More

    ಮಾಲ್‌ಗಳಲ್ಲಿ ಖರೀದಿ ಸಂಭ್ರಮವಿಲ್ಲ

    ಮಂಗಳೂರು: ಲಾಕ್‌ಡೌನ್ ಬಳಿಕ ಸೋಮವಾರ ನಗರದ ಮಾಲ್‌ಗಳು ತೆರೆದುಕೊಂಡರೂ ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಿತ್ತು.
    ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಸಿಟಿ ಸೆಂಟರ್, ಫೋರಂ ಮಾಲ್, ಎಂಪೈರ್ ಮಾಲ್‌ಗಳಲ್ಲಿ ಬಹುತೇಕ ಎಲ್ಲ ಕಡೆ ಒಂದೇ ಪರಿಸ್ಥಿತಿ ಇತ್ತು.

    ಮಳಿಗೆಗಳು ತೆರೆದಿತ್ತಾದರೂ ಅಲ್ಲಿ ಜನರ ಓಡಾಟ ವಿರಳ. ಸಾಯಂಕಾಲ ವೇಳೆಗೆ ಪರಿಸ್ಥಿತಿ ತುಸು ಚೇತರಿಸಿತು.
    ಎಸ್ಕಲೇಟರ್‌ಗಳು ಖಾಲಿ ಸುತ್ತುತ್ತಿದ್ದವು. ಮಾಲ್ ಒಳಗೆ ಇದ್ದವರಲ್ಲೂ ಹೆಚ್ಚಿನವರು ಗೆಳೆಯರು, ಗೆಳತಿಯರ ಜತೆ ಕಾಲ ಕಳೆಯಲು ಬಂದವರು. ಖರೀದಿಯ ಸಂಭ್ರಮ ಕಂಡುಬರಲಿಲ್ಲ. ಹೆಚ್ಚಿನ ಮಳಿಗೆಗಳಲ್ಲಿ ವ್ಯಾಪಾರಸ್ಥರು ತಮ್ಮ ಮಾರಾಟದ ವಸ್ತುಗಳ ಧೂಳು ಕೊಡವಿ ವ್ಯಾಪಾರಕ್ಕೆ ಸಿದ್ದಗೊಳ್ಳುತ್ತಿರುವುದು ಕಂಡುಬಂತು. ಮಾಲ್ ಪ್ರವೇಶಿಸುವ ಎಲ್ಲ ದ್ವಾರಗಳಲ್ಲೂ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಇತ್ತು. ದೊಡ್ಡ ವ್ಯಾಪಾರ ಮಳಿಗೆಗಳಲ್ಲಿ ಸ್ಕಾೃನಿಂಗ್, ಸ್ಯಾನಿಟೈಸರ್ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಮಳಿಗೆಗಳಿಗೆ ಭೇಟಿ ನೀಡುವ ಗ್ರಾಹಕರ ಹೆಸರು, ಮೊಬೈಲ್ ಸಂಖ್ಯೆ ದಾಖಲಿಸಲಾಗುತ್ತಿತ್ತು. ಇಂದು ಗ್ರಾಹಕರ ಭೇಟಿ ಅತ್ಯಂತ ಕಡಿಮೆ ಇದೆ. ಮಾಲ್ ಮಳಿಗೆಗಳ ವ್ಯಾಪಾರ ಚೇತರಿಸಿಕೊಳ್ಳಲು ಕಾಲಾವಕಾಶ ಬೇಕು ಅನಿಸುತ್ತದೆ ಎಂದು ಸಿಟಿ ಸೆಂಟರ್‌ನ ಸೂಪರ್ ಮಾರ್ಕೆಟ್ ಒಂದರ ಎಕ್ಸಿಕ್ಯೂಟಿವ್ ಗಣೇಶ್ ಪ್ರತಿಕ್ರಿಯಿಸಿದರು. ಮಧ್ಯಾಹ್ನ ಬಳಿಕ ಮಾಲ್‌ಗೆ ಭೇಟಿ ನೀಡುವವರ ಸಂಖ್ಯೆ ಅಧಿಕಗೊಂಡಿತು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿಕೊಳ್ಳಲಿದೆ ಎಂದು ಫೋರಂ ಮಾಲ್ ಮ್ಯಾನೇಜರ್ ಸುನಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಉಡುಪಿಯಲ್ಲೂ ಖಾಲಿ ಖಾಲಿ
    ಉಡುಪಿಯಲ್ಲಿ ಮಾಲ್‌ಗಳಲ್ಲಿ ಬ್ರಾಂಡೆಡ್ ಶಾಪ್‌ಗಳು, ಇಲೆಕ್ಟ್ರಾನಿಕ್ ಮಳಿಗೆ ತೆರೆದು ವ್ಯಾಪಾರ ಆರಂಭಿಸಿವೆ. ಆದರೆ ಗ್ರಾಹಕರ ಸಂಖ್ಯೆ ಕಡಿಮೆ. ಮಾಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಉದ್ಯೋಗಿಗಳ ಕೆಲಸಕ್ಕೆ ಕತ್ತರಿ ಬಿದ್ದಿದೆ. ಶೂ, ಚಪ್ಪಲಿ, ಬಟ್ಟೆ, ಸೌಂದರ್ಯವರ್ಧಕ, ಇಲೆಕ್ಟ್ರಾನಿಕ್ ಅಂಗಡಿ ಮಳಿಗೆಗಳಲ್ಲಿ ಬೆರಳಣಿಕೆಯಷ್ಟೇ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ವ್ಯಾಪಾರ ವಹಿವಾಟು ಕುದುರಲು ಇನ್ನೂ ಒಂದು ತಿಂಗಳು ಸಮಯ ಬೇಕಾಗಬಹುದು ಎನ್ನುತ್ತಾರೆ ಮಳಿಗೆ ವ್ಯಾಪಾರಿಗಳು. ಸೂಪರ್ ಮಾರ್ಕೆಟ್‌ಗಳು ತೆರೆದುಕೊಂಡಿದ್ದರೂ ಅಲ್ಲಿಯೂ ಜನ ಸಂಖ್ಯೆ ವಿರಳವಾಗಿತ್ತು.

    ಹೋಟೆಲ್‌ಗಳಿಗೆ ಗ್ರಾಹಕರ ಕೊರತೆ
    ದ.ಕ.ಹಾಗೂ ಉಡುಪಿ ಜಿಲ್ಲೆಯ ಹಲವು ಹೋಟೆಲ್‌ಗಳಲ್ಲಿ ಗ್ರಾಹಕರ ಕೊರತೆ ಕಂಡುಬಂತು. ಇನ್ನೊಂದೆಡೆ ಉದ್ಯಮವನ್ನು ಕಾರ್ಮಿಕರ ಕೊರತೆ ಕಾಡಿತು. ಹಲವು ಹೋಟೆಲ್‌ಗಳು ಬಾಗಿಲು ತೆರೆಯಲೇ ಇಲ್ಲ. ಕೆಲವು ಕಡೆ ಇನ್ನೂ ಪಾರ್ಸೆಲ್ ನೀಡುವುದಕ್ಕಷ್ಟೇ ವ್ಯವಹಾರ ಸೀಮಿತವಾಗಿತ್ತು. ಕೆಲವೊಂದು ಹೋಟೆಲ್‌ಗಳು ಜನರ ಸ್ಪಂದನೆ ತಿಳಿಯಲು ಕನಿಷ್ಠ ಆಹಾರ ವಸ್ತುಗಳೊಂದಿಗೆ ಕಾರ್ಯಾರಂಭಿಸಿದ್ದರೆ ಕೆಲವು ಕಡೆಯಲ್ಲಿ ಎಂದಿನಂತೆಯೇ ಕಾರ್ಯಾಚರಿಸಿದವು. ಬೆಳಗ್ಗಿನ ಹೊತ್ತಿಗೆ ಖಾಲಿ ಇದ್ದ ಹೋಟೆಲ್ ಮಧ್ಯಾಹ್ನ ಊಟದ ಸಮಯಕ್ಕೆ ಸ್ವಲ್ಪ ಗ್ರಾಹಕರನ್ನು ಕಂಡವು. ಇದುವರೆಗೆ ಬಂದ್ ಇದ್ದ ಕಾರಣ ಏಕಾಏಕಿ ತೆರೆದ ಕೂಡಲೇ ಬರುವುದು ಕಷ್ಟ, ಜನರ ಸಂಖ್ಯೆ ಏರಿಕೆಯಾಗುವುದಕ್ಕೆ ಇನ್ನೂ ಕೆಲ ದಿನ ಬೇಕಾಗಬಹುದು ಎಂದು ಮಂಗಳೂರು ನಗರದ ಹೋಟೆಲ್ ಕ್ಯಾಷಿಯರ್ ಒಬ್ಬರು ಅಭಿಪ್ರಾಯಪಟ್ಟರು. ತೆರೆಯಲಾದ ಬಹುತೇಕ ಹೋಟೆಲ್‌ಗಳಲ್ಲಿ ಟೇಬಲ್‌ಗಳ ನಡುವಿನ ಅಂತರ ಹೆಚ್ಚಿಸಿದ್ದು ಟೇಬಲ್‌ಗೆ ಇರಿಸುವ ಕುರ್ಚಿಗಳ ಸಂಖ್ಯೆಯನ್ನೂ ಕಡಿಮೆ ಮಾಡಲಾಗಿತ್ತು. ಉಡುಪಿಯಲ್ಲಿಯೂ ಇಷ್ಟು ದಿನ ಪಾರ್ಸೆಲ್ ಸೇವೆ ನೀಡುತ್ತಿದ್ದ ಹೊಟೆಲ್‌ಗಳು ಸೋಮವಾರ ಬಾಗಿಲು ತೆಗೆದಿದ್ದರೂ ಗ್ರಾಹಕರ ಸಂಖ್ಯೆ ತೀರ ಕಡಿಮೆಯಿತ್ತು. ಅಂತರ ಪಾಲಿಸಬೇಕಾಗಿರುವುದರಿಂದ ಒಂದು ಟೇಬಲ್‌ನಲ್ಲಿ ಇಬ್ಬರು-ಮೂವರಿಗೆ ಅವಕಾಶ ಕೊಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts