More

    ಹುಬ್ಬಳ್ಳಿಗೆ ಬಂತು ಎಚ್​ಡಿಪಿಇ ಮೂತ್ರಿ!

    ಹುಬ್ಬಳ್ಳಿ: ಸಾರ್ವಜನಿಕರ ಅನುಕೂಲಕ್ಕಾಗಿ ಅವಳಿ ನಗರದ ವಿವಿಧ ಸ್ಥಳಗಳಲ್ಲಿ ಎಚ್​ಡಿಪಿಇ (ಹೈ ಡೆನ್ಸಿಟಿ ಪಾಲಿ ಎಥಿಲಿನ್) ವಸ್ತುವಿನಿಂದ ತಯಾರಿಸಿದ ಮೂತ್ರಿ (ಯೂರಿನಲ್ಸ್) ಅಳವಡಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ.

    ಪ್ರಾಯೋಗಿಕವಾಗಿ ಮೊದಲ ಎಚ್​ಡಿಪಿಇ ಮೂತ್ರಿ ಅಳವಡಿಸಲು ನೀಲಿಜಿನ್ ರಸ್ತೆಯನ್ನು (ಕಿತ್ತೂರು ಚನ್ನಮ್ಮ ವೃತ್ತಕ್ಕೆ ಹತ್ತಿರ) ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಎಚ್​ಡಿಪಿಇ ಮೂತ್ರಿಯನ್ನು ಪಾಲಿಕೆ ಆವರಣಕ್ಕೆ ತಂದು ಇಳಿಸಲಾಗಿದೆ. ಇದನ್ನು ಅಳವಡಿಸುವ ಸ್ಥಳದಲ್ಲಿ ಸಿಮೆಂಟ್ ಫೌಂಡೇಷನ್ ಹಾಕಲು ಸಿದ್ಧತೆ ನಡೆಸಲಾಗಿದೆ. ಇನ್ನು 3-4 ದಿನಗಳಲ್ಲಿ ಹೊಸ ವಿನ್ಯಾಸದ ಮೂತ್ರಿಗೆ ನೀರು ಹಾಗೂ ಒಳಚರಂಡಿ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಿ ಸಾರ್ವಜನಿಕ ಬಳಕೆಗೆ ಸಮರ್ಪಿಸಲು ಪಾಲಿಕೆ ಅಣಿಯಾಗಿದೆ. ಆಂಧ್ರಪ್ರದೇಶ ರಾಜ್ಯದ ವಿಜಯವಾಡ ನಗರದಲ್ಲಿ ಈ ಮಾದರಿಯ ಮೂತ್ರಿ ಬಳಕೆಯಲ್ಲಿದೆ.

    ಏಕಕಾಲಕ್ಕೆ ನಾಲ್ಕು ಜನರು ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗುವಂತೆ ಇರುವ ಚತುಮುಖ ಮೂತ್ರಿ ಇದಾಗಿದೆ. ಕೆಳಗಡೆ ಸಿಮೆಂಟ್ ಫೌಂಡೇಷನ್ ಹಾಕುವುದನ್ನು ಬಿಟ್ಟರೆ ಬೇರೆ ಯಾವುದೇ ಗಟ್ಟಿ ನಿರ್ವಣದ ಅವಶ್ಯಕತೆ ಇಲ್ಲ. ಒಂದು ಸಂಪೂರ್ಣ ಸೆಟ್ ಅಪ್ ಅನ್ನೇ ತಂದು ಅಳವಡಿಸುವುದು ಅಷ್ಟೇ. ಸುಲಭವಾಗಿ ಬೇರೆಡೆ ಸ್ಥಳಾಂತರಿಸಲೂ ಸಾಧ್ಯ. ಇದು 250 ಲೀಟರ್ ಸಾಮರ್ಥ್ಯದ ನೀರಿನ ತೊಟ್ಟಿ ಹೊಂದಿದೆ.

    ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಹುಬ್ಬಳ್ಳಿ ಮಾರುಕಟ್ಟೆ, ಸರ್ಕಾರಿ ಕಚೇರಿ, ಕೋರ್ಟ್, ಶಿಕ್ಷಣ ಕೇಂದ್ರಗಳಿಗೆಂದು ಪ್ರತಿ ನಿತ್ಯ 70-80 ಸಾವಿರ ಜನ ಬಂದು ಹೋಗುತ್ತಾರೆ. ಬಸ್ ನಿಲ್ದಾಣ ಹೊರತುಪಡಿಸಿದರೆ ಬೇರೆಡೆ ಸಾರ್ವಜನಿಕ ಶೌಚಗೃಹ ಹಾಗೂ ಮೂತ್ರಿಗಳು ಇಲ್ಲ. ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತ, ಪಾಲಿಕೆ ಕಚೇರಿ, ಕೊಪ್ಪಿಕರ ರಸ್ತೆ, ಸ್ಟೇಶನ್ ರಸ್ತೆ, ದುರ್ಗದಬೈಲ್, ಸಿಬಿಟಿ, ಕೇಶ್ವಾಪುರ ಇವೆಲ್ಲ ಜನದಟ್ಟಣೆಯ ಪ್ರದೇಶ. ಪಾಲಿಕೆ ನಡೆಸಿರುವ ಸಮೀಕ್ಷೆ ಪ್ರಕಾರ 70-80 ಸ್ಥಳಗಳಲ್ಲಿ ಎಚ್​ಡಿಪಿಇ ಮೂತ್ರಿಯ ಅವಶ್ಯಕತೆ ಇದೆ.

    ಜನದಟ್ಟಣೆ ಇರುವ ಪ್ರದೇಶದಲ್ಲಿ ಮೂತ್ರಿ ನಿರ್ವಿುಸುವುದು ಅಸಾಧ್ಯ. ಪಾಲಿಕೆಯು ಸುಪ್ರೀಂ ಕಂಪನಿಯಿಂದ ತರಿಸಿಕೊಂಡಿರುವ ಮೊದಲ ಎಚ್​ಡಿಪಿಇ ಮೂತ್ರಿಯ ವೆಚ್ಚ ಜಿಎಸ್​ಟಿ ಹಾಗೂ ಸಾಗಣೆ ವೆಚ್ಚ ಸೇರಿ 68000 ರೂಪಾಯಿ ಆಗಿದೆ. ಸಿಮೆಂಟ್ ಫೌಂಡೇಷನ್, ನೀರು ಹಾಗೂ ಒಳಚರಂಡಿ ಸಂಪರ್ಕ ವ್ಯವಸ್ಥೆ ವೆಚ್ಚ ಸೇರಿದರೆ 1 ಲಕ್ಷ ರೂಪಾಯಿ ಆಗಬಹುದು. ಮಹಿಳೆಯರಿಗಾಗಿಯೇ ಪ್ರತ್ಯೇಕ ಮಾದರಿಯ

    ಎಚ್​ಡಿಪಿಇ ಮೂತ್ರಿಗಳಿವೆ. ಅವನ್ನು ಪಾಲಿಕೆ ಸದ್ಯಕ್ಕೆ ತರಿಸಿಕೊಂಡಿಲ್ಲ. ಬೇಡಿಕೆಯನ್ನು ಗಮನಿಸಿ ಮುಂದಿನ ಹೆಜ್ಜೆ ಇಡಲು ಪಾಲಿಕೆ ನಿರ್ಧರಿಸಿದೆ.

    ಮೂತ್ರ ವಿಸರ್ಜನೆ ಮಾಡುವುದು ಸಾರ್ವಜನಿಕರಿಗೆ ಗೋಚರಿಸದಂತೆ ಜಿಐ ಸೀಟ್​ನಿಂದ ಅಡ್ಡಗೋಡೆ ನಿರ್ವಿುಸಲಾಗುತ್ತದೆ. ಈ ಅಡ್ಡಗೋಡೆಯನ್ನು ಜಾಹೀರಾತು ಪ್ರಕಟಿಸಲು ಬಳಸುವ ಉದ್ದೇಶವನ್ನು ಪಾಲಿಕೆ ಹೊಂದಿದೆ.

    ಯಶಸ್ಸು ಕಾಣದ ಇ- ಟಾಯ್ಲೆಟ್

    ಹುಬ್ಬಳ್ಳಿಯಲ್ಲಿ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿಯಿಂದ 1 ಕೋಟಿ ರೂಪಾಯಿ ವೆಚ್ಚದಲ್ಲಿ 30 ಕಡೆ ಇ-ಟಾಯ್ಲೆಟ್ ಅಳವಡಿಸಲಾಗಿದ್ದರೂ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಒಂದು ರೂಪಾಯಿ ಕಾಯಿನ್ ಹಾಕಿ ಇದನ್ನು ಬಳಸಬೇಕು. ಆದರೆ, ವಾಮಮಾರ್ಗ ಅನುಸರಿಸಿ ದುಡ್ಡು ಹಾಕದೆ ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿ ಇಲ್ಲಿ ಹೆಚ್ಚಿದೆ. ಹೀಗಾಗಿ, ಇದರ ಬದಲಾಗಿ ಇದೀಗ ಎಚ್​ಡಿಪಿಇ ಮೂತ್ರಿ ಅಳವಡಿಸುವ ಹೊಸ ಪ್ರಯತ್ನ ಸಾಗಿದೆ.

    ಪ್ರಾಯೋಗಿಕವಾಗಿ ನೀಲಿಜಿನ್ ರಸ್ತೆಯಲ್ಲಿ ಎಚ್​ಡಿಪಿಇ ಮೂತ್ರಿ ಅಳವಡಿಸಲಾಗುತ್ತಿದೆ. ಮುಂದೆ ಸಾರ್ವಜನಿಕರ ಸ್ಪಂದನೆಯನ್ನು ಗಮನಿಸಿ ಉಳಿದೆಡೆ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಎಚ್​ಡಿಪಿಇ ಮೂತ್ರಿ ಅಳವಡಿಸಿದ ಮೇಲೂ ನೀಲಿಜಿನ್ ರಸ್ತೆ ಸುತ್ತಮುತ್ತ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ದಂಡ ವಿಧಿಸಲಾಗುವುದು.

    | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತರು



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts