More

    ಅವಿಭಕ್ತ ಕುಟಂಬದ ಮನೆ ಬೆಂಕಿಗಾಹುತಿ

    ವಿಜಯವಾಣಿ ಸುದ್ದಿಜಾಲ ಹೊನ್ನಾವರ

    ತಾಲೂಕಿನ ಮಾಳ್ಕೋಡದಲ್ಲಿ ಅಗ್ನಿ ಅವಘಡ ಸಂಭವಿಸಿ ಮನೆಯೊಂದು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಶನಿವಾರ ನಸುಕಿನಲ್ಲಿ ನಡೆದಿದೆ.

    ಮಹತ್ವದ ದಾಖಲೆಪತ್ರಗಳು ಹಾಗೂ ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿ ಹಾನಿಗೀಡಾಗಿವೆ. ಮಾಳ್ಕೋಡ ಮೋಟೇಕೇರಿಯ 36 ಸದಸ್ಯರನ್ನೊಳಗೊಂಡ ಅವಿಭಕ್ತ ಕುಟಂಬ ವಾಸಿಸುತ್ತಿದ್ದ ಅಣ್ಣಯ್ಯ ಸಣ್ಕುಸ ಗೌಡ ಅವರ ಮನೆ ಬೆಂಕಿಗಾಹುತಿಯಾಗಿದೆ. ಮನೆಗೆ ಬೆಂಕಿ ಬಿದ್ದಿರುವುದು ನಿದ್ರಾವಸ್ಥೆಯಲ್ಲಿದ್ದ ಕುಟುಂಬ ಸದಸ್ಯರ ಗಮನಕ್ಕೆ ಬರುತ್ತಿದ್ದಂತೆ ಎಲ್ಲರೂ ಹೊರಗೆ ಓಡಿ ಬಂದಿದ್ದಾರೆ. ಹೀಗಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ.

    ಮನೆಯಲ್ಲಿದ್ದ ಮಹತ್ವದ ದಾಖಲೆ ಪತ್ರಗಳು, ಬಟ್ಟೆ, ಆಹಾರ ಪದಾರ್ಥಗಳು, ಅಡಕೆ, ತೆಂಗಿನ ಕಾಯಿ, ಇಲೆಕ್ಟ್ರಾನಿಕ್ಸ್ ಉಪಕರಣಗಳು ಸಂಪೂರ್ಣ ಅಗ್ನಿಗಾಹುತಿಯಾಗಿವೆ.

    ಪದವಿ ಪ್ರಮಾಣ ಪತ್ರ ಸುಟ್ಟು ಕರಕಲು: ಮನೆಯ ಸದಸ್ಯೆ ಪ್ರಿಯಾ ನಾರಾಯಣ ಗೌಡ ಅವರ ಪದವಿ ಪ್ರಮಾಣ ಪತ್ರ, ವಿದ್ಯಾರ್ಥಿಗಳಾದ ಜೀವನ ನಾಗಪ್ಪ ಗೌಡ, ಸುಪ್ರಿಯಾ ಗಣಪಯ್ಯ ಗೌಡ, ಸುಪ್ರಿತಾ ಗಣಪಯ್ಯ ಗೌಡ ಅವರ ಪಠ್ಯ-ಪುಸ್ತಕ, ಪರಿಕರಗಳು ಸುಟ್ಟು ಕರಕಲಾಗಿವೆ.

    ಸಂಭ್ರಮದಲ್ಲಿದ್ದವರಿಗೆ ಆಘಾತ: ಫೆ. 16ರಂದು ಮನೆಯ ಸದಸ್ಯ ಗಂಗಾಧರ ಗೌಡ ಅವರ ಮದುವೆ ನಡೆದಿತ್ತು. ಮದುವೆ ಚಪ್ಪರ ಹಾಗೇ ಇತ್ತು. ಈ ಸಂಭ್ರಮದಲ್ಲೇ ಇದ್ದ ಕುಟುಂಬಕ್ಕೆ ಬೆಂಕಿ ಅವಘಡ ದೊಡ್ಡ ಆಘಾತವುಂಟು ಮಾಡಿದೆ. ಉಡುಗೊರೆ ಸಾಮಾನುಗಳು ಸುಟ್ಟುಕರಕಲಾಗಿವೆ. ಮದುವೆಗೆ ಆಗಮಿಸಿದ್ದ ನೆಂಟರಿಷ್ಟರು ಸಹ ಮನೆಯಲ್ಲಿದ್ದರು. ಸಂಭ್ರಮದಲ್ಲಿರಬೇಕಾದ ಕುಟುಂಬ ಕಣ್ಣೀರು ಹಾಕುವಂತಾಗಿದೆ.

    ಅಧಿಕಾರಿಗಳು, ಜನಪ್ರತಿನಿಧಿಗಳ ಭೇಟಿ: ಸ್ಥಳಕ್ಕೆ ಶಾಸಕ ಸುನೀಲ್ ನಾಯ್ಕ, ಸಹಾಯಕ ಆಯುಕ್ತ ಸಾಜಿದ್ ಮುಲ್ಲಾ, ಸಿಪಿಐ ವಸಂತ ಆಚಾರಿ, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯುತ್ ಶಾರ್ಟ್ ರ್ಸಟ್​ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಮಂಕಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts