More

    ದುಬಾರಿ ಶುಲ್ಕ ಸಾಬೀತಾದರೆ ವಾಪಸ್

    ಮಂಗಳೂರು: ಕೋವಿಡ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳು ದುಬಾರಿ ಶುಲ್ಕ ವಸೂಲಿ ಮಾಡಿದ್ದರೆ ದೂರು ಕೊಡಿ. ವಸೂಲಿ ಸಾಬೀತಾದರೆ, ಆ ಆಸ್ಪತ್ರೆಗಳಿಂದ ಹಣ ವಾಪಸ್ ಕೊಡಿಸುವ ಜವಾಬ್ದಾರಿ ಜಿಲ್ಲಾಡಳಿತದ್ದು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಜನತೆಗೆ ಭ ರವಸೆ ನೀಡಿದರು.
    ದ.ಕ.ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಒಂದನೇ ಅಲೆ ಸಂದರ್ಭ ಎಂಟು ಪ್ರಕರಣಗಳಲ್ಲಿ ಹಣ ವಾಪಸ್ ಕೊಡಿಸಲಾಗಿತ್ತು ಎಂಬುದನ್ನೂ ಪ್ರಸ್ತಾಪಿಸಿದರು.

    ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆಯ ಸಂದರ್ಭ 8 ಮೆಡಿಕಲ್ ಕಾಲೇಜು ಆಸ್ಪತ್ರೆಗಳು ಸೇರಿದಂತೆ 60ಕ್ಕೂ ಅಧಿಕ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲಾಗಿದೆ. ಆಕ್ಸಿಜನ್, ವೆಂಟಿಲೇಟರ್ ಇಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಲಾಗಿಲ್ಲ. ಆಸ್ಪತ್ರೆಗಳಲ್ಲಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, ಆರೋಗ್ಯ ಮಿತ್ರರ ನೇಮಕದ ಮೂಲಕ ನಿಗಾ ವಹಿಸಲಾಗಿತ್ತು ಎಂದರು.

    ಅನಗತ್ಯ ಪಡೆದ ಮೊತ್ತವನ್ನು ಆಸ್ಪತ್ರೆಗಳಿಂದ ಪಡೆದು ರೋಗಿಗಳಿಗೆ ನೀಡಬೇಕೆಂದು ಹೇಳಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಅಂತಹ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಮೀನುಗಾರಿಕಾ ಸಚಿವ ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಸಂಜೀವ ಮಠಂದೂರು, ಯು.ಟಿ.ಖಾದರ್, ರಾಜೇಶ್ ನಾಯ್ಕ, ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್‌ಸಿಂಹ ನಾಯಕ್, ಹರೀಶ್ ಕುಮಾರ್, ಜಿ.ಪಂ ಸಿಇಒ ಡಾ.ಕುಮಾರ್, ಜಿಲ್ಲಾ ಎಸ್ಪಿ ರಿಷಿಕೇಶ್ ಸೊನಾವಣೆ, ಡಿಸಿಪಿ ಹರಿರಾಂ ಶಂಕರ್, ಮನಪಾ ಆಯುಕ್ತ ಅಕ್ಷಿ ಶ್ರೀಧರ್ ಉಪಸ್ಥಿತರಿದ್ದರು.

    ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್: ಚಿಕಿತ್ಸೆಗೆ ಸಂಬಂಧಿಸಿ ಬಿಲ್ ಪರಿಶೀಲಿಸಲು ರಚಿಸಲಾಗಿದ್ದ ಜಿಲ್ಲಾ ಮಟ್ಟದ ಸಮಿತಿ ಸದಸ್ಯರು, 17 ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಸ್ವಯಂಪ್ರೇರಿತವಾಗಿ 2802 ಪ್ರಕರಣಗಳನ್ನು ಪರಿಶೀಲಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 66 ಪ್ರಕರಣಗಳಲ್ಲಿ ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಮೊತ್ತ ಪಡೆದಿರುವುದು ಕಂಡುಬಂದಿದೆ. ಸಂಬಂಧಪಟ್ಟ ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಇದು ಜಿಲ್ಲಾಡಳಿತದಿಂದಲೇ ನಡೆಸಲಾಗಿರುವ ಕ್ರಮ ಎಂದರು.

    ಹಬ್ಬ ಆಚರಣೆ ಗತಿಯೇನು?: ಹಬ್ಬಗಳನ್ನು ಆಚರಿಸುವ ಬಗ್ಗೆ ಯಾವ ರೀತಿಯ ನಿರ್ಬಂಧಗಳನ್ನು ಅನುಸರಿಸಬೇಕು ಎನ್ನುವ ಕುರಿತು ನಿರ್ಧಾರ ಕೈಗೊಳ್ಳಲು ಈ ವಾರ ಧಾರ್ಮಿಕ ಪರಿಷತ್ ಸಭೆ ನಡೆಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಈ ಬಾರಿ ನಾಗರಪಂಚಮಿ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಹಬ್ಬಗಳಿಗೆ ಸಂಘ ಸಂಸ್ಥೆಗಳು, ಜನ ಸಿದ್ಧತೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಈ ಕುರಿತು ಬೇಗ ನಿರ್ಧಾರ ಪ್ರಕಟಿಸುವುದು ಉತ್ತಮ ಎಂದು ಶಾಸಕ ಸಂಜೀವ ಮಠಂದೂರು ಸಲಹೆ ನೀಡಿದರು.

    ದೇಗುಲಗಳಲ್ಲಿ ವಾರಾಂತ್ಯ ನಿಯಂತ್ರಣ: ವಾರಾಂತ್ಯಗಳಲ್ಲಿ ಜಿಲ್ಲೆಯ ಧರ್ಮಸ್ಥಳ, ಸುಬ್ರಹ್ಮಣ್ಯ ಮತ್ತಿತರ ಯಾತ್ರಾ ಸ್ಥಳಗಳಿಗೆ ಜನ ದಟ್ಟಣೆ ಹೆಚ್ಚಾಗುವುದನ್ನು ನೋಡಿದರೆ ದಿಗಿಲಾಗುತ್ತಿದೆ, ಇದರ ಮೇಲೆ ನಿಯಂತ್ರಣ ಹೇರುವುದು ಉತ್ತಮ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸಲಹೆ ನೀಡಿದರು.ನಮ್ಮ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಒಮ್ಮೆ ಶೇ 1.5ಕ್ಕೆ ಇಳಿದಿದ್ದು ಮತ್ತೆ ಶೇ 2.5ಕ್ಕೆ ಏರಿದೆ. ಯಾತ್ರ ಸ್ಥಳಗಳಿಗೆ ವಾರಾಂತ್ಯಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಹೊರಜಿಲ್ಲೆಗಳಿಂದ ಬರತೊಡಗಿದ್ದು ಮತ್ತೆ ಕೋವಿಡ್ ಹರಡುವ ಭೀತಿ ಎದುರಾಗಿದೆ. ಹಾಗಾಗಿ ನಿಯಂತ್ರಣ ಸದ್ಯಕ್ಕೆ ಅನಿವಾರ್ಯ ಎಂದರು.

    ಕರೊನಾ ಸೋಂಕು ಪ್ರಮಾಣ ಇಳಿಕೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕು ಪ್ರಮಾಣ ಮತ್ತಷ್ಟು ಇಳಿಕೆ ಕಂಡಿದೆ. ಜಿಲ್ಲೆಯಲ್ಲಿ ಸೋಮವಾರ ಹೊಸ 126 ಮಂದಿಯಲ್ಲಿ (ಶೇ.2.19) ಸೋಂಕು ದೃಢಪಟ್ಟಿದೆ. ಚಿಕಿತ್ಸೆ ಪಡೆಯುತ್ತಿದ್ದ 289 ಮಂದಿ ಸೋಂಕುಮುಕ್ತರಾಗಿದ್ದಾರೆ. ಸೋಂಕು ದೃಢಪಟ್ಟ 10 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಮಂಗಳೂರು ತಾಲೂಕಿನ ನಾಲ್ವರು, ಪುತ್ತೂರಿನ ಇಬ್ಬರು, ಬಂಟ್ವಾಳದ ಓರ್ವರು ಹಾಗೂ ಹೊರ ಜಿಲ್ಲೆಯ ಮೂವರು ಇದ್ದಾರೆ.
    ಒಂದೇ ಕಡೆ ಅಧಿಕ ಸೋಂಕಿತರು ಇರುವ ಕಂಟೇನ್ಮೆಂಟ್ ವಲಯಗಳ ಸಂಖ್ಯೆ ಕೂಡ ಜಿಲ್ಲೆಯಲ್ಲಿ ಕಡಿಮೆಯಾಗಿದ್ದು, ಸೋಮವಾರ ಎರಡು ಮಾತ್ರ ಗುರುತಿಸಲಾಗಿದೆ. ಪುತ್ತೂರು ಮತ್ತು ಸುಳ್ಯದಲ್ಲಿ ತಲಾ ಒಂದು ವಲಯಗಳಿವೆ. ಕಾಸರಗೋಡು ಜಿಲ್ಲೆಯ 553 ಮಂದಿಗೆ ಸೋಮವಾರ ಕೋವಿಡ್-19 ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಬ್ಲ್ಯಾಕ್ ಫಂಗಸ್ ಹೊಸ ಪ್ರಕರಣಗಳಿಲ್ಲ.

     66 ಮಂದಿಗೆ ಪಾಸಿಟಿವ್: ಉಡುಪಿ ಜಿಲ್ಲೆಯಲ್ಲಿ ಸೋಮವಾರ 66 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ.2.15ಕ್ಕೆ ಇಳಿದಿದೆ. ಉಡುಪಿಯಲ್ಲಿ 59 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಸೋಂಕಿತರಲ್ಲಿ 35 ಮಂದಿ ರೋಗ ಲಕ್ಷಣ ಹೊಂದಿದ್ದಾರೆ. 9 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ 57 ಮಂದಿ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 129 ಮಂದಿ ಗುಣವಾಗಿದ್ದು, 837 ಸಕ್ರಿಯ ಪ್ರಕರಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts