More

    ರೇಷನ್​ ಡೀಲರ್​ನಿಂದ ಆಧಾರ್​ ನಂ. ಬದಲಾವಣೆ ಹೇಗೆ ಸಾಧ್ಯ?: ಸರ್ಕಾರಕ್ಕೆ ಹೈಕೋರ್ಟ್​ ಪ್ರಶ್ನೆ!

    ಲಖನೌ: ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್​ಐಸಿ)ಕ್ಕೆ ಮಾತ್ರ ಅವಕಾಶವಿರುವಾಗ ತನ್ನ ಡೇಟಾ ಬೇಸ್​ನಲ್ಲಿ ಆಧಾರ್​ ನಂಬರ್ ಬದಲಾಯಿಸಲು ನ್ಯಾಯಬೆಲೆ ಅಂಗಡಿ ಡೀಲರ್​ಗೆ ಹೇಗೆ ಸಾಧ್ಯ? ಎಂದು ಉತ್ತರ ಪ್ರದೇಶದ ಅಲಹಬಾದ್​ ಹೈಕೊರ್ಟ್​ ಮಹತ್ವದ ಪ್ರಶ್ನೆಯೊಂದನ್ನು ಸರ್ಕಾರದ ಮುಂದಿಟ್ಟಿದೆ.

    ನ್ಯಾಯಮೂರ್ತಿ ಮನೋಜ್​ ಕುಮಾರ್​ ಗುಪ್ತಾ ನೇತೃತ್ವದ ಏಕಸದಸ್ಯ ಪೀಠವು ಉತ್ತರ ಪ್ರದೇಶ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡಿದೆ. ಖಾಸಗಿ ವ್ಯಕ್ತಿಯೊಬ್ಬ ಹೇಗೆ ತಾನೇ ಕೇಂದ್ರ ಸರ್ಕಾರ ನಿರ್ವಹಿಸುವ ಡೇಟಾವನ್ನು ಬದಲಾಯಿಸಲು ಸಾಧ್ಯ? ಎಂದು ಪ್ರಶ್ನಿಸಿ, ಈ ಸಂಬಂಧ ವೈಯಕ್ತಿಕ ಅಫಿಡೆವಿಟ್​ ಸಲ್ಲಿಸಿ, ವಿವರಣೆ ನೀಡುವಂತೆ ಕೇಳಿದೆ.

    ಫಲಾನುಭವಿಗಳ ಆಧಾರ್​ ಮಾಹಿತಿ ಬದಲಾವಣೆ ಆರೋಪದಡಿಯಲ್ಲಿ ಜಿಲ್ಲಾಡಳಿತ ನ್ಯಾಯಬೆಲೆ ಅಂಗಡಿ ವ್ಯಾಪಾರಿ ಅವಧೇಶ್​ ಕುಮಾರ್​ ಎಂಬುವರ ಪರವಾನಗಿಯನ್ನು ರದ್ದು ಮಾಡಿತ್ತು. ಇದನ್ನು ಪ್ರಶ್ನಿಸಿ, ಅವಧೇಶ್​ ಹೈಕೋರ್ಟ್​ನಲ್ಲಿ ರಿಟ್​ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಅಫಿಡೆವಿಟ್​ ಸಲ್ಲಿಸಲು ಹೇಳಿದೆ.

    ಇದನ್ನೂ ಓದಿ: ‘ನನ್ನ ಗಂಡನ ಹೆಸರು ತುಂಬ ಉದ್ದ…ನನ್ನ ಬೆರಳು ಸಣ್ಣ…’: ಅಲವತ್ತುಕೊಂಡ ಕಿರುತೆರೆ ನಟಿ

    ಡೀಲರ್​ ವಿರುದ್ಧದ ಆರೋಪವೇನು?
    ಅಪರಿಚಿತ ಟೆಕ್ನಿಕಲ್​ ಆಪರೇಟರ್​ನಿಂದ ನ್ಯಾಯಬೆಲೆ ಅಂಗಡಿ ಡೀಲರ್​, ಫಲಾನುಭವಿಗಳು ಆಧಾರ್​ ಕಾರ್ಡ್​ ನಂಬರ್ ಬದಲಾಯಿಸಿ, ಫಲಾನುಭವಿಯಲ್ಲದ ಇತರೆ ವ್ಯಕ್ತಿಗಳ ಬಯೋಮೆಟ್ರಿಕ್ ಬಳಸಿ ಅಗತ್ಯ ವಸ್ತುಗಳನ್ನು ವಿತರಣೆ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಆತನ ಪರವಾನಗಿಯನ್ನು ಜಿಲ್ಲಾಡಳಿತ ರದ್ದು ಮಾಡಿರುವುದಾಗಿ ತಿಳಿದುಬಂದಿದೆ.

    ಇದೀಗ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದನ್ನು ಪ್ರಶ್ನಿಸಿರುವ ಕೋರ್ಟ್​ ಆಧಾರ್​ ಮಾಹಿತಿ ಬದಲಾವಣೆ ಅವಕಾಶ ಎನ್​ಐಸಿಗೆ ಮಾತ್ರ ಇರುವಾಗ ನ್ಯಾಯಬೆಲೆ ಅಂಗಡಿ ಡೀಲರ್​ ಹೇಗೆ ಬದಲಾಯಿಸಲು ಸಾಧ್ಯವೆಂದು ಪ್ರಶ್ನಿಸಿದೆ. ಡೇಟಾ ಗೌಪ್ಯತೆ ದೃಷ್ಟಿಯಿಂದ ಕೋರ್ಟ್ ಕೇಳಿರುವ ಈ​ ಪ್ರಶ್ನೆ ಮಹತ್ವದ್ದಾಗಿದೆ.

    ತಾಂತ್ರಿಕವಾಗಿ ಅಸಾಧ್ಯ
    ತನ್ನ ವಿರುದ್ಧದ ಆರೋಪವನ್ನು ಅಲ್ಲಗೆಳೆದಿರುವ ಡೀಲರ್​, ಅಧಾರ್​ ಬದಲಾವಣೆ ತಾಂತ್ರಿಕವಾಗಿ ಅಸಾಧ್ಯವಾಗಿರುವಾಗ ಮತ್ತು ಅಪೂರ್ಣ ಮಾಹಿತಿ ಆಧಾರದ ಮೇಲೆ ನನ್ನ ವಿರುದ್ಧ ಆರೋಪ ಮಾಡಲಾಗಿದೆ ಎಂದು ಅರ್ಜಿದಾರ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.

    ಆಧಾರ್​ ನಂಬರ್​ ಬದಲಾಯಿಸಲು ಎನ್​ಐಸಿ ಹೊರತುಪಡಿಸಿ ಯಾರಿಗೂ ಸಾಧ್ಯವಿಲ್ಲ ಎಂಬುದು ಕೋರ್ಟ್​ ಗಮನಕ್ಕೂ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಫಿಡೆವಿಟ್​ ಸಲ್ಲಿಸಿ, ವಿವರಣೆ ನೀಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕೋರ್ಟ್​ ಸೂಚಿಸಿದ್ದು, ಅಕ್ಟೋಬರ್​ 22ಕ್ಕೆ ವಿಚಾರಣೆ ಮುಂದೂಡಿದೆ. (ಏಜೆನ್ಸೀಸ್​)

    ‘ಮರಕ್ಕೆ ಹೆಣ್ಣು ಹುಲಿಯ ಭಾವನಾತ್ಮಕ ಅಪ್ಪುಗೆ…’: ಪ್ರಶಸ್ತಿ ವಿಜೇತ ಅದ್ಭುತ ಫೋಟೋ ಇದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts