More

    ಒತ್ತಡ ಇಳಿಕೆಗೆ ವಿಕೇಂದ್ರೀಕೃತ ವ್ಯವಸ್ಥೆ

    ಮಂಗಳೂರು: ಜಿಲ್ಲೆಯ ಕೋವಿಡ್ ಪಟ್ಟಿಗೆ ಪ್ರತಿದಿನ ಸರಾಸರಿ 1000 ಸೋಂಕಿತರು ಸೇರ್ಪಡೆಯಾಗುತ್ತಿದ್ದಾರೆ. ಇದರಲ್ಲಿ ಬಹುತೇಕ ಮಂದಿಗೆ ಹೋಂ ಐಸೊಲೇಶನ್ ಸಾಕಾಗುತ್ತದೆ. ಆದರೆ ಈ ಬಾರಿ ಆಕ್ಸಿಜನ್ ಬೆಡ್, ಐಸಿಯು ಬೆಡ್ ಬೇಕಾಗುವವರ ಸಂಖ್ಯೆ ಕಳೆದ ಬಾರಿಗಿಂತ ಹೆಚ್ಚಿದೆ. ಇದೇ ಅಂಶ ಈ ಬಾರಿ ಜಿಲ್ಲೆಗೆ ಒತ್ತಡ ತಂದೊಡ್ಡಿದೆ. ಮಂಗಳೂರು ರೆಫರೆಲ್ ಕೇಂದ್ರವಾಗಿರುವುದರಿಂದ ಹೊರಜಿಲ್ಲೆಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಕೋವಿಡ್, ಕೋವಿಡೇತರ ರೋಗಿಗಳು ಬರುತ್ತಾರೆ. ಆದ್ದರಿಂದ ಇಲ್ಲಿ ಒತ್ತಡ ಜಾಸ್ತಿ. ಅದರೊಂದಿಗೆ ಜಿಲ್ಲೆಯ ಇತರ ಭಾಗಗಳಿಂದಲೂ ಸಣ್ಣಪುಟ್ಟ ಕಾರಣಗಳಿಗೂ ಮಂಗಳೂರಿಗೇ ಜನ ಬರುತ್ತಿರುವುದು ಒತ್ತಡ ಹೆಚ್ಚಿಸಿದೆ.
    ಈ ಕಾರಣದಿಂದ ಸ್ಥಳೀಯವಾಗಿಯೇ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಬೇಕು, ಅಗತ್ಯವಿದ್ದರೆ ಮಾತ್ರ ಜಿಲ್ಲಾಕೇಂದ್ರಕ್ಕೆ ಬಂದರೆ ಸಾಕು ಎಂಬ ಸೂಚನೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. ಅದಕ್ಕೆ ಎಷ್ಟರ ಮಟ್ಟಿಗೆ ತಾಲೂಕು ಕೇಂದ್ರ ಹಾಗೂ ಜಿಲ್ಲೆಯ ಪ್ರಮುಖ ಪ್ರದೇಶಗಳಲ್ಲಿ ಸ್ಪಂದನೆ ಸಿಕ್ಕಿದೆ? ನಮ್ಮ ಈಗಿನ ವಿಕೇಂದ್ರೀಕೃತ ವ್ಯವಸ್ಥೆ ಕೋವಿಡ್ ಚಿಕಿತ್ಸೆಗೆ ಸಾಕಾಗಬಹುದೇ ಎಂಬ ವಿಶ್ಲೇಷಣೆ ಇಲ್ಲಿದೆ.

    *ಪುತ್ತೂರಲ್ಲಿ ಸದ್ಯಕ್ಕೆ ಐಸಿಯು ಭರ್ತಿ
    ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ 26 ಕೋವಿಡ್ ಹಾಗೂ 26 ಇತರ ಬೆಡ್‌ಗಳಿವೆ. 3 ಡಬಲ್ ಆಕ್ಸಿಜನ್ ಸಿಲಿಂಡರ್ ಸಂಗ್ರಹವಿದೆ. 4 ವೆಂಟಿಲೇಟರ್ ಇದ್ದರೂ ವೈದ್ಯರ ಕೊರತೆಯಿದೆ. ಎರಡನೇ ಹಂತದ ಲಸಿಕೆಗೆ ಸಾಕಷ್ಟು ಬೇಡಿಕೆ ಬರುತ್ತಿದ್ದರೂ ಕೊರತೆಯಿದೆ. ಸರ್ಕಾರಿ ಆಸ್ಪತ್ರೆಯಲ್ಲಿ 26 ಬೆಡ್, ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಪ್ರತ್ಯೇಕ ವಾರ್ಡ್‌ಗಳಲ್ಲಿ ಬೆಡ್, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಸೇರಿ ತಾಲೂಕಿನಲ್ಲಿ ಒಟ್ಟು 66 ಬೆಡ್ ಸಿದ್ಧ್ದವಿದೆ. ಸದ್ಯ ಖಾಸಗಿ ಸರ್ಕಾರಿ ಸೇರಿದಂತೆ 14 ಐಸಿಯು ಇದ್ದು ಎಲ್ಲವೂ ಭರ್ತಿ ಇದೆ. ಹೆಚ್ಚುವರಿ ಬೇಕಾದರೆ ಸದ್ಯಕ್ಕೆ ವೆನ್ಲಾಕ್‌ಗೆ ಕಳುಹಿಸುವುದಷ್ಟೇ ಮಾರ್ಗ.

    *ಬಂಟ್ವಾಳ ತಕ್ಕಮಟ್ಟಿಗೆ ಸನ್ನದ್ಧ
    ಕೋವಿಡ್ ನಿಯಂತ್ರಿಸಲು ಬಂಟ್ವಾಳ ತಾಲೂಕಾಡಳಿತ ಸನ್ನದ್ಧವಾಗಿದೆ. ಕೋವಿಡ್ ರೋಗಿಗಳಿಗಾಗಿ ಬಂಟ್ವಾಳದಲ್ಲಿ 6 ಐಸಿಯು ಬೆಡ್‌ಗಳಿದ್ದು 8 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ 6 ಐಸಿಯುನಲ್ಲಿ ಹಾಗೂ 2 ಸಾಮಾನ್ಯ ವಾರ್ಡ್‌ನಲ್ಲಿ ಇದೆ. ಗ್ರಾಮೀಣ ಭಾಗ ಸೇರಿ ಬಂಟ್ವಾಳದ ಹೆಚ್ಚಿನ ಹಾಸ್ಟೆಲ್ಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಾಗಿ ಪರಿವರ್ತಿಸಲಾಗಿದೆ. ಒಟ್ಟು 12 ಕೇಂದ್ರಗಳಿದ್ದು ಇದರ ಒಟ್ಟು ಸಾಮರ್ಥ್ಯ 238 ಬೆಡ್. ಸದ್ಯ ಮೂವರು ವೆಂಟಿಲೇಟರ್‌ನಲ್ಲಿದ್ದಾರೆ.

    *ಕಡಬದಲ್ಲಿ ಐಸಿಯು ಇಲ್ಲ
    ಕಡಬ ತಾಲೂಕು ವ್ಯಾಪ್ತಿಯ ಕಡಬ ಸಮುದಾಯ ಆಸ್ಪತ್ರೆ, ಶಿರಾಡಿ, ಕೊಯಿಲ, ಕಾಣಿಯೂರು, ಪಾಲ್ತಾಡಿ ಮೊದಲಾದ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಎಲ್ಲೂ ಐಸಿಯು ವ್ಯವಸ್ಥೆಯಿಲ್ಲ, ದೂರದ ಪುತ್ತೂರನ್ನು ಅವಲಂಬಿಸಬೇಕಾಗಿದೆ. ಈ ಎಲ್ಲ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸೋಮವಾರ ಕರೊನಾ ಕಾರ್ಯಪಡೆ ಸಭೆಯಲ್ಲಿ ಸಚಿವ ಎಸ್.ಅಂಗಾರ ಭರವಸೆ ನೀಡಿದ್ದರು. ಈ ಕುರಿತು ಸಿದ್ಧತೆ ಇನ್ನಷ್ಟೇ ಆಗಬೇಕಿದೆ.

    * ಬೆಳ್ತಂಗಡಿಯಲ್ಲಿ 34 ಜಂಬೋ ಸಿಲಿಂಡರ್
    ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ 50 ಆಕ್ಸಿಜನೇಟೆಡ್ ಬೆಡ್ ಸಿದ್ಧಪಡಿಸಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ 34 ಜಂಬೋ ಸಿಲಿಂಡರ್ ಲಭ್ಯವಿದ್ದು , 9 ಸಣ್ಣ ಸಿಲಿಂಡರ್‌ಗಳಿವೆ. ಪ್ರತಿದಿನ ತಲಾ 2 ಸಿಲಿಂಡರ್ ಬೇಕಾಗುತ್ತದೆ. ಈಗಾಗಲೇ ಎಸ್‌ಡಿಆರ್‌ಎಫ್‌ನಿಂದ ನೂತನ ಆಮ್ಲಜನಕ ಘಟಕ ನಿರ್ಮಾಣಕ್ಕೂ ಕ್ರಮ ವಹಿಸಲಾಗಿದೆ. ಹೆಚ್ಚೇನೂ ರೋಗಲಕ್ಷಣವಿಲ್ಲದ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಮನೆಯಲ್ಲಿ ಜಾಗದ ಸಮಸ್ಯೆ ಇರುವವರಿಗೆ ಧರ್ಮಸ್ಥಳದ ವ್ಯಸನಮುಕ್ತಿ ಕೇಂದ್ರಕ್ಕೆ ಸ್ಥಳಾಂತರಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಅಲ್ಲಿ 200 ಹಾಸಿಗೆಗಳುಳ್ಳ ಸುಸಜ್ಜಿತ ಕೇಂದ್ರ ತೆರೆಯಲಾಗಿದೆ.

    *ವಿಟ್ಲದಲ್ಲೂ ಐಸಿಯು ಇಲ್ಲ
    ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಒಟ್ಟು 30 ಹಾಸಿಗೆ ವ್ಯವಸ್ಥೆ ಇದ್ದು, 12 ಹಾಸಿಗೆಯನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿಡಲಾಗಿದೆ. ಇದರಲ್ಲಿ 6 ಹಾಸಿಗೆಗಳಿರುವಲ್ಲಿಗೆ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸುಮಾರು 24 ಆಕ್ಸಿಜನ್ ಸಿಲಿಂಡರ್ ಕೂರಿಸಲು ವ್ಯವಸ್ಥೆ ಇದ್ದು, ಸದ್ಯ ಎರಡು ಸಿಲಿಂಡರ್ ಮಾತ್ರ ಇಲ್ಲಿದೆ. ಐಸಿಯು ವ್ಯವಸ್ಥೆ ಸದ್ಯಕ್ಕೆ ವಿಟ್ಲದಲ್ಲಿ ಇಲ್ಲವಾಗಿದ್ದು, ಇಲಾಖೆ ಈ ವ್ಯವಸ್ಥೆ ಮಾಡಿದಲ್ಲಿ ವಾರ್ಡ್‌ಗಳನ್ನು ಐಸಿಯು ಆಗಿ ಪರಿವರ್ತನೆ ಮಾಡಲು ಅವಕಾಶಗಳಿವೆ ಎನ್ನುತ್ತಾರೆ ವೈದ್ಯರು. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಬಂಟ್ವಾಳ, ಪುತ್ತೂರು, ಮಂಗಳೂರು ಭಾಗಕ್ಕೆ ಕಳುಹಿಸಿಕೊಡುವ ಕೆಲಸ ನಡೆಯುತ್ತಿದೆ.
    ———————
    *ಸುಳ್ಯದಲ್ಲಿ ಏಳು ವೆಂಟಿಲೇಟರ್
    ಒಟ್ಟು 100 ಹಾಸಿಗೆಗಳ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ 37 ಹಾಸಿಗೆಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿಯೇ ಮೀಸಲಿರಿಸಲಾಗಿದೆ. ಇದರಲ್ಲಿ ಪ್ರಸ್ತುತ 13 ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು (ಐಸಿಯು) ತೀವ್ರ ನಿಗಾ ಘಟಕ ಇದ್ದು ಅದರಲ್ಲಿ ಮೂರು ಹಾಸಿಗೆಗಳ ವ್ಯವಸ್ಥೆ ಇದೆ. ಆಕ್ಸಿಜನ್ ಸೌಲಭ್ಯ ಇರುವ ಒಟ್ಟು 50 ಹಾಸಿಗೆಗಳು ಲಭ್ಯವಿದ್ದು ಏಳು ವೆಂಟಿಲೇಟರ್‌ಗಳ ವ್ಯವಸ್ಥೆ ಇದೆ. ಸಮೀಪದ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಒಟ್ಟು 50 ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts