More

    ಕರೊನಾ ನಿಯಂತ್ರಣಕ್ಕೆ ದೆಹಲಿ ಮಾಡಿದ್ದೇನು?

    ಕರೊನಾ ಮಹಾಮಾರಿಯಿಂದ ತತ್ತರಿಸಿ ‘ಐಸಿಯು’ ಸೇರಿದ್ದ ರಾಜಧಾನಿ ದೆಹಲಿ ಈಗ ಸಮಾಧಾನದ ಉಸಿರು ಬಿಡುತ್ತಿದೆ. ದೆಹಲಿಯ ಕರೊನಾ ನಿಯಂತ್ರಣ ಕ್ರಮಗಳ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಒಂದು ಸರ್ಕಾರವಾಗಿ, ಕರೊನಾ ಸವಾಲನ್ನು ಮೆಟ್ಟಿನಿಂತ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ವಿಜಯವಾಣಿ ದೆಹಲಿ ಪ್ರತಿನಿಧಿ ರಾಘವ ಶರ್ಮ ನಿಡ್ಲೆ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    # ಕರೊನಾ ನಿಯಂತ್ರಣದಲ್ಲಿ ದೆಹಲಿ ಮಾದರಿ ಬಗ್ಗೆ ಚರ್ಚೆಯಾಗುತ್ತಿದೆ. ಈ ಸವಾಲನ್ನು ಹೇಗೆ ಎದುರಿಸಿದಿರಿ?

    ಲಾಕ್​ಡೌನ್ ಅಂತ್ಯಗೊಂಡ ನಂತರ ಇಲ್ಲಿ ಕೇಸುಗಳು ಜಾಸ್ತಿಯಾದವು. ಇದನ್ನು ನಿರೀಕ್ಷಿಸಿದ್ದೆವು ಕೂಡ. ಆದರೆ, ಕಳೆದೆರಡು ತಿಂಗಳಲ್ಲಿ ಚಿತ್ರಣವೇ ಬದಲಾಗಿದೆ. ಸದ್ಯ ದಿಲ್ಲಿಯಲ್ಲಿ ಕೇವಲ 10 ಸಾವಿರ ಸಕ್ರಿಯ ಕರೊನಾ ಪ್ರಕರಣಗಳಿವೆ. ಮೊದಲಿಗೆ 2ನೇ ಸ್ಥಾನದಲ್ಲಿದ್ದ ನಾವೀಗ 14ನೇ ಸ್ಥಾನಕ್ಕೇರಿದ್ದೇವೆ. ಕರೊನಾ ಚೇತರಿಕೆ ಪ್ರಮಾಣ ಶೇಕಡ 90ರಷ್ಟಿದೆ. ಸರ್ಕಾರಿ ಆಸ್ಪತ್ರೆಗಳ ಶೇ.80ರಷ್ಟು ಬೆಡ್​ಗಳೀಗ ಖಾಲಿಯಿವೆ. ಇದು ಸಾಧ್ಯವಾಗಿದ್ದು 3 ಕಾರಣಗಳಿಂದ. ಮೊದಲನೆಯದಾಗಿ, ಒಂದು ತಂಡವಾಗಿ ಕೆಲಸ ಮಾಡಿದೆವು. ಕೇಂದ್ರ ಸರ್ಕಾರ, ಧಾರ್ವಿುಕ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ಸೇರಿ ದೆಹಲಿಯ ಜನರಿಂದ ಸಹಕಾರ ಕೋರಿದೆವು. ಎರಡನೆಯದಾಗಿ, ಟೀಕೆಗಳನ್ನು ಸ್ವೀಕರಿಸಿದೆವು ಮತ್ತು ತಪು್ಪಗಳನ್ನು ಸರಿಪಡಿಸಿಕೊಂಡೆವು. ಮೂರನೆಯದಾಗಿ, ಏನೇ ಕಷ್ಟಬಂದರೂ ನಮ್ಮ ಯತ್ನ ಬಿಡಲಿಲ್ಲ. ಕರ್ನಾಟಕದ ಆರೋಗ್ಯ ಸಚಿವ ಶ್ರೀರಾಮುಲು ‘ದೇವರೇ ನಮ್ಮನ್ನು ಕಾಪಾಡಬೇಕು’ ಎಂದಿದ್ದರು. ಅವರ ಆತಂಕ ಅರ್ಥವಾಗುತ್ತದೆ. ಹಾಗಂತ, ಒಂದು ಸರ್ಕಾರ ವಾಗಿ ನಾವು ಸುಮ್ಮನಿರಲು ಸಾಧ್ಯವಿಲ್ಲ.

    # ಜೂನ್​ನಲ್ಲಿ ದಿನಕ್ಕೆ 4 ಸಾವಿರ ಕೇಸುಗಳು ವರದಿಯಾಗುತ್ತಿದ್ದವು. ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ನಿಮ್ಮ ಕೆಲಸ ಸುಲಭವಾಯ್ತು ಎಂದನಿಸುವುದಿಲ್ಲವೇ?

    ಇಂಥದ್ದೊಂದು ಮಹಾಮಾರಿ ವಿರುದ್ಧ ಸರ್ಕಾರವೊಂದು ಏಕಾಂಗಿಯಾಗಿ ಹೋರಾಡಲಾಗುವುದಿಲ್ಲ. 4 ಸಾವಿರ ಕೇಸುಗಳಿದ್ದಾಗ ನಾನು ಅನೇಕ ತಜ್ಞರನ್ನು ಭೇಟಿ ಮಾಡಿದೆ. ಕೇಂದ್ರ ಸೇರಿ ಎಲ್ಲರ ನೆರವನ್ನೂ ಕೇಳಿದೆ ಮತ್ತು ಸಕಾರಾತ್ಮಕವಾಗಿ ಸ್ಪಂದಿಸಿದರು ಕೂಡ. ಅವರೆಲ್ಲರಿಗೂ ನಾನು ಆಭಾರಿ.

    # ಕರೊನಾ ನಿಯಂತ್ರಣಕ್ಕೆ ಸಾಧ್ಯವಾದ ಪ್ರಮುಖ ಕಾರಣಗಳು ಯಾವುವು?

    ನಾವು ಹೋಮ್ ಐಸೊಲೇಷನ್​ಗೆ (ಮನೆಯಲ್ಲೇ ಪ್ರತ್ಯೇಕವಾಗಿರುವುದು) ಹೆಚ್ಚಿನ ಮಹತ್ವ ಕೊಟ್ಟೆವು. ಸೋಂಕಿನ ಸಣ್ಣ ಲಕ್ಷಣವಿದ್ದವರಿಗೆ ಮನೆಯಲ್ಲೇ ಉತ್ತಮ ಚಿಕಿತ್ಸೆ ಕೊಡಲಾಯಿತು. ಹೋಮ್ ಐಸೊಲೇಷನ್​ನಲ್ಲಿದ್ದವರಿಗೆ ಉಚಿತವಾಗಿ ಆಕ್ಸಿಮೀಟರ್​ಗಳನ್ನು (ಉಸಿರಾಟ ಪರೀಕ್ಷೆ ಉಪಕರಣ) ನೀಡಿದೆವು. ಹಾಗೇ, ದೊಡ್ಡ ಪ್ರಮಾಣದ ಕೋವಿಡ್ ಕೇರ್ ಸೆಂಟರ್​ಗಳನ್ನೂ ತೆರೆಯಲಾಯಿತು. ದಿಲ್ಲಿ ಕರೊನಾ ಆಪ್ ಮೂಲಕ ಬೆಡ್​ಗಳ ಲಭ್ಯತೆ ಕುರಿತ ಮಾಹಿತಿ ಜನರಿಗೆ ಸಿಗುತ್ತಿತ್ತು. 13500 ಕರೊನಾ ಬೆಡ್​ಗಳಲ್ಲಿ ಈಗ 3000 ಮಾತ್ರ ಭರ್ತಿಯಾಗಿವೆ. ಎಲ್ಲ ಕಡೆಯೂ ಕರೊನಾ ಟೆಸ್ಟಿಂಗ್ ಕ್ಯಾಂಪ್​ಗಳನ್ನು ನಡೆಸಿದೆವು. 10 ಲಕ್ಷದಲ್ಲಿ ಅಂದಾಜು 56 ಸಾವಿರ ಮಂದಿಗೆ ಪರೀಕ್ಷೆ ನಡೆಸಿದ್ದೇವೆ. ಬೇರೆಲ್ಲ ರಾಜ್ಯಗಳಿಗಿಂತ ಹೆಚ್ಚು ಕರೊನಾ ಪರೀಕ್ಷೆಗಳನ್ನು ನಾವು ಕೈಗೊಂಡಿದ್ದೇವೆ. ಹಾಗೇ, ತ್ವರಿತಗತಿಯಲ್ಲಿ ಆಂಬುಲೆನ್ಸ್ ಸೇವೆಗಳನ್ನು ನೀಡುವ ಜತೆಗೆ ಪ್ಲಾಸ್ಮಾ ದಾನದ ಜಾಗೃತಿಯನ್ನೂ ಜನರಲ್ಲಿ ಮೂಡಿಸಿದೆವು.

    # ಕರೊನಾ ಮತ್ತೆ ಆಕ್ರಮಿಸಿದರೂ ಅಚ್ಚರಿಯಿಲ್ಲ. ಹೀಗಿರುವಾಗ, ನಿಮ್ಮ ತಯಾರಿ ಹೇಗಿದೆ?

    ದೆಹಲಿಯೀಗ ಸುರಕ್ಷಿತವಾಗಿದೆ. ಆದರೂ, ಜಾಗರೂಕತೆ ಅಗತ್ಯ. ಲಸಿಕೆ ಬರುವ ತನಕ ಮಾಸ್ಕ್ ಧರಿಸಿ, ದೈಹಿಕ ಅಂತರ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವಂತಹ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

    # ದೆಹಲಿ ಜನರು ಸರ್ಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಂಡಿದ್ದೇಕೆ?

    ಜನ ಖಾಸಗಿ ಆಸ್ಪತ್ರೆಗಳಿಗೆ ಏಕೆ ಆದ್ಯತೆ ನೀಡುತ್ತಾರೆ ಎಂಬುದಕ್ಕೆ 2 ಕಾರಣಗಳಿವೆ. ಮೊದಲನೆಯದಾಗಿ, ಸರ್ಕಾರಿ ಆಸ್ಪತ್ರೆ ಮತ್ತು ಶಾಲೆಗಳು ಈಗಲೂ ಕೆಟ್ಟ ಸ್ಥಿತಿಯಲ್ಲಿವೆ ಎಂಬ 70 ವರ್ಷದ ಹಿಂದಿನ ಮನಸ್ಥಿತಿ ಈಗಲೂ ಇದೆ. 5 ವರ್ಷಗಳಲ್ಲಿ ಇದನ್ನು ಬದಲಾಯಿಸಲು ನಾವು ಯತ್ನಿಸಿದ್ದೇವೆ. ದಿಲ್ಲಿ ಸರ್ಕಾರಿ ಶಾಲೆಗಳು ಉತ್ತಮವಾಗಿವೆ ಎಂಬುದನ್ನೀಗ ಎಲ್ಲರೂ ಒಪು್ಪತ್ತಾರೆ. ಆದರೆ, ಆಸ್ಪತ್ರೆ ವಿಷಯದಲ್ಲಿ ಖಾಸಗಿಗೆ ಆದ್ಯತೆ ನೀಡುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಸ್ಥಿತಿ ಜನರನ್ನು ಚಿಂತೆಗೆ ದೂಡಿದೆ. ದೆಹಲಿಯ ಲೋಕನಾಯಕ ಜಯಪ್ರಕಾಶ ನಾರಾಯಣ ಆಸ್ಪತ್ರೆಯ ನ್ಯೂನತೆ ಮಾಧ್ಯಮದಲ್ಲಿ ಬಯಲಾಯ್ತು. ಬಳಿಕ ಅದನ್ನು ಸರಿಪಡಿಸಿದೆವು. ಅದೇ ಮಾಧ್ಯಮಗಳೀಗ ಆಸ್ಪತ್ರೆ ರೂಪಾಂತರಗೊಂಡ ಬಗ್ಗೆ ವರದಿ ಮಾಡುತ್ತಿವೆ.

    # ಕರೊನಾ ನಿಯಂತ್ರಣಕ್ಕೆ ಲಾಕ್​ಡೌನ್ ಒಳ್ಳೆಯ ಪರಿಹಾರ ಎಂದನಿಸುತ್ತದೆಯೇ?

    ಕರೊನಾ ನಿಯಂತ್ರಣಕ್ಕೆ ದೆಹಲಿಗೆ ಮತ್ತೊಂದು ಲಾಕ್​ಡೌನ್ ಬೇಕಾಗಲಿಲ್ಲ ಎಂಬುದು ನನಗೆ ಹೆಮ್ಮೆಯ ವಿಷಯ. ಕೇಸುಗಳು ಜಾಸ್ತಿಯಾದರೂ ಲಾಕ್​ಡೌನ್​ನ್ನು ನಾವು ಜಾರಿ ಮಾಡಲಿಲ್ಲ. ಇದು ತಾತ್ಕಾಲಿಕ ಪರಿಹಾರ ಆಗಬಹುದು ಅಷ್ಟೇ. ಕರೊನಾ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ಮಾರ್ಗದರ್ಶಕನಂತೆ ಕೆಲಸ ಮಾಡಬೇಕು. ಕೆಲ ವಿಚಾರಗಳನ್ನು ರಾಜ್ಯಗಳ ವಿವೇಚನೆಗೆ ಬಿಟ್ಟು ಬಿಡಬೇಕು.

    # ಲಾಕ್​ಡೌನ್ ವೇಳೆ ಸಾವಿರಾರು ವಲಸಿಗರು ದೆಹಲಿ ಬಿಟ್ಟರು. ತಮ್ಮ ವೋಟ್​ಬ್ಯಾಂಕ್ ಆಗಿದ್ದರೂ ಅವರನ್ನು ತಡೆವಲ್ಲಿ ಕೇಜ್ರಿವಾಲ್ ವಿಫಲರಾದರು ಎಂಬ ಆರೋ ಪವೂ ಇದೆ. ಈಗ ಕೆಲವರು ವಾಪಸಾಗುತ್ತಿದ್ದು, ಅವರ ನೆರವಿಗೆ ನಿಮ್ಮ ಕ್ರಮಗಳೇನು?

    ವಲಸೆ ಕಾರ್ವಿುಕರು ದೆಹಲಿ ಆರ್ಥಿಕತೆಯ ಬೆನ್ನೆಲುಬು. ಲಾಕ್​ಡೌನ್ ಸಮಯದಲ್ಲಿ ಅವರ ನೆರವಿಗೆಂದೇ 1,100 ಆಹಾರ ಪೂರೈಕೆ ಕೇಂದ್ರ ಸ್ಥಾಪಿಸಿ, ದಿನಕ್ಕೆ 10 ಲಕ್ಷಕ್ಕೂ ಹೆಚ್ಚು ಮಂದಿಗೆ 2 ಹೊತ್ತಿನ ಊಟ ಒದಗಿಸಿದ್ದೆವು. ಈಗ ಅವರ ಅತಿದೊಡ್ಡ ಬೇಡಿಕೆ ಎಂದರೆ ಉದ್ಯೋಗ. ಇದೇ ವೇಳೆ ದೆಹಲಿಯಲ್ಲಿ ಉದ್ಯಮ ಮರು ಆರಂಭಿಸಿರುವ ಅನೇಕರು ಕಾರ್ವಿುಕರು ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಇದಕ್ಕಾಗಿಯೇ ನಾವು jobs.delhi.gov.in ಮೂಲಕ “Rozgar Bazaar” ನೌಕರಿ ವೇದಿಕೆಯನ್ನು ಆರಂಭಿಸಿದ್ದೇವೆ. ಇಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡು, ಪರಸ್ಪರ ಅವಶ್ಯಕತೆಗಳ ಬಗ್ಗೆ ರ್ಚಚಿಸಿಕೊಂಡು ಪರಿಹಾರ ಕಂಡುಕೊಳ್ಳಬಹುದು. ಕೇವಲ ಒಂದೇ ವಾರದಲ್ಲಿ 5282 ಉದ್ಯೋಗದಾತರು 8,71,450 ನೌಕರಿ ಖಾಲಿ ಇರುವ ಬಗ್ಗೆ ಮಾಹಿತಿ ನೀಡಿದ್ದರೆ, 7,58,286 ಮಂದಿ ನೌಕರಿಗಾಗಿ ನೋಂದಾಯಿಸಿಕೊಂಡಿದ್ದಾರೆ.

    # ಗಡಿಯಲ್ಲಿ ಚೀನಾ ಸೇನೆ ಭಾರತವನ್ನು ಸಂಘರ್ಷಕ್ಕಾಗಿ ಪ್ರಚೋದಿಸುತ್ತಿರುವ ಬಗ್ಗೆ ನಿಮ್ಮ ಅನಿಸಿಕೆಯೇನು?

    ಚೀನಾ ನಮ್ಮ ಭೂಮಿ ವಶಪಡಿಸಿಕೊಂಡಿದೆ. ಸರ್ಕಾರ ಕೈಗೊಂಡಿರುವ ಕೆಲ ಕ್ರಮಗಳ ಹೊರತಾಗಿಯೂ ತನ್ನ ನೆಲವನ್ನು ವಾಪಸ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಮತ್ತಷ್ಟು ಕಠಿಣ ನಿಲುವುಗಳನ್ನು ಪ್ರದರ್ಶಿಸಬೇಕು. ಆಮದಿನ ವಿಷಯದಲ್ಲಿ ಭಾರತ ಈಗಲೂ ಚೀನಾವನ್ನು ಅವಲಂಬಿಸುವುದು ಸರಿಯಲ್ಲ. ಆಟಿಕೆಗಳು, ದೇವರ ವಿಗ್ರಹಗಳೂ ಚೀನಾದಿಂದ ಬರುತ್ತಿದೆ ಎಂದರೆ ಏನರ್ಥ? ದೈನಂದಿನ ಅಗತ್ಯಗಳಿಗಾಗಿ ಕೂಡ ಸರಕುಗಳನ್ನು ನಾವು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಇನ್ನಾದರೂ ಕೇಂದ್ರ ತನ್ನ ನೀತಿ ಬದಲಿಸಬೇಕಿದೆ. ನಮ್ಮ ದೇಶದ ಅಗತ್ಯ ಸರಕುಗಳ ಬಗ್ಗೆ ಪಟ್ಟಿ ಮಾಡಿ, ದೇಶೀ ಉತ್ಪಾದನಾ ವಲಯ ವಿಸ್ತರಿಸಬೇಕು. ಆ ಮೂಲಕ ಆರ್ಥಿಕತೆ ಬಲಗೊಳಿಸಬೇಕು.

    # ರಾಜಕೀಯ ಬಿಕ್ಕಟ್ಟಿನಲ್ಲಿ ರಾಜಸ್ಥಾನ ನಲುಗಿದೆ. ಇದು ಕಾಂಗ್ರೆಸ್​ನ ಆಂತರಿಕ ಸಮಸ್ಯೆಯೋ ಬಿಜೆಪಿ ಪ್ರೇರಿತ ಪ್ರಹಸನವೋ?

    ಗಡಿಯಲ್ಲಿ ಚೀನಾ ತಂಟೆ ಮತ್ತು ದೇಶಾದ್ಯಂತ ಕರೊನಾ ಮಹಾಮಾರಿ ಆವರಿಸಿರುವ ಮಧ್ಯೆ ದೇಶದ 2 ರಾಷ್ಟ್ರೀಯ ಪಕ್ಷಗಳು ರಾಜಸ್ಥಾನದಲ್ಲಿ ಅಧಿಕಾರಕ್ಕಾಗಿ ಕಿತ್ತಾಡುತ್ತಿವೆ. ಕರೊನಾದಿಂದ ಮತ್ತು ಚೀನಾ ಜತೆ ಸಮಸ್ಯೆ ಬಗೆಹರಿಸಿಕೊಳ್ಳಲು ಕೇಂದ್ರ ಸರ್ಕಾರ, ಬಿಜೆಪಿ ಮುಂದಾಗಬೇಕಿತ್ತು. ಆದರೆ, ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ. ದೇಶದಲ್ಲಿ ಮುಖ್ಯ ವಿರೋಧ ಪಕ್ಷವಾಗಬೇಕಿದ್ದ ಕಾಂಗ್ರೆಸ್ ಈಗ ಸತ್ತು ಹೋಗಿದೆ. ಇಂಥ ಸನ್ನಿವೇಶದಲ್ಲಿ ಖಂಡಿತ ಪರ್ಯಾಯ ಶಕ್ತಿಯ ಉಗಮವಾಗಲಿದೆ. ಅದಕ್ಕೆ ಕಾಲವೇ ಉತ್ತರಿಸಲಿದೆ.

    # ಹೋಮ್ ಐಸೊಲೇಷನ್ ಜನರಿಗೆ ನೆರವಾಗಿದ್ದು ಹೇಗೆ?

    ದೆಹಲಿಯ ಶೇಕಡ 90ಕ್ಕೂ ಹೆಚ್ಚು ಕರೊನಾ ಸೋಂಕಿತರಲ್ಲಿ ಯಾವುದೇ ರೋಗಲಕ್ಷಣಗಳಿರಲಿಲ್ಲ. ಅಂಥವರಲ್ಲಿ ಹಲವರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದರು. ಕರೊನಾ ರೋಗಿ ಎದುರಿಸುತ್ತಿದ್ದ ಸಮಸ್ಯೆ ಎಂದರೆ ಆಮ್ಲಜನಕದಲ್ಲಿ ಹಠಾತ್ ಕುಸಿತ. ಆಮ್ಲಜನಕ ಮಟ್ಟ 90ಕ್ಕೆ ಇಳಿದರೆ ಗಂಭೀರವೆಂದು, 85ಕ್ಕಿಳಿದರೆ ಅತಿ ಗಂಭೀರವೆಂದೂ ಪರಿಗಣಿಸಲಾಗುತ್ತದೆ. ರೋಗಲಕ್ಷಣವಿಲ್ಲದ ಅನೇಕರಲ್ಲಿ ಆಮ್ಲಜನಕ ಮಟ್ಟ ತೀವ್ರವಾಗಿ ಕುಸಿದಿತ್ತು ಮತ್ತು ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಮೃತಪಟ್ಟರು. ಇದನ್ನು ಗಮನದಲ್ಲಿಟ್ಟುಕೊಂಡೇ ಮನೆಯಲ್ಲಿ ಪ್ರತ್ಯೇಕವಾಗಿರುವ ರೋಗಿಗಳಿಗೆ ಆಕ್ಸಿಮೀಟರ್​ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆವು. ಇದರಿಂದ ಆಮ್ಲಜನಕ ಮಟ್ಟವನ್ನು ಅವರೇ ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಹೋಮ್ ಐಸೊಲೇಷನ್ ಮಾದರಿಯನ್ನು ಈಗ ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳೂ ಅನುಸರಿಸುತ್ತಿರುವುದು ಸಂತೋಷದ ವಿಷಯ.

    # ಕರ್ನಾಟಕದಲ್ಲಿ ನಿಮ್ಮ ಪಕ್ಷದ ವಿಸ್ತರಣೆಗೆ ಯೋಜನೆ ಏನಿದೆ?

    ನಮ್ಮ ರಾಜಕೀಯ ಮತ್ತು ಆಡಳಿತದ ಸ್ವರೂಪವನ್ನು ದೇಶದ ಎಲ್ಲ ಭಾಗಗಳಿಗೆ ಕೊಂಡೊಯ್ಯಬೇಕೆಂಬ ಆಶಯವಿದೆ. ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆಯಲ್ಲಿ ನಾವೂ ಸ್ಪರ್ಧಿಸಲಿದ್ದೇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts