More

    ಈ ದುಮ್ಮಾನದ ದಿನಗಳನ್ನು ಸಹ್ಯವಾಗಿಸಿಕೊಳ್ಳುವುದು ಹೇಗೆ?

    ಈ ದುಮ್ಮಾನದ ದಿನಗಳನ್ನು ಸಹ್ಯವಾಗಿಸಿಕೊಳ್ಳುವುದು ಹೇಗೆ?ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಲ್ಲರನು ಸಲಹುವನು ಇದಕೆ ಸಂಶಯ ಬೇಡ… ಹೀಗೆಂದು ಸಂತೈಸಿದವರು ನಮ್ಮ ದಾಸವರೇಣ್ಯರು. ಭಗವಂತ ನಮ್ಮನ್ನು ಕಾಪಾಡುತ್ತಾನೆ ಎಂಬ ದಾಸರ ಅಭಯ ನಮ್ಮನ್ನು ಬದುಕಿಗೆ ಒಂದು ನಂಬಿಕೆಯ ಎಳೆಯ ಮೂಲಕ ಬಿಗಿದು ಕಟ್ಟುತ್ತದೆ. ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆಯ ಹಾಗೆ ಭಗವಂತ ಇದ್ದಾನೆ ಎಂಬ ಭರವಸೆ ಒಂದು ಧೈರ್ಯ ನೀಡುತ್ತದೆ. ಇಂಥ ದೊಂದು ನಂಬಿಕೆಯೇ ಇಲ್ಲದಿದ್ದಾಗ ನಾವು ಆಪತ್ತಿನ ಸಮಯದಲ್ಲಿ ತರಗೆಲೆಗಳಂತೆ ನಡುಗಿ ಹೋಗುತ್ತೇವೆ. ಆತಂಕವನ್ನೂ ದುಗುಡವನ್ನೂ ನಿಯಂತ್ರಿಸಿಕೊಳ್ಳಲಾರದೆ ಆತ್ಮಹತ್ಯೆಯಂಥ ದಿಕ್ಕೆಟ್ಟ ನಿರ್ಧಾರಗಳಿಗೆ ಹೊರಟುಬಿಡುತ್ತೇವೆ. ‘ತೇಲಿಸೋ ಇಲ್ಲ ಮುಳುಗಿಸೋ’ ಎಂದು ಭಗವಂತನನ್ನೇ ನಂಬಿ ಆಶ್ರಯಿಸುವ ಮನಸ್ಸುಗಳು ಏನೋ ಒಂದು ಬಗೆಯ ನಿಶ್ಚಿಂತ ಧೈರ್ಯವನ್ನು ಹೊಂದಿರುವುದಂತೂ ಸತ್ಯ.

    ಕಳೆದ ವರ್ಷದ ಲಾಕ್​ಡೌನ್ ದಿನಗಳ ಆತಂಕವನ್ನು ನೆನಪಿಸಿಕೊಳ್ಳಿ. ಮೊದಲ ಬಾರಿಗೆ ಆ ಶಬ್ದವನ್ನು ಕೇಳಿದವರು ನಾವು. ಹೊರಗೆ ಕಾಲಿಡದೇ ಮನೆಯಲ್ಲೇ ಕೂತು ಕಾಲ ಕಳೆಯಲು ಅದೆಷ್ಟೋ ಬಗೆಯ ಮಾರ್ಗಗಳನ್ನು ಹುಡುಕುತ್ತಿದ್ದೆವು. ಒಂದೇ ಸಲಕ್ಕೆ ಒದಗಿಬಂದ ಗೃಹಬಂಧನ, ಕೆಲಸವೇ ಇಲ್ಲದ ನಿಷ್ಕ್ರಿಯತೆ, ಭವಿಷ್ಯದ ಬಗ್ಗೆ ಆತಂಕ ಇತ್ಯಾದಿಗಳನ್ನು ನಿಭಾಯಿಸಲು ಜನಪ್ರಿಯ ವೈದ್ಯರೂ ಸೇರಿದಂತೆ ಎಂತೆಂಥವರು ಅನೇಕ ಬಗೆಯ ಮನರಂಜನಾತ್ಮಕ ವಿಡಿಯೋಗಳನ್ನು ಮಾಡಲು ಪ್ರಾರಂಭಿಸಿದ್ದರು. ಇದುವರೆಗೆ ಸ್ಟೆತಾಸ್ಕೋಪ್ ಹಿಡಿದು ‘ಡಾಕ್ಟರೇ ಕೆಮ್ಮು’ ಎಂದಾಗೆಲ್ಲ ಔಷಧ ಬರೆದು ಕೊಡುತ್ತಿದ್ದ, ಆಪರೇಷನ್ ಥಿಯೇಟರ್​ಗಳಲ್ಲಿ ಗೌನ್ ಹಾಕಿಕೊಂಡು ಮಗುವನ್ನು ಹೊರತರುವ ದೇವತೆಗಳಂತೆ ಕಂಡುಬರುತ್ತಿದ್ದ ಫ್ಯಾಮಿಲಿ ವೈದ್ಯೆಯರು ಬಣ್ಣ-ಬಣ್ಣದ ವಿಚಿತ್ರ ಕಾಸ್ಟ್ಯೂಮ್ಳನ್ನು ಧರಿಸಿ ಡ್ಯಾನ್ಸ್ ಮಾಡುವುದನ್ನು ನೋಡಿ ಖುಶಿಯಿಂದ ಪುಳಕಿತರಾದ ನನ್ನಂಥವರು ತುಂಬ ಜನ ಇದ್ದರು. ಆದರೆ ಈ ಬಾರಿ ಅದೇ ಬಗೆಯ ಲಾಕ್​ಡೌನ್ ಆದರೂ ದಿನ ಕಳೆಯಲು, ಹೊತ್ತು ಕಳೆಯಲು ಹಾಗೊಂದು ವಿಡಿಯೋ ಮಾಡುವ ಧೈರ್ಯ ಯಾರಿಗಾದರೂ ಬರುವಂತಿದೆಯೆ? ಊಹೂಂ. ಎಷ್ಟು ಹೊತ್ತಿಗೆ, ಎಲ್ಲಿಂದ ಯಾರ ಸಾವಿನ ಸುದ್ದಿ ಬರುತ್ತದೆಯೋ ಎಂಬ ಸೂತಕದ ಛಾಯೆಯೇ ಮನಸ್ಸನ್ನು ಕವಿದುಕೊಂಡು ನಿಜಕ್ಕೂ ಮನಸ್ಸು ಮುದುಡಿ ಹೋಗಿದೆ. ಕವಿಗಳು, ಲೇಖಕರು, ಕಲಾವಿದರು ಚಿತ್ರಕಾರರು ಸ್ತಬ್ಧರಾಗಿದ್ದಾರೆ. ಯಾರೊಬ್ಬರೂ ಸದ್ಯದ ಪರಿಸ್ಥಿತಿ ಕುರಿತು ಹಾಸ್ಯ ಮಾಡುವ, ವಿಡಂಬಿಸುವ ಧೈರ್ಯ ತೋರಲಾರರು.

    ‘ದೇವ ನಿನ್ನ ಮಾಯೆಗಂಜಿ ನಡುಗಿ ಬಾಳುವೆ’ ಎಂಬಂತಾಗಿದೆ ಇಂದಿನ ಸ್ಥಿತಿ. ಆದರೂ ಕರೊನಾಂತಕ ಟಕಟಕ ಬಾಗಿಲು ಬಡಿಯುವ ಸದ್ದು ಕೇಳುತ್ತಿದ್ದರೂ, ಮನೆಯೊಳಗೆ ಧೈರ್ಯ ಮಾಡಿ ಕೂತು ಬದುಕು ಸಾಗಿಸುವ ಬಗೆಯನ್ನು ಯೋಚಿಸಲೇಬೇಕಾಗಿದೆ. ನಿರಂತರವಾಗಿ ಆತಂಕ, ಭಯ ಅನಿಶ್ಚಿತತೆ ಇತ್ಯಾದಿ ನಕಾರಾತ್ಮಕ ಗುಣಗಳನ್ನು ಉಸಿರಾಡುತ್ತ, ಅನುಭವಿಸುತ್ತ ಬಂದಾಗ ಅದು ನಮ್ಮ ದೇಹದ ಸಹಜ ಆರೋಗ್ಯದ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತದೆಯೋ.

    ದಿನವೂ ಸಂಜೆಯಾದಾಗ ಗಂಟಲು ಕೆರೆದಂತಾಗುವುದು, ಮೈ ಭಾರ ಎನಿಸುವುದು, ಕರೊನಾ ಬಂದೇ ಬಿಟ್ಟಿದೆ ಎಂದು ಭೀತಿಗೊಳಗಾಗುವುದು, ರಾತ್ರಿ ಕಳೆದು ಬೆಳಗಾದಾಗ ಹಕ್ಕಿಗಳ ಚಿಲಿಪಿಲಿ, ಪೇಪರಿನವನ ಹೆಜ್ಜೆ ಸಪ್ಪಳ, ತರಕಾರಿಯವರ ಕೂಗು ಇವೆಲ್ಲ ಕೇಳಿ ಬಂತೆಂದರೆ ಊಹೂಂ ಸತ್ತಿಲ್ಲ, ಬದುಕಿದ್ದೇನೆ ಇವತ್ತಿನ ದಿನ ನನ್ನದು ಎಂಬ ಕೃತಾರ್ಥ ಭಾವ ಬರುವಂಥ ದುರ್ಭರ, ಅನಿಶ್ಚಿತ ದಿನಗಳು ಇವು.

    ಇಂತಹ ನಿರಾಶಾದಾಯಕ ಮನಸ್ಥಿತಿಯಲ್ಲಿಯೂ ಅಲ್ಲಲ್ಲಿ ಪರೋಪಕಾರಿ ಮನಸ್ಸುಗಳು ತಮ್ಮ ಕೈಲಾದ ಸಹಾಯವನ್ನು ಮನುಕುಲಕ್ಕೆ ಒದಗಿಸಿ ಕೃತಾರ್ಥತೆ ಗಳಿಸಲು ಪಣತೊಟ್ಟಿವೆ. ಅನೇಕ ವೈದ್ಯರು ಸಾಂತ್ವನ ತುಂಬುವ, ಮಾರ್ಗದರ್ಶನ ನೀಡುವ ತಮ್ಮ ವೈದ್ಯಕೀಯ ಬದ್ಧತೆಯೊಂದಿಗೆ ವಿಡಿಯೋ ಮಾಡಿ ಬಿಡುತ್ತಿದ್ದಾರೆ. ಬೆಂಗಳೂರಿನಂಥ ನಗರಗಳಲ್ಲಿ ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿಯೇ ಆರೈಕೆ ಪಡೆಯುತ್ತಿರುವ ಕೋವಿಡ್ ರೋಗಿಗಳಿಗೆ ಉಚಿತವಾಗಿ ಊಟ, ತಿಂಡಿ ಒದಗಿಸುವ, ಔಷಧ ಹಾಗೂ ನಿತ್ಯದ ಸಾಮಾನುಗಳನ್ನು ಮನೆಬಾಗಿಲಿಗೆ ತಲುಪಿಸುವ ಯುವಕರ ಪಡೆಯೇ ಸಿದ್ಧವಾಗಿ ಕಾರ್ಯಪ್ರವೃತ್ತವಾಗಿವೆ. ಆನ್​ಲೈನ್ ಮೂಲಕ ಯೋಗ, ನೃತ್ಯ, ಸಂಗೀತ, ಆಪ್ತಸಮಾಲೋಚನೆ… ಹೀಗೆ ಹಲವು ವಿಧದಲ್ಲಿ ಅನೇಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಧೈರ್ಯ ಮೂಡಿಸಿ ಆಂತರಿಕ ಶಕ್ತಿ ವೃದ್ಧಿಸುವಂತೆ ಮಾಡುತ್ತಿರುವ ಅನೇಕ ಮಹನೀಯರಿಗೆ ನಾವು ಕೃತಜ್ಞರಾಗಿರಬೇಕು.

    ಮಂಗಳೂರಿನ ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ ಅವರು ದಿನಕ್ಕೆ 3 ಬಾರಿ ಒಂದೂವರೆ ಗಂಟೆಯ ಯೋಗವನ್ನು ಆನ್​ಲೈನ್​ನಲ್ಲಿ ಕಲಿಸುತ್ತಿ ದ್ದಾರೆ. ಧ್ಯಾನ, ಯೋಗ ಹಾಗೂ ಮುದ್ರೆಗಳ ಮೂಲಕ ಮನಸ್ಸಿನ ಆತಂಕವನ್ನು ಹೋಗಲಾಡಿಸುವ ಈ ಯೋಗ ತರಗತಿಗಳಿಗೆ ನಾನು ತಪ್ಪದೆ ಆನ್​ಲೈನ್ ಮೂಲಕ ಹಾಜರಾಗುತ್ತಿದ್ದೇನೆ. ಮಹಿಳೆಯರಿಗಾಗಿಯೇ ಸಂಜೆಯ ತರಗತಿ ಸಹ ಇದೆ. ಯೋಗದ ಒಂದು ಭಾಗವಾದ ಪ್ರಾಣಾ ಯಾಮವನ್ನು ಅವರು ಕಲಿಸುತ್ತ, ‘ದೀರ್ಘ ಶ್ವಾಸ ಒಳಗೆ ತೆಗೆದುಕೊಳ್ಳಿ, ಹೊರಗೆ ಬಿಡಿ’ ಎನ್ನುವಾಗ ಆಕ್ಸಿಜನ್​ಗಾಗಿ ಪರದಾಡುವ ಅನೇಕ ದುರ್ದೈವಿ ಜೀವಗಳ ಶ್ವಾಸಕೋಶಗಳು ಕಣ್ಮುಂದೆ ಬಂದಂತಾಗಿ ಕಣ್ಣು ಮಂಜಾಗುತ್ತದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಆಶಯ ವಾಕ್ಯದೊಂದಿಗೆ ಯೋಗ ತರಗತಿಗಳು ಮುಗಿದಾಗ ನಿತ್ಯವೂ ಒಂದು ಆಂತರಿಕ ಚೇತರಿಕೆ ಉಂಟಾಗುತ್ತದೆ. ದೇಶವನ್ನು ಕಾಯುತ್ತಿರುವ ಯೋಧರ ದೀರ್ಘಾಯುಷ್ಯಕ್ಕಾಗಿಯೇ ಇವರ ಯೋಗ ತರಗತಿಗಳಲ್ಲಿ ಒಂದು ಪ್ರತ್ಯೇಕ ಮುದ್ರಾ ಪ್ರಾರ್ಥನೆ ಸೇರಿಸಲಾಗಿದೆ. ಕೆಲವು ತಾಯಂದಿರ ಜೊತೆ ಚಿಕ್ಕಮಕ್ಕಳು ಕೂತು ಯೋಗಾನುಕರಣೆ ಮಾಡುವ ದೃಶ್ಯ ಮುದ ನೀಡುತ್ತದೆ. ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ತರಗತಿಗಳನ್ನು ನಡೆಸುವ ಈ ಯೋಗಗುರುವಿನಿಂದಾಗಿ ಅನೇಕರ ಕರೊನಾತಂಕ ಶಮನಗೊಂಡಿದೆ.

    ಮನೆಯಲ್ಲಿ ಕೂತ ಶಾಲಾಮಕ್ಕಳನ್ನು ಸಂಭಾಳಿಸುವ ತಾಯಂದಿರು ಪಡುವ ಕಷ್ಟ ಅಂತಿಂಥದ್ದಲ್ಲ. ಅವರನ್ನು ಟಿವಿ ಮುಂದೆ ಕೂಡಿಸುವುದೋ, ಮೊಬೈಲ್ ಕೊಟ್ಟು ಸುಮ್ಮನಾಗಿಸುವುದೋ ಮಾಡುವ ಬದಲು ಆಯಾ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಅವರನ್ನು ಮನರಂಜನೆ ಮೂಲಕ ಕ್ರಿಯಾಶೀಲರನ್ನಾಗಿಟ್ಟುಕೊಳ್ಳುವುದು ಇಂದಿನ ಅಗತ್ಯ. ಮೊನ್ನೆ ಹಳ್ಳಿಯ ವಿಶಾಲ ಅಂಗಳವೊಂದರಲ್ಲಿ ತೆಗೆದು ಹಂಚಿಕೊಂಡ ವಿಡಿಯೋವೊಂದು ಮನಸ್ಸನ್ನು ಆಕರ್ಷಿಸಿ ಬಿಟ್ಟಿತು. ನಾಲ್ಕೈದು ವರ್ಷದ ಪೋರಿಗೆ ಸೀರೆ ಉಡಿಸಿ ಅಜ್ಜಿಯ ಪಾತ್ರ ಹಾಕಿಸಿ ಅಂಗಳದಲ್ಲಿ ಓಡಾಡುತ್ತ ಮಾತನಾಡುವಂತೆ ಮಾಡಿದ ತಾಯಿ ಅಭಿನಂದನಾರ್ಹರು. ಆ ಮಗು ಸಾವಿತ್ರಜ್ಜಿಯನ್ನೇ ಮೈಯಲ್ಲಿ ಆಹ್ವಾನಿಸಿಕೊಂಡಂತೆ ಕೊಂಚ ಬಾಗಿ ಹಿಂದಕ್ಕೆ ಕೈ ಕಟ್ಟಿಕೊಂಡು, ದೊಡ್ಡವರ ಶೈಲಿಯಲ್ಲಿ ಓಡಾಡುತ್ತ ಮಾತನಾಡುವ ಪರಿ ಮುದ್ದು ತರಿಸುವಂತಿದೆ.

    ಈ ಸಾವಿತ್ರಜ್ಜಿ ಮನೆ-ಮನೆಯ ಅಂಗಳದಲ್ಲಿ ಓಡಾಡುತ್ತ ಅವರವರ ಮನೆಯ ಕರೊನಾ ಮುನ್ನೆಚ್ಚರಿಕೆ ಹೇಗಿದೆ ಎಂದು ಪರಿಶೀಲಿಸುವ ತನಿಖಾಧಿಕಾರಿಯಂತೆ ಕಾಣುತ್ತಾಳೆ. ‘ಸಾವಿತ್ರಜ್ಜಿ ಒಳಗೆ ಬಾರೇ. ಕೂತ್ಗ. ಸ್ವಲ್ಪ ಆಸ್ರಿಗೆ ಕುಡ್ಕಂಡು ಹೋಗೇ’ ಎಂದರೆ ‘ಇಲ್ಯಪ್ಪ ಈಗ ಯಾರ ಮನೀಗೂ ಒಳಗೆಲ್ಲ ಹೋಗಲಾಗ…’ ಎಂದು ಮಾಸ್ಕ್ ಧರಿಸಿಕೊಂಡೇ ಹಿತವಚನ ಹೇಳಿ ಹೋಗುವ ಈ ಅಜ್ಜಿ ನಗರಗಳಿಂದ ಹಳ್ಳಿಗೆ ವೈರಾಣುಗಳನ್ನು ಹೊತ್ತೊಯ್ದಿರುವ ಯುವಜನರಿಗೂ ‘ಒಂದು ವಾರವಾದ್ರೂ ಮನೆಯವರ ಜೊತೆಗೆ ಬೆರೆಯದೆ ಪ್ರತ್ಯೇಕ ವಾಸ ಮಾಡಿ’ ಎಂಬ ಕಿವಿಮಾತು ಹೇಳಿದ್ದಾಳೆ. ಮಕ್ಕಳಾಟವು ಚೆಂದ ಎಂಬಂತೆ ಸಾವಿತ್ರಜ್ಜಿ ಪಾತ್ರದ ಈ ಮುಗ್ಧ ಮಗುವಿನ ಅಭಿನಯವನ್ನು ನೋಡಿ ನನ್ನ ಆ ದಿನದ ಆತಂಕ ದೂರವಾಗಿ ಅನೇಕ ಬಂಧುಗಳಿಗೆ ಆ ವಿಡಿಯೋ ಕಳಿಸಿ, ‘ನಿಮ್ಮ ನಿಮ್ಮ ಮಕ್ಕಳು, ಮೊಮ್ಮಕ್ಕಳಿಂದ ಈ ಥರದ ತಮಾಷೆಯಂತೆ ತೋರುವ ಕ್ರಿಯಾತ್ಮಕ ಅಭಿನಯ, ಯಕ್ಷಗಾನ, ನಾಟಕವೋ ಏಕ ಪಾತ್ರಾಭಿನಯವೋ ಮಾಡಿಸಿ’ ಎಂದು ವಿನಂತಿಸಿದ್ದೇನೆ. ನಮ್ಮ ನಾಳೆಗಳನ್ನು ಮಕ್ಕಳಿಗಾಗಿ ಹಸಿರಾಗಿರಿಸುವ ಮುನ್ನೆಚ್ಚರಿಕೆಯನ್ನಂತೂ ನಾವು ತೆಗೆದುಕೊಂಡಿಲ್ಲ. ಅವರ ಮುಗ್ಧತೆಯಿಂದಲೇ ನಮ್ಮ ಆತಂಕವನ್ನು ಕಡಿಮೆ ಮಾಡಿಸುವ ಅವಕಾಶವನ್ನಾದರೂ ಸೃಷ್ಟಿಸಿಕೊಳ್ಳೋಣ.

    ಪರೀಕ್ಷೆಗಳು ಅನಿಶ್ಚಿತ ಕಾಲಕ್ಕೆ ಮುಂದೂಡಲ್ಪಟ್ಟು ತರಗತಿಗಳು ಇಲ್ಲದ ಯುವಕ-ಯುವತಿಯರ ಪಾಡು ಇನ್ನೂ ಶೋಚನೀಯ. ಅವರ ಹದಿಹರೆಯದ ಭಾವನೆಗಳಿಗೆ ಅವಕಾಶವೀಯುವ ಹೈಸ್ಕೂಲ್, ಕಾಲೇಜುಗಳು, ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದ ದುಗುಡ ದುಮ್ಮಾನಗಳು, ಅವರನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸಿನ ತಂದೆ-ತಾಯಿಗಳಿಗೂ ಒಗಟಾಗಿಯೇ ಕಾಣುತ್ತದೆ. ಇಂಥ ಯುವಕರು ಸ್ವಯಂಪ್ರೇರಿತರಾಗಿ ಸ್ವಯಂಸೇವಕರಾಗಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ವಿನೂತನ ಸಾರ್ಥಕ ಕಾರ್ಯವೊಂದರಲ್ಲಿ ತೊಡಗಿಕೊಳ್ಳಬಹುದು. ಅಸಹಾಯಕರ ಅಗತ್ಯಗಳಿಗೆ ನೆರವು ನೀಡುವುದು ಹಣಕಾಸಿನ ಮೂಲಕವೊಂದೇ ಅಲ್ಲ. ‘ನಿಮಗೆ ಏನು ಕಷ್ಟ ಇದೆ? ನಾವು ಕೈಜೋಡಿಸಬಹುದೆ?’ ಎಂದು ಕೇಳಿದರೂ ಅವರಿಗೆ ಅದೆಷ್ಟೋ ಸಮಾಧಾನ. ಅಂತೂ ಪರರನ್ನು ದೂಷಿಸುತ್ತ ಕೂಡುವ ಕಾಲ ಇದಲ್ಲ. ಇಂದು ಅವರಿಗೆ ನಾಳೆ ನಮಗೆ. ನಾವು ನಿಂತಿರುವ ಸರತಿ ಸಾಲು ಎಷ್ಟು ಉದ್ದವಿದೆ ಎಂಬುದು ನಮ್ಮ ಅದೃಷ್ಟಕ್ಕೆ ಸೇರಿದ ವಿಷಯ. ನಮ್ಮ ಕೈಲಾದಷ್ಟು ಕೈಲಾದ ರೀತಿಯಲ್ಲಿ ಸಹಜೀವಿಗಳಿಗೆ ಸಹಾಯ ಮಾಡೋಣ. ಈ ದಾರುಣ ಕಾಲದ ದುಮ್ಮಾನದ ದಿನಗಳನ್ನು ಸಹ್ಯವಾಗಿಸಿಕೊಳ್ಳೋಣ.

    (ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts