More

    ನಿಡುವಾಳೆ ಸುತ್ತಮುತ್ತ ಬಿಡಾಡಿ ದನಗಳ ಕಾಟಕ್ಕೆ ಬೇಸತ್ತ ಎಸ್ಟೇಟ್ ಮಾಲೀಕರು

    ಬಣಕಲ್: ನಿಡುವಾಳೆ ಸುತ್ತಮುತ್ತ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಹೆದ್ದಾರಿ, ಅಂಗಡಿ ಮುಂಗಟ್ಟು, ಶಾಲಾ ಆವರಣ ಎಲ್ಲೆಂದರಲ್ಲಿ ಬೀಡುಬಿಟ್ಟಿರುತ್ತವೆ.

    ಮರ್ಕಲ್ ಶಾಲೆ, ನಿಡುವಾಳೆ ಮುಖ್ಯರಸ್ತೆ, ಅಕ್ಕಪಕ್ಕದ ಕಾಫಿತೋಟಗಳಲ್ಲಿ ಬಿಡಾಡಿ ದನಗಳ ಕಾಟ ಹೆಚ್ಚಾಗಿದೆ. ನಿಡುವಾಳೆ, ಕಲ್ಕಕ್ಕಿ ಎಸ್ಟೇಟ್ ಸೇರಿ ಸುತ್ತಮುತ್ತಲಿನ ಕಾಫಿತೋಟಗಳಲ್ಲಿ ಬಿಡಾಡಿ ದನಗಳು ಹಿಂಡು ಹೊಸದಾಗಿ ನೆಟ್ಟ ಕಾಫಿ, ಕಾಳುಮೆಣಸಿನ ಸಸಿಗಳನ್ನು ತುಳಿದು ಹಾನಿ ಮಾಡುತ್ತಿವೆ. ತೋಟದ ಮಾಲೀಕರು ಹೊರಗಟ್ಟಿದರೂ ಪುನಃ ತೋಟದತ್ತ ಮುಖ ಮಾಡುತ್ತಿವೆ. ಕೆಲ ತೋಟದ ಮಾಲೀಕರು ಇವುಗಳ ಕಾಟ ತಾಳಲಾರದೆ ಕಟ್ಟಿ ಹಾಕಿ, ಅವುಗಳಿಗೆ ಮೇವು ಹಾಕಲಾಗದೆ ಪುನಃ ಬಿಟ್ಟಿದ್ದಾರೆ.

    ಬೀದಿ ದಿನಗಳ ದಾಳಿಯಿಂದ ಕೆಲವರು ಗಾಯಗೊಂಡಿದ್ದಾರೆ. ಉರುವಿನ ಖಾನ್​ನ ಕಾರ್ವಿುಕ ರಮೇಶ್ ಏಪ್ರಿಲ್​ನಲ್ಲಿ ನಿಡುವಾಳೆಗೆ ಹೋಗಿದ್ದ ಸಂದರ್ಭ ಹುಚ್ಚು ಹಿಡಿದ ಬಿಡಾಡಿ ದನವೊಂದು ದಾಳಿ ಮಾಡಿದೆ. ರಮೇಶ್ ಕಾಲಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಕೆಲಸಕ್ಕೂ ಹೋಗಲಾಗದೆ ಹಾಸಿಗೆ ಹಿಡಿದಿದ್ದಾರೆ.

    ಬಿಡಾಡಿ ದನಗಳನ್ನು ಏನು ಮಾಡಬೇಕು ಎಂಬುದು ಎಸ್ಟೇಟ್ ಮಾಲೀಕರಿಗೆ ಮತ್ತು ಗ್ರಾಮಸ್ಥರಿಗೆ ತಲೆನೋವಾಗಿದೆ. ಕೆಲವು ದನಗಳಿಗೆ ವಾರಸ್ದಾರರಿದ್ದಾರೆ. ಅವು ಕರು ಹಾಕಿ ಹಾಲು ಕೊಡುವ ಸಂದರ್ಭ ಮಾತ್ರ ಮನೆಗೆ ಕರೆದ್ಯೊಯುತ್ತಾರೆ. ಹಾಲು ಕೊಡುವುದನ್ನು ನಿಲ್ಲಿಸಿದ ನಂತರ ಮತ್ತೆ ಬೀದಿಗೆ ಬಿಡುತ್ತಾರೆ.

    ಈ ಹಿಂದೆ ಹೆಚ್ಚಾಗಿ ಮನೆಗಳಲ್ಲಿ ದನಗಳನ್ನು ಸಾಕುತ್ತಿದ್ದು ಗೋಮಾಳಗಳು ಹೆಚ್ಚಾಗಿದ್ದವು. ಗೋಮಾಳದಲ್ಲಿ ಮೇಯುತ್ತಿದ್ದುದರಿಂದ ಹಸುಗಳನ್ನು ಸಾಕುವುದು ಸುಲಭವಾಗಿತ್ತು. ಆದರೆ ಒತ್ತುವರಿ, ಕೃಷಿ ಭೂಮಿಗಳ ಹೆಚ್ಚಳ ಮತ್ತಿತರ ಕಾರಣದಿಂದ ಗೋಮಾಳಗಳೇ ಇಲ್ಲದಂತಾಗಿದೆ. ಅಲ್ಲದೆ ಹಸುಗಳನ್ನು ಸಾಕುವುದು ಕೂಡ ಕಡಿಮೆಯಾಗಿದೆ.

    ಬಿಡಾಡಿ ದನಗಳ ಕಾಟ ತಾಳಲಾರದೆ ಕೆಲ ತೋಟದ ಮಾಲೀಕರು ಬಾಳೂರು ಠಾಣೆಗೆ ದೂರು ನೀಡಿ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದರೆ ಮತ್ತೆ ಕೆಲ ಎಸ್ಟೇಟ್ ಮಾಲೀಕರು ಹಸುಗಳನ್ನು ವಾಹನದಲ್ಲಿ ತುಂಬಿ ದೂರದ ಅರಣ್ಯಗಳಿಗೆ ಬಿಡುತ್ತಿದ್ದಾರೆ. ಹೀಗೆ ಅರಣ್ಯಕ್ಕೆ ಬಿಟ್ಟು ಬರುವುದರಿಂದ ಹಸುಗಳು ವನ್ಯಪ್ರಾಣಿಗಳಿಗೆ ಬಲಿಯಾಗುವ ಸಾಧ್ಯತೆ ಇದೆ. ಸ್ಥಳೀಯ ಆಡಳಿತ ಬಿಡಾಡಿ ದನಗಳ ಕಾಟ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts