More

    ಮನೆ ಬಾಗಿಲಿಗೆ ಬರಲಿದ್ದಾಳೆ ಗೃಹಲಕ್ಷ್ಮೀ

    ಬಳ್ಳಾರಿ: ಕಾಂಗ್ರೆಸ್ ಸರ್ಕಾರದ ನಾಲ್ಕನೇ ಗ್ಯಾರಂಟಿ ‘ಗೃಹಲಕ್ಷ್ಮೀ’ ಯೋಜನೆಗೆ ಚಾಲನೆ ದೊರಕಿದ್ದು, ಅರ್ಜಿ ಸಲ್ಲಿಸಲು ಅಲೆದಾಡುವ ಅಗತ್ಯವಿಲ್ಲ. ಪ್ರತಿದಿನ ಸರ್ಕಾರದಿಂದಲೇ ಮನೆ ಯಜಮಾನಿಯ ಮೊಬೈಲ್‌ಗೆ ಸಂದೇಶ ಬರಲಿದ್ದು, ಸಮೀಪದ ಸೇವಾ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಬಹುದಾಗಿದೆ. ಜಿಲ್ಲೆಯಲ್ಲಿ ಮೊದಲ ದಿನವೇ 17 ಸಾವಿರ ಮಹಿಳೆಯರು ನೊಂದಾಯಿಸಿದ್ದಾರೆ.

    ಸರ್ಕಾರ ಅನ್ನಭಾಗ್ಯ, ಶಕ್ತಿ ಹಾಗೂ ಗೃಹಜ್ಯೋತಿ ಯೋಜನೆ ಬಳಿಕ ಮತ್ತೊಂದು ಮಹತ್ವಾಕಾಂಕ್ಷೆ ಯೋಜನೆ ‘ಗೃಹಲಕ್ಷ್ಮೀ’ಗೆ ಚಾಲನೆ ನೀಡಿದ್ದು, ರಾಜ್ಯದ ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸಲು ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ಆರ್ಥಿಕ ಬೆಂಬಲ ಒದಗಿಸಲು ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ.

    ಗೃಹಿಣಿಯರು, ಭೂ ರಹಿತ ಮಹಿಳೆಯರು ಮತ್ತು ಕೃಷಿ ಕಾರ್ಮಿಕ ಮಹಿಳೆಯರುಅರ್ಹರಾಗಿದ್ದಾರೆ. ಸದುಪಯೋಗಪಡಿಸಿಕೊಳ್ಳಲು ಇಲಾಖೆ ಅಧಿಕಾರಿಗಳು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.


    ಮೊದಲ ದಿನವೇ 17 ಸಾವಿರ ನೋಂದಣಿ: ಜಿಲ್ಲೆಯಲ್ಲಿ ಒಟ್ಟು 3.45 ಲಕ್ಷ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. 26,191 ಅಂತ್ಯೋದಯ ಕಾರ್ಡ್, 2,75,309 ಬಿಪಿಎಲ್ ಕಾರ್ಡ್ ಹಾಗೂ 43,786 ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿಯರಿದ್ದಾರೆ. ಅವರಿಗೆ ಮಾಸಿಕ 2 ಸಾವಿರ ರೂ. ನೀಡಲು ಉದ್ದೇಶಿಸಿದ್ದು, ಬಡ ಕುಟುಂಬಗಳಿಗೆ ನೆರವಾಗಲಿದೆ. ಮೊದಲ ದಿನವೇ 18 ಸಾವಿರ ಗ್ರಾಮೀಣ ಭಾಗದ ಮಹಿಳೆಯರಿಗೆ ನೋಂದಣಿ ಮಾಡಿಕೊಳ್ಳಲು ಸಂದೇಶ (ಎಸ್‌ಎಂಎಸ್)ರವಾನಿಸಲಾಗಿದೆ. ಅದರಲ್ಲಿ 17,040 ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ.

    ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 480, ಬಾಪೂಜಿ ಸೇವಾ ಕೇಂದ್ರ 6 ಸಾವಿರ, ಗ್ರಾಮ ಒನ್ ಕೇಂದ್ರ 8,820, ಕರ್ನಾಟಕ ಒನ್ ಕೇಂದ್ರ 960, ಕಂಪ್ಲಿ ಪುರಸಭೆ ವ್ಯಾಪ್ತಿ 120, ಕುಡತಿನಿ ತಾಪಂ ವ್ಯಾಪ್ತಿ 60, ಕುರುಗೋಡು 120, ಸಂಡೂರು 120, ಸಿರಗುಪ್ಪ 240, ತೆಕ್ಕಲಕೋಟೆ ತಾಪಂ ವ್ಯಾಪ್ತಿಯಲ್ಲಿ 60 ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: https://www.vijayavani.net/forest-act-amendment-opposition

    ಪರದಾಟ ತಪ್ಪಿಸಲು ಕ್ರಮ: ಫಲಾನುಭವಿಗಳು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಸೇವಾ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ನೀಡಲಾಗಿದೆ. ಪ್ರತಿ ಕೇಂದ್ರಗಳಲ್ಲಿ ನಿತ್ಯ 60 ಜನ ಮಹಿಳೆಯರ ನೋಂದಣಿಗೆ ಅವಕಾಶ ಇದೆ. ಜಿಲ್ಲೆಯಲ್ಲಿ ಒಟ್ಟು 151 ಗ್ರಾಮ ಒನ್ ಸೇವಾ ಕೇಂದ್ರಗಳು, 10 ಕರ್ನಾಟಕ ಒನ್, 100 ಬಾಪೂಜಿ ಸೇವಾ ಕೇಂದ್ರ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್‌ವಾರು ನ್ಯಾಯಬೆಲೆ ಅಂಗಡಿಯಲ್ಲಿ ಒಟ್ಟು 75 ಕೇಂದ್ರ ತೆರೆಯಲಾಗಿದೆ.

    ಪ್ರತಿ ನೋಂದಣಿಗೆ ಸರ್ಕಾರದಿಂದಲೇ ಸೇವಾ ಕೇಂದ್ರಗಳಿಗೆ 12 ರೂ. ನಂತೆ ಪಾವತಿಸುತ್ತದೆ. ಅದರ ಜತೆಗೆ ಪ್ರಜಾಪ್ರತಿನಿಧಿಗಳನ್ನು ನಿಯೋಜಿಸಲಾಗುತ್ತಿದ್ದು, ಸಾವಿರ ಜನಸಂಖ್ಯೆ ಹೊಂದಿರುವ ಕಡೆಗಳಲ್ಲಿ ಇಬ್ಬರನ್ನು ನೇಮಕ ಮಾಡಲಾಗುತ್ತದೆ. ಅವರು ಸ್ವಯಂ ಪ್ರೇರಿತರಾಗಿ ಸರ್ಕಾರದ ಯೋಜನೆ ಜನರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡುತ್ತಾರೆ.

    ಫಲಾನುಭವಿಗಳು ಏನು ಮಾಡಬೇಕು ?: ಗೃಹಲಕ್ಷ್ಮೀ ಯೋಜನೆಯಡಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ವೇಳಾಪಟ್ಟಿ ಬರಲಿದೆ. ಅರ್ಜಿ ಸಲ್ಲಿಸುವ ದಿನಾಂಕ, ಸಮಯ ಹಾಗೂ ಸ್ಥಳದ ಬಗ್ಗೆ ಮೊಬೈಲ್‌ಗೆ ಸಂದೇಶ ಬರಲಿದೆ.ನಂತರ ಸಮೀಪದ ಸೇವಾ ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಫಲಾನುಭವಿಗಳು ವೇಳಾಪಟ್ಟಿ ತಿಳಿಯಲು 1902 ನಂಬರ್‌ಗೆ ಕರೆ ಮಾಡಬಹುದು. ಇಲ್ಲವೇ ಮೊ.8147500500 ಗೆ ಪಡಿತರ ಸಂಖ್ಯೆ ಟೈಫ್ ಮಾಡಿ ಎಸ್‌ಎಂಎಸ್ ಮಾಡಿದ ಮೇಲೆ ವೇಳಾಪಟ್ಟಿ ಬರಲಿದೆ. ಬಳಿಕ ನಿಗದಿತ ದಿನಾಂಕದಂದು ಸೇವಾ ಕೇಂದ್ರಕ್ಕೆ ತೆರಳಿ ನೋಂದಾಯಿಸಿಕೊಳ್ಳಬಹುದಾಗಿದೆ.

    ಸೈಬರ್ ಸೆಂಟರ್‌ಗಳಿಂದ ಸುಲಿಗೆ ?: ಗೃಹಲಕ್ಷ್ಮೀ ಯೋಜನೆ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವುದು ಜಿಲ್ಲೆಯಲ್ಲಿ ನಡೆಯುತ್ತಿದೆ. ಪ್ರತಿ ಅರ್ಜಿಗೆ 10 ರೂ. ಪಡೆಯುತ್ತಿರುವ ಮಾಹಿತಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಯಾವುದೇ ಸೈಬರ್ ಸೆಂಟರ್‌ಗಳಲ್ಲಿ ಅರ್ಜಿ ನಮೂನೆ ನೀಡಿ ಹಣ ಪಡೆಯುತ್ತಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಸೈಬರ್ ಸೆಂಟರ್‌ನಲ್ಲಿ ಫಲಾನುಭವಿಗಳಿಂದ 10 ರೂ. ಪಡೆದು ಅರ್ಜಿ ವಿತರಿಸುತ್ತಿದ್ದ ಬಗ್ಗೆ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಫಲಾನುಭವಿಗಳು ಆನ್‌ಲೈನ್‌ನಲ್ಲೇ ಅರ್ಜಿಸಲ್ಲಿಸಬೇಕು ಎಂದು ಬಳ್ಳಾರಿ ಸಿಡಿಪಿಒ ನಾಗರಾಜ್ ಮಾಹಿತಿ ನೀಡಿದ್ದಾರೆ

    • ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಗ್ರಾಮ ಒನ್ ಸೇರಿದಂತೆ ಸಮೀಪದ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಮಹಿಳೆಯರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.
      ವಿಜಯಕುಮಾರ್
      ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

    ತಾಲೂಕು ಫಲಾನುಭವಿಗಳ ಸಂಖ್ಯೆಬಳ್ಳಾರಿ ನ. 1,00,544
    ಬಳ್ಳಾರಿ ಗ್ರಾ. 55,889
    ಸಂಡೂರು 57,994
    ಸಿರಗುಪ್ಪ 69,361
    ಕುರುಗೋಡು 28,498

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts