More

    ಹೊಸಬರಿಗೆ ಹಾಸ್ಟೆಲ್ ಸದ್ಯಕ್ಕಿಲ್ಲ, ಶೇ.50 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ

    – ಅವಿನ್ ಶೆಟ್ಟಿ ಉಡುಪಿ
    ಕೋವಿಡ್ ಸಂದಿಗ್ಧ ಕಾಲದಲ್ಲಿ ಕಾಲೇಜುಗಳು ಆರಂಭವಾಗಿದ್ದು, ಈವರೆಗೆ ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್, ನಿರಾಶ್ರಿತರ ಕೇಂದ್ರವಾಗಿ ಕಾರ್ಯ ನಿರ್ವಹಿಸಿದ್ದ ಹಾಸ್ಟೆಲ್‌ಗಳು ಈಗ ಸ್ಯಾನಿಟೈಸ್, ಸ್ವಚ್ಛತಾ ಕಾರ್ಯ ಮುಗಿಸಿ ವಿದ್ಯಾರ್ಥಿಗಳಿಗೆ ಮುಕ್ತವಾಗಿವೆ. ಆದರೆ ಶೇ.50ರಷ್ಟು ಮಾತ್ರ ವಿದ್ಯಾರ್ಥಿಗಳಿಗೆ ಅವಕಾಶ ನೀಡುವಂತೆ ಆದೇಶಿಸಲಾಗಿದೆ.

    ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 23, ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ 7, ಐಟಿಡಿಪಿ 5 ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ಗಳಿವೆ. ಸರ್ಕಾರದ ಆದೇಶದಲ್ಲಿ ಹೊಸ ಅಡ್ಮಿಶನ್ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವ ಬಗ್ಗೆ, ಸದ್ಯಕ್ಕೆ ನವೀಕರಣ ವಿದ್ಯಾರ್ಥಿಗಳಿಗೆ ಮಾತ್ರ ಪರಸ್ಪರ ಅಂತರ ಕಾಪಾಡಿಕೊಂಡು ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವಂತೆ ಸೂಚಿಸಲಾಗಿದೆ.

    ವಸತಿ ನಿಲಯಗಳಲ್ಲಿ ದ್ವಿತೀಯ ಪದವಿ, ಅಂತಿಮ ಪದವಿ, ಅಂತಿಮ ಪಿಜಿ, ದ್ವಿತೀಯ ನರ್ಸಿಂಗ್, ಅಂತಿಮ ನರ್ಸಿಂಗ್, ದ್ವಿತೀಯ, ಅಂತಿಮ ಡಿಪ್ಲೊಮಾ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ವಸತಿ ನಿಲಯದ ಸ್ಥಳದ ಲಭ್ಯತೆಯಲ್ಲಿ ಶೇ.50ರಷ್ಟು ಮಾತ್ರ ವಾಸ್ತವ್ಯಕ್ಕೆ ಅವಕಾಶ ಕೊಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ದೂರದ ಊರಿನ ವಿದ್ಯಾರ್ಥಿಗಳು, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು, ಅಂಗವೈಕಲ್ಯವಿರುವ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಬೇಕು. ನವೀಕರಣ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ, ಬಾಡಿಗೆ ಕಟ್ಟಡಗಳಲ್ಲಿ ಅವಕಾಶ ಕಲ್ಪಿಸುವಂತೆ ಸರ್ಕಾರ ಸೂಚಿಸಿದೆ.

    ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯ: ವಿದ್ಯಾರ್ಥಿಗಳು ಕೋವಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಿಸಿ ನೆಗೆಟಿವ್ ರಿಪೋರ್ಟ್ ಎಂದು ಹಾಸ್ಟೆಲ್‌ಗಳತ್ತ ಬರುತ್ತಿದ್ದಾರೆ. ಸರ್ಕಾರದ ಸೂಚನೆಯಂತೆ ಆ್ಯಂಟಿಜೆನ್ ಟೆಸ್ಟ್ ವರದಿಯನ್ನು ಪರಿಗಣಿಸುವುದಿಲ್ಲ. ಕಡ್ಡಾಯವಾಗಿ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿ ಇದ್ದಲ್ಲಿ ಮಾತ್ರ ಹಾಸ್ಟೆಲ್‌ಗೆ ಪ್ರವೇಶ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಿದ್ಯಾರ್ಥಿಗಳಂತೆ ಹಾಸ್ಟೆಲ್‌ನ ವಾರ್ಡನ್, ಅಡುಗೆ, ಸ್ವಚ್ಚತಾ ಸಿಬ್ಬಂದಿ, ವಾಚ್‌ಮೆನ್‌ಗಳೂ ಕಡ್ಡಾಯ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ವರದಿ ನೀಡಬೇಕಿದೆ.

    ಹಾಸ್ಟೆಲ್‌ಗಳು ಆರಂಭ, ವಿದ್ಯಾರ್ಥಿಗಳು ಬೆರಳೆಣಿಕೆ
    ಮಂಗಳೂರು: ದ.ಕ ಜಿಲ್ಲೆಯಲ್ಲಿ ಸೆ.17ರಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಹಾಸ್ಟೆಲ್‌ಗಳು ಆರಂಭವಾಗಿವೆ. ಅಂತಿಮ ಪದವಿ ತರಗತಿ ಪ್ರಾರಂಭವಾಗಿರುವುದರಿಂದ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳಷ್ಟೇ ಹಾಸ್ಟೆಲ್‌ಗೆ ಪ್ರವೇಶ ಪಡೆದಿದ್ದಾರೆ.
    ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 49, ಸಮಾಜ ಕಲ್ಯಾಣ ಇಲಾಖೆಯ 10 ಮತ್ತು ಐಟಿಡಿಪಿಯ 2 ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿವೆ. ಸರ್ಕಾರದ ಸೂಚನೆಯಂತೆ ಎಲ್ಲ ಹಾಸ್ಟೆಲ್‌ಗಳನ್ನು ಸ್ಯಾನಿಟೈಸ್ ಮಾಡಿ ಸಿದ್ಧವಾಗಿ ಇಟ್ಟುಕೊಳ್ಳಲಾಗಿದೆ. ಹೊಸ ವಿದ್ಯಾರ್ಥಿಗಳ ಸೇರ್ಪಡೆ ಕುರಿತಂತೆ ಸರ್ಕಾರದ ಆದೇಶವನ್ನು ಪಾಲಿಸಲಾಗುತ್ತಿದೆ. ಹಾಸ್ಟೆಲ್‌ಗೆ ಬರುವ ವಿದ್ಯಾರ್ಥಿಗಳು ಹೆತ್ತವರಿಂದ ಅನುಮತಿ ಪತ್ರ ಮತ್ತು ಕರೊನಾ ನೆಗೆಟಿವ್ ಸರ್ಟಿಫಿಕೆಟ್ ತರುವುದು ಕಡ್ಡಾಯ. ಸಿಬ್ಬಂದಿಗೂ ಕರೊನಾ ತಪಾಸಣೆ ನಡೆಸಲಾಗಿದ್ದು, ನೆಗೆಟಿವ್ ಬಂದವರು ಮಾತ್ರ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೇಶ್ ಎಸ್.ಬಿ. ತಿಳಿಸಿದ್ದಾರೆ.

    ಈಗಾಗಲೇ ಪೂರ್ವಭಾವಿ ಸಭೆ ನಡೆಸಿ ಕೋವಿಡ್ ಸಂಬಂಧಿಸಿ ಎಲ್ಲ ಅಧಿಕಾರಿ, ವಾರ್ಡನ್‌ಗಳು ಆರೋಗ್ಯ ಇಲಾಖೆ, ಸರ್ಕಾರ ದ ಮಾರ್ಗಸೂಚಿ ನಿಯಮಗಳನ್ನು ಪಾಲಿಸುವ ಕುರಿತು ಮಾಹಿತಿ ನೀಡಲಾಗಿದೆ. ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಲಾಗುವುದು. ಎಲ್ಲ ಹಾಸ್ಟೆಲ್‌ಗಳಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕಾೃನರ್ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧ ಕಿಟ್‌ಗಳನ್ನು ಆಯುಷ್ ಇಲಾಖೆ ಪೂರೈಸಲಿದೆ.
    – ಪ್ರೇಮ್‌ಸಾಗರ್, ಉಪ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ಉಡುಪಿ

    ಜಿಲ್ಲೆಯಲ್ಲಿ ಪೋಸ್ಟ್ ಮೆಟ್ರಿಕ್‌ನ 23 ಹಾಸ್ಟೆಲ್‌ಗಳನ್ನು ಸ್ಯಾನಿಟೈಸ್‌ಗೊಳಿಸಿ, ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ನವೀಕರಣ ವಿದ್ಯಾರ್ಥಿಗಳಿಗೆ ಮಾತ್ರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರ್‌ಟಿಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ ಜತೆಗೆ ಪಾಲಕರ ಒಪ್ಪಿಗೆ ಪತ್ರದೊಂದಿಗೆ ವಿದ್ಯಾರ್ಥಿಗಳಿಗೆ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು. ಕೋವಿಡ್ ಮಾರ್ಗಸೂಚಿಯನ್ನು ವ್ಯವಸ್ಥಿತವಾಗಿ ಪಾಲಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
    – ದಯಾನಂದ್, ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts