More

    ಹಂಪಿಯಲ್ಲಿ ಹೋಂ ಸ್ಟೇ ಆರಂಭಕ್ಕೆ ಚಿಂತನೆ: ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿಕೆ

    ಹೊಸಪೇಟೆ: ಹಂಪಿಯ ಜನತಾ ಕಾಲನಿಯಲ್ಲಿರುವ ಮನೆಗಳಲ್ಲಿ ಕನಿಷ್ಠ ಎರಡು ಕೊಠಡಿಗಳ ಹೋಂ ಸ್ಟೇ ಆರಂಭಿಸುವುದಕ್ಕೆ ಚಿಂತನೆ ನಡೆದಿದೆ. ಜನತಾ ಕಾಲನಿಯಲ್ಲಿ ಮನೆಗಳ ತೆರವಿಗೆ ಸಂಬಂಧಿಸಿ ಪ್ರಕರಣ ನ್ಯಾಯಾಲಯದಲ್ಲಿದೆ. ಅಲ್ಲಿಂದ ಆದೇಶ ಬಂದ ಬಳಿಕ ಚರ್ಚಿಸಲಾಗುವುದು ಎಂದು ಸಚಿವ ಆನಂದ ಸಿಂಗ್ ಹೇಳಿದರು.

    ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರವಾಸಿಗರ ಅನುಕೂಲಕ್ಕಾಗಿ ಹಂಪಿ ಸ್ನಾನಘಟ್ಟವನ್ನು ಐದು ಕೋಟಿ. ರೂ. ವೆಚ್ಚದಲ್ಲಿ ಇಲಾಖೆಯಿಂದ ಅಭಿವೃದ್ಧಿಪಡಿಸುವ ಕುರಿತು ಡಿಪಿಆರ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಂಪಿಯನನ್ನು ಐಕಾನಿಕ್ ಟೂರಿಸಂ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ಕುರಿತು ಕೇಂದ್ರ ಸಚಿವಗೆ ಮನವಿ ಮಾಡಲಾಗಿದೆ. ಶೀಘ್ರ ಯೋಜನೆಗೆ ಒಪ್ಪಿಗೆ ದೊರೆಯಲಿದೆ ಎಂದರು.

    ಪ್ರಸಾದ್ ಯೋಜನೆ: ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ನೂರು ಕೋಟಿ ರೂ. ವೆಚ್ಚದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟ ಅಭಿವೃದ್ಧಿಪಡಿಸುವ ಯೋಜನೆ ಕುರಿತು ಇತ್ತೀಚೆಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ. ಕೇಂದ್ರ ಅಧಿಕಾರಿಗಳು ಎರಡು ತಿಂಗಳೊಳಗೆ ಮೈಸೂರಿಗೆ ಭೇಟಿ ನೀಡಿ ಅನುಮೋದನೆ ನೀಡಲಿದ್ದಾರೆ ಎಂದು ತಿಳಿಸಿದರು.

    ಪ್ರತ್ಯೇಕ ಪ್ರಾಧಿಕಾರ ಮಾಡಿದರೆ ಅಭ್ಯಂತರವಿಲ್ಲ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಬರುತ್ತಿದೆ. ಅದನ್ನು ಪ್ರತ್ಯೇಕ ಪ್ರಾಧಿಕಾರ ಮಾಡುವಂತೆ ಅಲ್ಲಿನ ಸ್ಥಳೀಯರು ಸಂಸದಗೆ ಮನವಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಆನಂದಸಿಂಗ್, ಇದಕ್ಕೆ ನನ್ನ ಅಭ್ಯಂತರವಿಲ್ಲ. ಆಡಳಿತ, ಅಭಿವೃದ್ಧಿ ದೃಷ್ಟಿಯಿಂದಲೂ ಇದು ಒಳ್ಳೆಯದು ಎಂದರು.

    ಉದ್ಯಾನದಲ್ಲಿ ಪುನೀತ್ ಪುತ್ಥಳಿ: ನಟ ಪುನೀತ್ ಅಕಾಲಿಕ ಮರಣ ತುಂಬ ನೋವು ತಂದಿದೆ. ಹೊಸಪೇಟೆಯೊಂದಿಗೆ ಅವರು ವಿಶೇಷ ನಂಟು ಹೊಂದಿದ್ದರು. ನಗರದ ಯಾವುದಾದರೂ ಒಂದು ವೃತ್ತಕ್ಕೆ ನಟ ಪುನೀತ್ ಹೆಸರಿಡುವಂತೆ ಅಭಿಮಾನಿಗಳು ಮನವಿ ಸಲ್ಲಿಸಿದ್ದಾರೆ. ನಗರದಲ್ಲಿ ಉದ್ಯಾನವೊಂದನ್ನು ಅಭಿವೃದ್ಧಿಪಡಿಸಿ, ಅಲ್ಲಿ ಪುನೀತ್ ಪುತ್ಥಳಿ ನಿರ್ಮಿಸುವ ಯೋಚನೆ ಇದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts