More

    ಗ್ರಾಮ ಒನ್‌ಗಳಲ್ಲಿ ಆಯುಷ್ಮಾನ್ ಭಾರತ್ ಕಡ್ಡಾಯ

    ಹೊಸಪೇಟೆ: ವಿಜಯನಗರ ಜಿಲ್ಲಾದ್ಯಂತ 137 ಗ್ರಾಪಂ, 108 ಗ್ರಾಮ ಒನ್ ಪ್ರಾಂಚೈಸಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರಾಂಚೈಸಿಗಳು ಕಡ್ಡಾಯವಾಗಿ ದಿನಕ್ಕೆ ಒಂದು ಸಾವಿರ ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ನೋಂದಣಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಟಿ.ವಿ.ಪ್ರಕಾಶ್ ತಿಳಿಸಿದರು.

    ನಗರದ ತಹಸೀಲ್ದಾರ್ ಕಚೇರಿಯರುವ ಕೇಸ್ವಾನ್ ಕೇಂದ್ರದಲ್ಲಿ ಆಯೋಜಿಸಿದ್ದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಆರೋಗ್ಯ ಸೇವೆ ಕಾರ್ಡ್‌ಗಳನ್ನು ಒದಗಿಸುವ ಕುರಿತು ಮಾತನಾಡಿದರು. ಆಯುಷ್ಮಾನ್ ಭಾರತ್ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಬಡತನದಲ್ಲಿರುವವರಿಗೆ ಐದು ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಲು ಸಹಕಾರಿಯಾಗುತ್ತದೆ. ಜಿಲ್ಲೆಯು 13 ರಿಂದ 14 ಲಕ್ಷ ಜನಸಂಖ್ಯೆ ಹೊಂದಿದ್ದು, 108 ಗ್ರಾಮ ಒನ್ ಪ್ರಾಂಚೈಸಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಪ್ರಾಂಚೈಸಿಯು ದಿನಕ್ಕೆ ಒಂದು ಸಾವಿರ ಆಯುಷ್ಮಾನ್ ಕಾರ್ಡ್ ನೋಂದಣಿ ಮಾಡಬೇಕು. ಗ್ರಾಮಒನ್‌ನ ಪ್ರಾಂಚೈಸಿದಾರರು, ನ್ಯಾಯಬೆಲೆ ಅಂಗಡಿಯವರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು. ಈ ಮೂಲಕ 15-16 ದಿನಗಳಲ್ಲಿ ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದರು.

    ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ ಒಂದು ವರ್ಷಕ್ಕೆ ಗರಿಷ್ಠ ಐದು ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯ ಸಿಗಲಿದ್ದು, ಎಪಿಎಲ್ ಕುಟುಂಬಕ್ಕೆ ಪಾವತಿ ಆಧಾರದ ಮೇಲೆ ಚಿಕಿತ್ಸಾ ವೆಚ್ಚದ ಶೇ.30 ರಿಯಾಯಿತಿ ಸರ್ಕಾರದಿಂದ ಪಾವತಿ ಮತ್ತು ಎಪಿಎಲ್‌ನವರಿಗೆ ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ಗರಿಷ್ಠ ರೂ.1.50 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯ ಸಿಗಲಿದೆ ಎಂದರು.

    ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಮಾತನಾಡಿ, ಖಾತ್ರಿ ಯೋಜನೆಯಡಿ ಕಾಮಗಾರಿಗಳು ನಡೆಯುವ ಸ್ಥಳಗಳಲ್ಲಿ, ಗ್ರಾ.ಪಂ. ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ, ಶಾಲೆ-ಕಾಲೇಜುಗಳಲ್ಲಿ ಹಾಗೂ ಗ್ರಾಮಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳಿಗೆ ಗ್ರಾಮಒನ್‌ನ ಪ್ರಾಂಚೈಸಿದಾರರು ಹಾಗೂ ನ್ಯಾಯಬೆಲೆ ಅಂಗಡಿಯವರು ತೆರಳಿ ಆರೋಗ್ಯ ಕಾರ್ಡ್‌ನ್ನು ವಿತರಣೆ ಮಾಡಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್ ಮಾತನಾಡಿದರು. ಹೊಸಪೇಟೆ ತಾಪಂ ಕಾರ್ಯನಿವಾಹಕ ಅಧಿಕಾರಿ ರಮೇಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಶೇಖರ್, ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್ ಗುರುಬಸವರಾಜ, ಹೊಸಪೇಟೆ ತಹಸೀಲ್ದಾರ್ ವಿಶ್ವಜಿತ್ ಮೆಹತಾ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ವಿರುಪಾಕ್ಷಪ್ಪಶೆಟ್ಟಿ, ಆಹಾರ ಶಿರಸ್ತೇದಾರ್ ಎಚ್.ನಾಗರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts