More

    150 ಅಡಿ ಎತ್ತರದಲ್ಲಿ ರಾರಾಜಿಸಿದ ಕನ್ನಡ ಬಾವುಟ

    ಹೊಸಪೇಟೆ: ಈಗಾಗಲೇ 450 ಅಡಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಸ್ಥಾಪಿಸುವ ಮೂಲಕ ದೇಶದ ಅತಿ ಎತ್ತರದ ಧ್ವಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೊಸಪೇಟೆಯಲ್ಲೀಗ 150 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಭಾನುವಾರ ಕನ್ನಡ ಬಾವುಟ ಹಾರಿಸುವ ಮೂಲಕ ಮತ್ತೊಂದು ದಾಖಲೆ ಸೃಷ್ಟಿಯಾಗಿದೆ.

    ನಗರದ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಈ ಹಿಂದೆ 150 ಅಡಿ ಎತ್ತರದ ಧ್ವಜ ಸ್ತಂಭ ಸ್ಥಾಪಿಸಿದ್ದು, ಗಣರಾಜ್ಯೋತ್ಸವ ಮತ್ತು ಸ್ವಾತಂತ್ರೊೃೀತ್ಸವದಂದು ರಾಷ್ಟ್ರಪತಾಕೆ ಹಾರಿಸಲಾಗುತ್ತಿತ್ತು. ಇದೀಗ 67ನೇ ರಾಜ್ಯೋತ್ಸವದ ನಿಮಿತ್ತ ಅದೇ ಧ್ವಜಸ್ತಂಭದಲ್ಲಿ ಭಾನುವಾರ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ನಾಡ ಧ್ವಜಾರೋಹಣ ನೆರವೇರಿಸಿದರು. ಹಚ್ಚೇವು ಕನ್ನಡದ ದೀಪ, ಬಾರಿಸು ಕನ್ನಡ ಡಿಂಡಿಮವ ಹಿನ್ನೆಲೆ ಗೀತೆಯೊಂದಿಗೆ ನಾಡ ಧ್ವಜ ಬಾನಂಗಳದಲ್ಲಿ ಹಾರಾಡಿತು. ಈ ವೇಳೆ ನೆರೆದಿದ್ದ ಜನರಲ್ಲಿ ರೋಮಾಂಚನ ಸೃಷ್ಟಿಸಿತು.

    ಇದಕ್ಕೂ ಮುನ್ನ ಕರ್ನಾಟಕ ಏಕೀಕರಣ, ಜ್ಞಾನಪೀಠ ಪುರಸ್ಕೃತರು, ಎಲ್ಲ ಮುಖ್ಯಮಂತ್ರಿಗಳ ಕುರಿತಂತೆ ಕಿರಿ ಪರಿಚಯ ಭಾಷಣ ಮಾಡಿದ ನಗರದ ವಿಶ್ವಚೇತನ ಅಂಧ ಮಕ್ಕಳ ಶಾಲೆಯ ಒಂದನೇ ತರಗತಿಯ ಅಭಿನವ ಅವರ ಕಾಲು ಮುಟ್ಟಿ ನಮಸ್ಕರಿಸುವ ಮೂಲಕ ಸಚಿವ ಆನಂದ ಸಿಂಗ್ ವಿದ್ಯಾರ್ಥಿಯ ಜ್ಞಾನಕ್ಕೆ ತಲೆಬಾಗಿದರು. ತಮ್ಮ ಭಾಷಣದಲ್ಲೂ ಬಾಲಕನ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕಾರ್ಯಕ್ರಮದ ಸಮಾರೋಪದ ವೇಳೆ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿಗೆ ಶಾಲಾ ವಿದ್ಯಾರ್ಥಿಗಳೊಂದಿಗೆ ನಗರಸಭೆ ಅಧ್ಯಕ್ಷ ಸುಂಕಮ್ಮ ಹೆಜ್ಜೆ ಹಾಕಿ, ಸಂಭ್ರಮಿಸಿದರು.

    ಗಣರಾಜ್ಯೋತ್ಸವ, ಸ್ವಾತಂತ್ರೊೃೀತ್ಸವ ಹೊರತಾಗಿ ವರ್ಷದ 363 ದಿನ ಕನ್ನಡ ಬಾವುಟ ಹಾರಾಡಲಿದೆ. ನಾಡು-ನುಡಿ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ನಾಡಿನ ಸಂಸ್ಕೃತಿ, ಕಲೆ, ಸಾಹಿತ್ಯ, ವಾಸ್ತುಶಿಲ್ಪ ಹಾಗೂ ಗತ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ. ನಾಡಿನ ನೆಲ, ಜಲ ಹಾಗೂ ಭಾಷೆ ವಿಚಾರವಾಗಿ ಎಲ್ಲ ಕನ್ನಡಪರ ಸಂಘಟನೆಗಳು ಒಕ್ಕೋರಲಿನಿಂದ ಧ್ವನಿ ಎತ್ತಬೇಕು.
    | ಆನಂದ ಸಿಂಗ್, ಪ್ರವಾಸೋದ್ಯಮ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts