More

    ನೇಮಕಾತಿಯಲ್ಲಿ ಕನ್ನಡದ ಕಡೆಗಣನೆ, ಕೇಂದ್ರ ಸರ್ಕಾರದ ವಿರುದ್ಧ ಕರವೇ ಆರೋಪ


    ಹೊಸಪೇಟೆ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ‘ಬಿ’ ಮತ್ತು ‘ಸಿ’ ವೃಂದದ ಹುದ್ದೆಗಳ ನೇಮಕಾತಿಯನ್ನು ವಲಯವಾರು ಮತ್ತು ಸ್ಥಳೀಯ ಭಾಷೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಕೇಂದ್ರ ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 20,000 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಸೆ.17 ರಿಂದ ಅರ್ಜಿ ಸಲ್ಲಿಕ್ಕೆ ಆರಂಭವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಸೇರಿ ಎಲ್ಲ ಹಂತದಲ್ಲಿ ಹಿಂದಿ, ಇಂಗ್ಲಿಷ್‌ನಲ್ಲಿ ಪರೀಕ್ಷೆ ನಡೆಸುತ್ತಿದೆ. ಆದರೆ, ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ. ಉತ್ತರ ಭಾರತೀಯರು ಮತ್ತು ಹಿಂದಿ ಭಾಷಿಕರಿಗೆ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಹಿಂದಿಯೇತರ ಭಾಷಿಕರನ್ನು ಉದ್ಯೋಗ ಅವಕಾಶದಿಂದ ವಂಚಿಸಲಾಗಿದೆ ಎಂದು ಆರೋಪಿಸಿದರು.

    ಖಾಲಿ ಹುದ್ದೆಗಳನ್ನು ಆಧರಿಸಿ ವಲಯವಾರು ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದಾಗ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯುತ್ತಿದ್ದವು. ಆದರೆ, ಈ ಬಾರಿ ದೇಶಕ್ಕೆ ಅನ್ವಯವಾಗುವಂತೆ ನೇಮಕಾತಿ ಪ್ರಕ್ರಿಯೆ ನಡೆಸುವುದರಿಂದ ಸ್ಥಳೀಯರಿಗೆ ಹೆಚ್ಚಿನ ಹುದ್ದೆಗಳು ಸಿಗಲಿಕ್ಕಿಲ್ಲ. ಅಲ್ಲದೇ ಆಡಳಿತ ಮತ್ತು ಭಾಷಾ ದೃಷ್ಟಿಯಿಂದಲೂ ಸ್ಥಳೀಯರಿಗೆ ತೊಂದರೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಕೂಡಲೇ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತರಬೇಕು. ಸ್ಥಳೀಯವಾಗಿ ಖಾಲಿ ಇರುವ ಹುದ್ದೆಗಳ ಅನುಸಾರವಾಗಿ ಸರ್ಕಲ್ ವಾರು ನೇಮಕಾತಿ ನಡೆಸಬೇಕು. ದಕ್ಷಿಣ ಭಾರತೀಯರಿಗೆ ಅವರವರ ಮಾತೃ ಭಾಷೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ತಹಸೀಲ್ದಾರ್ ಗುರುಬಸವರಾಜಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಪ್ರಮುಖರಾದ ಅಂಬರೀಷಯ್ಯ, ಮೆಹಬೂಬ್‌ಬಾಷಾ, ನೂರ್‌ಬಾನು, ಟಿಪ್ಪು ಸಮೀರ್, ಗಾಳೇಶ್ ಉದ್ದಾನಪ್ಪ, ಸುಮ ಗಂಗಮ್ಮ, ಕಾಂಚಾಣ ರುದ್ರಪ್ಪ, ಭಾರತಿ, ಗೋವಿಂದ ನಾಯ್ಕ, ಲಿಂಗರಾಜ್, ನಾಗರಾಜ, ರಮೇಶ್, ಮುಮ್‌ತಾಜ್, ದುರುಗಮ್ಮ, ಆಟೋ ಶಿವರಾಮ, ಅನಿಲ್ ಮತ್ತಿತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts