More

    ವಿಶ್ವದರ್ಜೆಯ ಹಾಸ್ಟೆಲ್ ಶೀಘ್ರ: ವಿವಿ ಆವರಣದಲ್ಲಿ ವಿದೇಶಿ ವಿದ್ಯಾರ್ಥಿಗಳಿಗಾಗಿ ನಿರ್ಮಾಣ

    ಹರೀಶ್ ಮೋಟುಕಾನ, ಮಂಗಳೂರು
    ಮಂಗಳೂರು ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಅವರಿಗಾಗಿ ಪ್ರತ್ಯೇಕ ಅಂತಾರಾಷ್ಟ್ರೀಯ ದರ್ಜೆಯ ವಸತಿ ನಿಲಯ ವಿವಿ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

    ಅಫ್ಘಾನಿಸ್ತಾನ, ಚೀನಾ, ಶ್ರೀಲಂಕಾ, ಇಂಡೋನೇಷ್ಯಾ, ಇರಾನ್, ದಕ್ಷಿಣ ಆಫ್ರಿಕಾ, ನೇಪಾಳ ಮೊದಲಾದ 29 ದೇಶಗಳ 140 ವಿದ್ಯಾರ್ಥಿಗಳು ಮಂಗಳೂರು ವಿವಿಯಲ್ಲಿ ಕಲಿಯುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷ ವಿದ್ಯಾರ್ಜನೆಗಾಗಿ 220 ವಿದೇಶಿ ವಿದ್ಯಾರ್ಥಿಗಳು ವಿವಿಗೆ ಅರ್ಜಿ ಸಲ್ಲಿಸಿದ್ದಾರೆ. ಮಂಗಳೂರು ವಿವಿಯಲ್ಲಿರುವ ವಿದೇಶಿ ವಿದ್ಯಾರ್ಥಿಗಳಿಗೆ ಈವರೆಗೆ ಸುಸಜ್ಜಿತ ಪ್ರತ್ಯೇಕ ವಸತಿ ನಿಲಯ ಇರಲಿಲ್ಲ. ಹೀಗಾಗಿ ಅವರೆಲ್ಲ ದೇರಳಕಟ್ಟೆಯ ಬಾಡಿಗೆ ಕಟ್ಟಡದಲ್ಲಿ ವಾಸ್ತವ್ಯವಿದ್ದಾರೆ. ಇದಕ್ಕೆ ಮುಕ್ತಿ ನೀಡುವ ಉದ್ದೇಶದಿಂದ ವಿವಿ ಆವರಣದಲ್ಲೇ ವಸತಿ ನಿಲಯ ನಿರ್ಮಿಸಲಾಗುತ್ತಿದೆ. ಅಂತಾರಾಷ್ಟ್ರೀಯ ದರ್ಜೆಯ ವ್ಯವಸ್ಥೆಗಳು ಇಲ್ಲಿ ಇರಲಿವೆ.

    ಈ ಯೋಜನೆಯ ಕಾಮಗಾರಿ ಐದು ವರ್ಷದ ಹಿಂದೆಯೇ ಆರಂಭಗೊಂಡಿತ್ತು. ಬಹುಕೋಟಿ ರೂ. ವೆಚ್ಚದ ಯೋಜನೆಗೆ ಸರ್ಕಾರದ ಅನುಮೋದನೆ ಸಿಗಲು ಬಾಕಿಯಿತ್ತು. ವಿವಿಯಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಅನುಮೋದನೆ ನಿರೀಕ್ಷಿಸಲಾಗುತ್ತಿತ್ತು. ಈ ವೇಳೆಗೆ ವಸತಿ ನಿಲಯ ಕಾಮಗಾರಿ ಆರಂಭಿಸಿದ ಕಾರಣ ವಿವಿಯಿಂದಲೇ ಹಣ ವಿನಿಯೋಗಿಸಲಾಗಿತ್ತು. ಆದರೆ, ಅನುದಾನ ಹಾಗೂ ಸರ್ಕಾರದ ಒಪ್ಪಿಗೆ ಲಭಿಸಿದ ಬೆನ್ನಿಗೆ ವಿವಿಯ ಪ್ರಸಕ್ತ ಆಡಳಿತ ಮಂಡಳಿ ಒಪ್ಪಿಗೆ ನೀಡುವಂತೆ ಸರ್ಕಾರವನ್ನು ಕೋರಿತ್ತು. ಇದರಂತೆ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ವಸತಿ ನಿಲಯ ವ್ಯಾಪ್ತಿಯ ಇತರ ಬ್ಲಾಕ್‌ಗಳನ್ನು ಪರೀಕ್ಷಾ ಬ್ಲಾಕ್, ವಿವಿಐಪಿ ಗೆಸ್ಟ್ ಹೌಸ್‌ಗೆ ಬಳಕೆ ಮಾಡಲು ಚಿಂತನೆ ನಡೆಸಲಾಗಿದೆ. ಜತೆಗೆ ವಿವಿಯ ಕೆಲ ವಿಭಾಗಗಳನ್ನು ಮತ್ತೊಂದು ಬ್ಲಾಕ್‌ಗೆ ಸ್ಥಳಾಂತರಿಸುವ ಬಗ್ಗೆಯೂ ಚಿಂತನೆ ಸಾಗಿದೆ.

    ಸುಸಜ್ಜಿತ ಪರೀಕ್ಷಾ ಭವನ: ರಾಜ್ಯದ ಎಲ್ಲ ವಿವಿಗಳಲ್ಲಿ ಪರೀಕ್ಷಾ ಭವನ ಪ್ರತ್ಯೇಕವಾಗಿದೆ. ಮಂಗಳೂರು ವಿವಿಯಲ್ಲಿ ಪ್ರತ್ಯೇಕ ಭವನ ಇರಲಿಲ್ಲ. ವಿವಿ ಆಡಳಿತ ಸೌಧದ ಕೆಳಗಿನ ಮಹಡಿಯಲ್ಲಿ ಸದ್ಯ ಈ ಕಾರ್ಯಚಟುವಟಿಕೆ ನಡೆಯುತ್ತಿದ್ದು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗಕ್ಕೆ ಕಿರಿಕಿರಿ ಉಂಟಾಗುತ್ತಿದೆ. ಹೀಗಾಗಿ ಸುಸಜ್ಜಿತ ಪರೀಕ್ಷಾ ಭವನ ಮಾಡಲು ಚಿಂತನೆ ನಡೆಸಲಾಗಿತ್ತು. ಇದರಂತೆ ಸದ್ಯ ನಿರ್ಮಾಣ ಹಂತದಲ್ಲಿರುವ ಅಂತಾರಾಷ್ಟ್ರೀಯ ವಸತಿ ನಿಲಯದ ಪಕ್ಕದ ಬ್ಲಾಕನ್ನು ಪರೀಕ್ಷಾ ಭವನಕ್ಕೆ ಮೀಸಲಿಡಲು ವಿವಿ ಆಡಳಿತ ಚಿಂತನೆ ನಡೆಸಿದೆ. 24ರ ಸಿಂಡಿಕೇಟ್ ಸಭೆಯಲ್ಲಿ ಈ ಸಂಬಂಧ ಅನುಮತಿ ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

    ವಿವಿ ಆವರಣದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ದರ್ಜೆಯ ವಸತಿ ನಿಲಯ ಕಟ್ಟಡ ನಿರ್ಮಾಣ ಯೋಜನೆ ಕೊನೆಯ ಹಂತದಲ್ಲಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಸೆಪ್ಟೆಂಬರ್‌ನಲ್ಲಿ ಉದ್ಘಾಟನೆ. ಕಟ್ಟಡ 4 ಬ್ಲಾಕ್‌ಗಳನ್ನು ಹೊಂದಿದ್ದು, ಪರೀಕ್ಷಾ ಭವನ, ವಿವಿಐಪಿ ಗೆಸ್ಟ್ ಹೌಸ್ ಮತ್ತು ವಿವಿಧ ಪೀಠಗಳು ಇಲ್ಲಿಗೆ ಸ್ಥಳಾಂತರವಾಗಲಿದೆ.
    ಪ್ರೊ.ಪಿ.ಎಸ್.ಯಡಪಡಿತ್ತಾಯ ಕುಲಪತಿ, ಮಂಗಳೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts