More

    ಮನೆ, ಗುಡಿಸಲಿಗೆ ತಗುಲಿದ ಬೆಂಕಿ

    ತೇರದಾಳ: ತಾಲೂಕಿನ ಹನಗಂಡಿ ಗ್ರಾಮದ ಸರಾದಾರ ವಸ್ತಿ ಪ್ರದೇಶದ ರಸ್ತೆಯಲ್ಲಿ ಶನಿವಾರ ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಟ್ರಾೃಕ್ಟರ್ ಟ್ರಾೃಲಿಯಲ್ಲಿನ ಕಬ್ಬಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡು ರಸ್ತೆ ಪಕ್ಕದ ಸಿದ್ರಾಮ ದೇವಪ್ಪ ಕಿತ್ತೂರ ಅವರ ಮನೆಗೂ ವ್ಯಾಪಿಸಿದ್ದರಿಂದ ವಿವಿಧ ಸಾಮಾನುಗಳು ಬೆಂಕಿಗಾಹುತಿಯಾಗಿವೆ.

    ಹಾಗೆಯೇ ಮುಂದಕ್ಕೆ ಸಂಚರಿಸಿದ ಟ್ರಾೃಕ್ಟರ್‌ನಿಂದಾಗಿ ಅಕ್ಕಪಕ್ಕದ ಹುಲ್ಲಿನ ಬಣವಿಗಳಿಗೆ ಬೆಂಕಿ ತಗುಲಿ ಭಸ್ಮವಾಗಿವೆ. ತಿಪ್ಪಣ್ಣ ಈಶ್ವರ ಪುಟಾಣಿ ಅವರ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಸ್ಥಳೀಯ ರೈತರು ನಂದಿಸಲು ಯತ್ನಿಸಿದರೂ ಫಲಪ್ರದವಾಗಲಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು. ಗ್ರಾಮ ಆಡಳಿತಾಧಿಕಾರಿ ಬಸವರಾಜ ಗುಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ತಪ್ಪಿದ ಭಾರಿ ಅನಾಹುತ

    ಕಿತ್ತೂರ ಅವರ ಮನೆಯಲ್ಲಿ ಮಕ್ಕಳು ಸೇರಿ ಐದಾರು ಜನರು ವಾಸವಾಗಿದ್ದಾರೆ. ಮಧ್ಯಾಹ್ನ ಬಿಸಿಲಿನ ತಾಪಕ್ಕೆ ಪತ್ರಾಸ್ ಮನೆಯಿಂದ ಮುಂಭಾಗದಲ್ಲಿರುವ ಗಿಡದ ನೆರಳಿನಲ್ಲಿ ಕುಟುಂಬ ಸದಸ್ಯರು ಕುಳಿತುಕೊಂಡ ಸಂದರ್ಭದಲ್ಲಿ ಈ ಘಟನೆ ನಡೆದಿದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ. ಕಿತ್ತೂರ ಅವರ ಮನೆಯಲ್ಲಿದ್ದ ಕಬ್ಬಿನ ಬಿಲ್ ಅಂದಾಜು 8 ಲಕ್ಷ ರೂ. ನಗದು ಹಾಗೂ ಹತ್ತು ತೊಲ ಬಂಗಾರ ಸುಟ್ಟು ಕರಕಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಏನಿದು ಸಮಸ್ಯೆ?

    ಸರಾದಾರ ವಸ್ತಿ ಪ್ರದೇಶದಲ್ಲಿರುವ ಇಕ್ಕಟ್ಟಾದ ರಸ್ತೆ ಅಕ್ಕಪಕ್ಕದಲ್ಲಿ ಅಂದಾಜು ಹದಿನೈದು ವಿದ್ಯುತ್ ಕಂಬಗಳಿವೆ. ರಸ್ತೆಯಲ್ಲಿ ಸಾಗುವ ಟ್ರಾೃಲಿಯಲ್ಲಿನ ಕಬ್ಬಿಗೆ ನಿಲುಕುವಷ್ಟು ಹತ್ತಿರದಲ್ಲಿ ತಂತಿ ಇವೆ. ಸದರಿ ತಂತಿಗಳಿಂದ ವಿದ್ಯುತ್ ಅವಘಡ ಆಗುತ್ತಿದೆ. ಎಲ್ಲ ಕಂಬಗಳನ್ನು ರಸ್ತೆಯ ಒಂದೇ ಬದಿಯಲ್ಲಿ ಸ್ಥಳಾಂತರಿಸುವಂತೆ ಎರಡ್ಮೂರು ಬಾರಿ ಮನವಿ ಕೊಟ್ಟರೂ ಹೆಸ್ಕಾಂನವರು ನಿರ್ಲಕ್ಷಿಸಿದ್ದಾರೆ. ಈಗ ಬೆಂಕಿ ಅವಘಡ ಆಗಿದ್ದು, ರೈತ ಕುಟುಂಬಗಳು ನಷ್ಟ ಅನುಭವಿಸುವಂತಾಗಿದೆ. ಘಟನೆ ಬಳಿಕವೂ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಇನ್ಮುಂದೆ ಕ್ರಮ ವಹಿಸದಿದ್ದರೆ ಬೀದಿಗಿಳಿದು ಪ್ರತಿಭಟನೆ ಮಾಡಲಾಗುವುದು ಎಂದು ಹನಗಂಡಿ ಗ್ರಾಮದ ಮುಖಂಡ ಅನೀಲ ಗುಬಚಿ ಎಚ್ಚರಿಕೆ ನೀಡಿದ್ದಾರೆ.

    ಹನುಮಂತ ಬಿ.ಪಾಟೀಲ, ಬಸಪ್ಪ ಬಿ.ಪಾಟೀಲ, ಮಹಾವೀರ ಬಿದರಿ, ಕರೆಪ್ಪ ದಳವಾಯಿ, ಈರಪ್ಪ ಹುದ್ದಾರ, ಗಿರಮಲ್ಲ ಪಾಟೀಲ, ಗಂಗಪ್ಪ ಕಿತ್ತೂರ, ಜಯಶ್ರೀ ಕಿತ್ತೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts