More

    ಉರಿ ಬಿಸಿಲು ನೆತ್ತಿ ಸುಡುತ್ತಿದೆ

    ರಾಣೆಬೆನ್ನೂರ: ಬೇಸಿಗೆ ಹಿನ್ನೆಲೆಯಲ್ಲಿ ಬಿಸಿಲು ಈ ಬಾರಿ ಧಗಧಗನೇ ಉರಿದು ಜನರ ನೆತ್ತಿ ಸುಡುತ್ತಿದೆ.
    ಮಕ್ಕಳು, ಮಹಿಳೆಯರು, ವಯೋವೃದ್ಧರು ಬಿಸಿಲಿನ ಪರಿಣಾಮ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.
    ಸತತ 2-3 ವರ್ಷದಿಂದ ತಾಲೂಕಿನಾದ್ಯಂತ ಉತ್ತಮ ಮಳೆ ಆಗಿದ್ದು ಕೆರೆ, ಕಾಲುವೆಗಳು ನೀರು ತುಂಬಿವೆ.
    ಹಿಂದಿನ ವರ್ಷಗಳಿಗೆ ಹೋಲಿಸಿದರೆ ತಾಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇಲ್ಲದೇ ಇದ್ದರೂ ಬಿಸಿಲಿನ ಆರ್ಭಟ ಜನರನ್ನು ಕಂಗೆಡಿಸಿದೆ. ’
    ಸದ್ಯ ತಾಲೂಕಿನಲ್ಲಿ ತಾಪಮಾನ 36 ಡಿಗ್ರಿಯಿಂದ 37ರವರೆಗೆ ಇದೆ.

    ಬಿಸಿಲು ಹೆಚ್ಚಿಸಿದ ಬೇಡಿಕೆ

    ತಾಲೂಕಿನಲ್ಲಿ ಬಿಸಿಲಿನ ಆರ್ಭಟ ನಿಧಾನಕ್ಕೆ ಶುರುವಾಗುತ್ತಿದ್ದಂತೆ ಜನಸಾಮಾನ್ಯರು ತತ್ತರಗೊಂಡು ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ.
    ಇದರಿಂದಾಗಿ ತಂಪು ಪಾನೀಯಗಳ ದರ ಸಮರಕ್ಕೆ ಜನ ಕೈ ಸುಟ್ಟುಕೊಳ್ಳುವಂತಾಗಿದೆ.
    ಉರಿ ಬಿಸಿಲಿನ ಅನುಭವಕ್ಕೆ ಬೆಚ್ಚಿಬೀಳುತ್ತಿರುವ ನಾಗರಿಕರು ಏಪ್ರಿಲ್, ಮೇ ತಿಂಗಳು ಕಳೆಯುವುದು ಹೇಗಾಪ್ಪ ಎನ್ನುವ ಚಿಂತೆಯಲ್ಲಿದ್ದಾರೆ.
    ಜನತೆ ಛತ್ರಿ ಹಿಡಿದು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಪಾನೀಯಗಳ ಬೆಲೆ ಹೆಚ್ಚಳ ಕಂಡಿರುವುದು ಸಹಜವಾಗಿಯ ಗ್ರಾಹಕರನ್ನು ಹೈರಾಣಾಗಿಸುತ್ತಿದೆ.

    ಕಲ್ಲಂಗಡಿಗೆ ಹೆಚ್ಚಿದ ಡಿಮ್ಯಾಂಡ್

    ಬಿಸಿಲಿನ ತಾಪ ಏರುತ್ತಿದ್ದಂತೆ ನಗರದ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣುಗಳ ಮಾರಾಟ ಜೋರಾಗಿಯೇ ಸಾಗಿದೆ.
    ಈ ಬಾರಿ ಉತ್ತಮ ಮಳೆ ಆಗಿರುವುದರಿಂದ ಕಲ್ಲಂಗಡಿ ಹಣ್ಣುಗಳ ಬಂಪರ್ ಫಸಲು ಬಂದಿದೆ.
    ಒಂದು ಕೆ.ಜಿ. ಕಲ್ಲಂಗಡಿ 25 ರೂ.ನಿಂದ 40 ರೂ.ಗೆ ಮಾರಾಟಗೊಳ್ಳುತ್ತಿದೆ.

    ಒಂದು ಎಳನೀರು 35 ರೂ.

    ಬೇಸಿಗೆ ಪರಿಣಾಮ ಎಳನೀರು ದರ ಗಗನಕ್ಕೇರಿದೆ. 1 ಎಳ ನೀರು 30 ರೂ.ನಿಂದ 35 ರೂ.ವರೆಗೆ ಮಾರಾಟ ಆಗುತ್ತಿದೆ.
    ಹಿಂದಿನ ವರ್ಷ ಎಳ ನೀರು 25 ರೂ.ನಿಂದ 30 ರೂ.ಗೆ ಮಾರಾಟ ಆಗುತ್ತಿತ್ತು.

    ಬಿಸಿಲು ಪ್ರಮಾಣ ಏರಿಕೆ

    ಕಳೆದೊಂದು ವಾರದಿಂದ ತಾಲೂಕಿನ ವಾತಾವರಣದಲ್ಲಿ ಉಷ್ಣಾಂಶ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.
    ಶಿವರಾತ್ರಿಗೂ ಮುನ್ನ ತಾಲೂಕಿನಲ್ಲಿ 32 ಡಿಗ್ರಿ ಸೆಲ್ಸಿಯಸ್‌ನಿಂದ 35 ಡಿಗ್ರಿವರೆಗೂ ಬಿಸಿಲು ದಾಖಲಾಗುತ್ತಿತ್ತು.
    ಆದರೀಗ 37. 08 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗುತ್ತಿದೆ.
    ತಿಂಗಳ ಕೊನೇ ಹಾಗೂ ಮುಂದಿನ ತಿಂಗಳ ಮೊದಲ ವಾರದಲ್ಲಿ 38 ಡಿಗ್ರಿ ಸೆಲ್ಸಿಯಸ್‌ನಿಂದ 40 ಡಿಗ್ರಿ ಸೆಲ್ಸಿಯಸ್‌ನವರೆಗೂ ದಾಖಲಾಗಬಹುದು ಎಂಬುದು ಹವಾಮಾನ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.

    ಬಿಸಿಲಿನಿಂದ ದೇಹದ ಉಷ್ಣತೆ ನಿಯಂತ್ರಿಸಿಕೊಳ್ಳಬೇಕಾದರೆ ಅನಿವಾರ್ಯವಾಗಿ ಎಳ ನೀರು, ಕಲ್ಲಂಗಡಿ ತಿನ್ನಲೇಬೇಕು. ಆದ್ದರಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದ್ದರೂ ತಿನ್ನುತ್ತಿದ್ದೇವೆ. ಈ ಬಾರಿ ಮಳೆ ಹೆಚ್ಚಾಗಿರುವ ಕಾರಣ ಬಿಸಿಲು ಕೂಡ ಹೆಚ್ಚಳವಾಗಿದೆ.
    – ಮಲ್ಲೇಶಪ್ಪ ಕೆ., ಗ್ರಾಹಕ

    ಬೇಸಿಗೆ ಬಂದರೆ ಮುಖ್ಯವಾಗಿ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಅದರಲ್ಲೂ ಚಿಕ್ಕ ಮಕ್ಕಳು ಈ ಸಮಸ್ಯೆಗೆ ಬಳಲುವುದು ಹೆಚ್ಚು. ಆದ್ದರಿಂದ ಜನತೆ ಸುರಕ್ಷತೆ ದೃಷ್ಟಿಯಿಂದ ಬಿಸಿಲಲ್ಲಿ ಓಡಾಡುವುದನ್ನು ಕಡಿಮೆ ಮಾಡಬೇಕು. ನೀರು, ತಂಪು ಪಾನೀಯಗಳ ಸೇವನೆ ಹೆಚ್ಚಾಗಿ ಮಾಡುವುದು ಸೂಕ್ತ. ಹೊರಗಡೆಯ ಆಹಾರ ಪದಾರ್ಥ ಸೇವನೆ ಕೈಬಿಡಬೇಕು. ಇದೀಗ ಅಲ್ಲಲ್ಲಿ ಜಾತ್ರೆಗಳು ಹೆಚ್ಚಾಗಿ ನಡೆಯತ್ತಿದ್ದು, ಜನತೆ ಅಲ್ಲಿ ಟೆಂಟ್ ಹಾಕಿ ಇರುವಾಗ ಬಯಲು ಶೌಚ ಮಾಡುವುದನ್ನು ನಿಲ್ಲಿಸಬೇಕು. ಆದಷ್ಟು ಶುಚಿತ್ವ ಕಾಪಾಡಿಕೊಳ್ಳಬೇಕು.
    – ಡಾ. ರಾಜು ಶಿರೂರ, ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts