More

    2 ದಿನಗಳಲ್ಲಿ ರಾಜಕೀಯ ನಿರ್ಧಾರ, ರಾಣಿ ಸಂಯುಕ್ತ ಅಸಮಾಧಾನ

    ಹೊಸಪೇಟೆ: ಕುಟುಂಬ ರಾಜಕಾರಣವನ್ನು ವಿರೋಧಿಸುವ ಬಿಜೆಪಿ ವಿಜಯನಗರ ಕ್ಷೇತ್ರದಲ್ಲಿ ಕುಟುಂಬಕ್ಕೆ ಮಣೆ ಹಾಕಿದೆ. ಸಚಿವ ಆನಂದ ಸಿಂಗ್ ಅವರ ಪುತ್ರ ಕಿರಿ ವಯಸ್ಸಿನ ಸಿದ್ಧಾರ್ಥ ಸಿಂಗ್‌ಗೆ ಟಿಕೇಟ್ ಘೋಷಿಸುವ ಮೂಲಕ ನನಗೆ ವಂಚಿಸಿದ್ದಾರೆ ಎಂದು ಬಿಜೆಪಿ ಮಹಿಳಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ರಾಣಿ ಸಂಯುಕ್ತ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ಎಲೆ ಮರೆಕಾಯಿಯಂತೆ ದುಡಿದಿದ್ದೇವೆ

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 30 ವರ್ಷಗಳಿಂದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿ ನಾನು ಮತ್ತು ನನ್ನ ಮನೆಯವರು ಸೇವೆ ಸಲ್ಲಿಸುತ್ತಿದ್ದೇವೆ. ಬೇರು ಮಟ್ಟದಿಂದ ಪಕ್ಷ ಸಂಘಟನೆ ಜೊತೆಗೆ ವಿಧಾನ ಪರಿಷತ್ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಎಲೆ ಮರೆಕಾಯಿಯಂತೆ ಹಗಲಿರುಳು ದುಡಿದಿದ್ದೇವೆ.

    ಆದರೆ, ಆರು ತಿಂಗಳಿಂದೀಚೆಗೆ ವೈಯಕ್ತಿಕವಾಗಿ ಸಾಮಾಜಿಕ ಸೇವೆ, ಕುಸ್ತಿ, ಖೋ ಖೋ ಆಯೋಜಿಸುವ ಮೂಲಕ ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ಸಿದ್ಧಾರ್ಥ ಸಿಂಗ್‌ಗೆ ಬಿಜೆಪಿ ನಾಯಕರು ಮಣೆ ಹಾಕಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಬಿಜೆಪಿ ನಾಯಕಿಯನ್ನು ಭೇಟಿಯಾದ ಕಾಂಗ್ರೆಸ್ ಅಭ್ಯರ್ಥಿ!

    ಆಕಾಂಕ್ಷಿಗಳ ಪಟ್ಟಿಯಲ್ಲೇ ಲೋಪ

    ಪಕ್ಷದ ಅಭ್ಯರ್ಥಿಗಳನ್ನು ಗುರುತಿಸಲು ಜಿಲ್ಲಾ ಹಂತದಲ್ಲಿ ನಡೆದ ಬಿಜೆಪಿ ಆಂತರಿಕ ಮತದಾನದಲ್ಲೂ ಸಿದ್ಧಾರ್ಥ ಸಿಂಗ್ ಹೆಸರಿರಲಿಲ್ಲ. ಆನಂದ ಸಿಂಗ್, ರಾಣಿ ಸಂಯುಕ್ತ ಮತ್ತು ಪ್ರಿಯಾಂಕಾ ಜೈನ್ ಹೆಸರುಗಳು ಮಾತ್ರ ಇದ್ದವು. ಅದ್ಯಾವಾಗ ಸಿದ್ಧಾರ್ಥ ಸಿಂಗ್ ಹೆಸರು ನುಸುಳಿದೆ ಎಂಬುದು ಮಾಹಿತಿಯಿಲ್ಲ. ಕೇಂದ್ರಕ್ಕೆ ಕಳುಹಿಸಿದ ಆಕಾಂಕ್ಷಿಗಳ ಪಟ್ಟಿಯಲ್ಲೇ ಲೋಪವಿದೆ ಎಂದು ಬೇಸರ ಹೊರಹಾಕಿದರು.

    ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರಣಿಭೂತರು ಎಂಬ ಕಾರಣಕ್ಕೆ 2019ರ ಉಪಚುನಾವಣೆಯಲ್ಲಿ ಆನಂದ ಸಿಂಗ್‌ಗೆ ಪಕ್ಷ ಟಿಕೆಟ್ ನೀಡಿತ್ತು. ಅವರಿಗೆ ಮಂತ್ರಿಗಿರಿ, ವಿಜಯನಗರ ನೂತನ ಜಿಲ್ಲೆ ಘೋಷಣೆಯ ಜೊತೆಗೆ ಅನೇಕ ಬೇಡಿಕೆಗಳನ್ನು ಈಡೇರಿಸಿದೆ. ಈ ಬಾರಿಯೂ ಹಾಲಿ ಶಾಸಕರನ್ನು ಸ್ಪರ್ಧೆಗಿಳಿಸಿದ್ದರೆ ಸ್ವಾಗತಿಸುತ್ತಿದ್ದೆವು.

    ಬಾವುಟ ಕಟ್ಟುವುದೇ ಕೆಲಸ

    ದಶಕಗಳಿಂದ ದುಡಿಯುತ್ತಿರುವ ತಳ ಮಟ್ಟದ ಪ್ರಾಮಾಣಿಕ ಕಾರ್ಯಕರ್ತನಿಗೆ ಟಿಕೇಟ್ ನೀಡಿದ್ದರೂ, ಆನಂದ ಸಿಂಗ್ ನಾನೂ ಜೊತೆ ಗೂಡಿ ಪಕ್ಷವನ್ನು ಗೆಲ್ಲಿಸುತ್ತಿದ್ದೆವು. ಆದರೆ, ಪಕ್ಷದಲ್ಲೇ ಗುರುತಿಸಿಕೊಳ್ಳದ ಸಿದ್ಧಾರ್ಥ ಸಿಂಗ್‌ಗೆ ಅವಕಾಶ ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಸಿದ್ಧಾರ್ಥ ಸಿಂಗ್ ಆಯ್ಕೆಯಿಂದ ಸಚಿವರು, ಶಾಸಕರ ಮಕ್ಕಳಿಗೆ ಮಾತ್ರ ಅವಕಾಶ. ಸಾಮಾನ್ಯ ಕಾರ್ಯಕರ್ತರಿಗೆ ಬಾವುಟ ಕಟ್ಟುವುದೇ ಕೆಲಸ ಎಂಬ ಸಂದೇಶ ರವಾನಿಸಿದಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

    ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ವ್ಯಾಸನಕೇರಿ ಶ್ರೀನಿವಾಸ, ಬಿಜೆಪಿ ವಕ್ತಾರ ಅನಂತ ಪದ್ಮನಾಭ, ಪ್ರಮುಖರಾದ ಪಂಚಯ್ಯ ಸ್ವಾಮಿ, ಕಟಗಿ ರಾಮಕೃಷ್ಣ, ಜಂಬನಹಳ್ಳಿ ವಸಂತ, ನಗರಸಭೆ ಮಾಜಿ ಸದಸ್ಯ ಚಂದ್ರಕಾಂತ ಕಾಮತ ಉಪಸ್ಥಿತರಿದ್ದರು.

    ಮೂರು ದಶಕಗಳಿಂದ ಬಿಜೆಪಿಯಲ್ಲಿ ದುಡಿಯುತ್ತಿರುವ ನನಗೆ ಈ ಬಾರಿ ಟಿಕೇಟ್ ಸಿಗುವ ಅತೀವ ವಿಶ್ವಾಸವಿತ್ತು. ಅಲ್ಲದೇ, ಚುನಾವಣಾ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆಯೂ ಹಿರಿಯರು ಸೂಚಿಸಿದ್ದರು. ಆದರೆ, ಅನಿರೀಕ್ಷಿತವಾಗಿ ಸಿದ್ಧಾರ್ಥ ಸಿಂಗ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವುದು ಆಘಾತ ತಂದಿದೆ. ಈ ಬಗ್ಗೆ ಹಿರಿಯರ ಜೊತೆ ಚರ್ಚಿಸುತ್ತೇನೆ. ಪಕ್ಷದ ಟಿಕೇಟ್ ಕೈತಪ್ಪಿದ್ದರಿಂದ ವಿವಿಧ ಪಕ್ಷಗಳ ನಾಯಕರು ಕೂಡಾ ಸಂಪರ್ಕಿಸುತ್ತಿದ್ದಾರೆ. ಮುಂದಿನ ರಾಜಕೀಯ ನಡೆ ಬಗ್ಗೆ ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳುವೆ.
    | ರಾಣಿ ಸಂಯುಕ್ತ, ಬಿಜೆಪಿ ಮಹಿಳಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts