಬಿ., ಭರತ್ ಮುಂಡೋಡಿ, ದಿವ್ಯಪ್ರಭಾ ಚಿಲ್ತಡ್ಕ, ಎಂ.ಎಸ್.ಮಹಮ್ಮದ್, ಸತೀಶ್ ಕುಮಾರ್ ಕೆಡೆಂಜಿ.
    • ಸುಳ್ಯ: ಎಚ್.ಎಂ.ನಂದಕುಮಾರ್, ಜಿ.ಕೃಷ್ಣಪ್ಪ, ಅಪ್ಪಿ ಎಸ್., ಪ್ಲಹ್ಲಾದ್ ಬೆಳ್ಳಿಪ್ಪಾಡಿ, ಅಭಿಷೇಕ್ ಬೆಳ್ಳಿಪ್ಪಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts