More

    ಬೆಳಕಿನ ಹಬ್ಬಕ್ಕೆ ವಿಜಯನಗರ ಜಿಲ್ಲೆಯಲ್ಲಿ ಭರದ ಸಿದ್ಧತೆ

    ಹೊಸಪೇಟೆ: ಹೊಸಪೇಟೆ ಒಳಗೊಂಡಂತೆ ವಿಜಯನಗರ ಜಿಲ್ಲಾದ್ಯಂತ ಬೆಳಕಿನ ಹಬ್ಬ ದೀಪಾವಳಿಗೆ ಭರದ ಸಿದ್ಧತೆ ನಡೆದಿದ್ದು, ಬೆಲೆ ಏರಿಕೆಯ ನಡುವೆಯೂ ಸಾಮಗ್ರಿಗಳ ಖರೀದಿ ಭರ್ಜರಿಯಾಗಿ ನಡೆದಿದೆ.

    ಮೂರಂಗಡಿ ಸರ್ಕಲ್, ಗಾಂಧಿ ವೃತ್ತದಿಂದ ಹೆಡ್‌ಪೋಸ್ಟ್ ಆಫೀಸ್‌ವರೆಗೆ, ಎಪಿಎಂಸಿ, ಬಳ್ಳಾರಿ ಸರ್ಕಲ್ ಮತ್ತಿತರ ಕಡೆ ಬಾಳೆದಿಂಡು, ಅಡಕೆ ಹೂವಿನ ಗಿಡ, ಚೆಂಡುಹೂವಿನ ಗಿಡಗಳ ಮಾರಾಟ ಭರ್ಜರಿಯಾಗಿ ನಡೆದಿದೆ. ನಗರಸಭೆ ಮುಂಭಾಗ, ಮಾರುಕಟ್ಟೆ ಪ್ರದೇಶದಲ್ಲಿ ಮನೆಯ ಅಲಂಕಾರಿಕ ವಿದ್ಯುತ್ ದೀಪಗಳು, ಪ್ಲಾಸ್ಟಿಕ್ ತೋರಣಗಳು, ಪ್ಲಾಸ್ಟಿಕ್ ಹಾಗೂ ಪೇಪರ್‌ಗಳಿಂದ ತಯಾರಿಸಿದ ಹೂವಿನಹಾರಗಳು, ಬಣ್ಣ ಬಣ್ಣದ ಆಕಾಶ ಬುಟ್ಟಿಗಳು, ಮಣ್ಣಿನ ಹಣತೆಗಳು, ರಂಗೋಲಿ ಮತ್ತಿತರ ವಸ್ತುಗಳ ಮಾರಾಟ ಭರಾಟೆಯಿಂದ ನಡೆದಿದೆ.

    2 ತಿಂಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಕ್ಷೇತ್ರದಲ್ಲಿ ನಷ್ಟವಾಗಿದ್ದು, ಬಹುತೇಕ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ಸೇಬು ಕೆಜಿಗೆ 120 ರೂ., ಚಿಕ್ಕೂ 50 ರೂ., ಪೇರಲ 60 ರೂ, ಬಾಳೆಹಣ್ಣು 40 ರೂ., ಮೊಸಂಬಿ, ಸೀತಾಫಲ, ದಾಳಿಂಬೆ 60 ರೂ.ಗೆ ಕೆಜಿಯಂತ ಮಾರಾಟವಾಗುತ್ತಿದೆ. ತರಕಾರಿ ಬೆಲೆ ಎಂದಿಗಿಂತ ಕೆ.ಜಿ.ಗೆ 5 ರಿಂದ 10 ರೂ. ಏರಿಕೆಯಾಗಿದೆ.

    ಹೊಸ ಬಟ್ಟೆ, ಎಲ್‌ಇಡಿ ಟಿವಿ, ಫ್ರಿಜ್ಡ್, ವಾಷಿಂಗ್ ಮಷಿನ್ ಮತ್ತಿತರ ಗೃಹೋಪಯೋಗಿ ವಸ್ತುಗಳ ಖರೀದಿಯೂ ಭರದಿಂದ ಸಾಗಿದೆ. ವಿವಿಧ ಶೋ ರೂಂಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ಗ್ರಾಹಕರನ್ನು ಸೆಳೆಯಲು ಉದ್ಯಮಿಗಳು ಎಲ್ಲ ವಸ್ತುಗಳ ಮೇಲೆ ಭಾರೀ ರಿಯಾಯಿತಿ, ವಿಶೇಷ ಉಡುಗೊರೆಗಳನ್ನು ಕೊಡುತ್ತಿದ್ದಾರೆ. ಇದರಿಂದ ವ್ಯಾಪಾರ ಭರ್ಜರಿಯಾಗಿ ಸಾಗಿದೆ.

    ಪಟಾಕಿ ಬಲು ದುಬಾರಿ: ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ 13 ಪಟಾಕಿ ಮಳಿಗೆಗಳನ್ನು ಆರಂಭಿಸಲಾಗಿದೆ. ಕೋವಿಡ್‌ನಿಂದಾಗಿ ಮಂಕಾಗಿದ್ದ ವಹಿವಾಟು ಈ ಬಾರಿ ತುಸು ಚೇತರಿಸಿಕೊಂಡಿದೆ. ಆದರೆ, ಸಿಡಿಮದ್ದುಗಳ ಬೆಲೆ ಗಮನಾರ್ಹವಾಗಿ ಹೆಚ್ಚಳವಾಗಿದೆ.

    ಮನೆ, ಅಂಗಡಿಗಳಲ್ಲಿ ಪೂಜೆ: ಅಮಾವಾಸ್ಯೆ ದಿನವಾದ ಮಂಗಳವಾರ ಖಗ್ರಾಸ ಸೂರ್ಯಗ್ರಹಣ ಇರುವ ಕಾರಣ ಈ ಬಾರಿ ಮೂರು ದಿನ ಲಕ್ಷ್ಮೀ ಪೂಜೆ ನಡೆಯಲಿದೆ. ಅಂಗಡಿಗಳು, ಮನೆಗಳಲ್ಲಿ ನರಕ ಚತುರ್ದಶಿ ದಿನವಾದ ಸೋಮವಾರ ಸಂಜೆ ಶ್ರೀ ಲಕ್ಷ್ಮೀ ಪೂಜೆ ನೆರವೇರಿಸಲಿದ್ದರೆ, ಉಳಿದವರು ಅಮಾವಾಸ್ಯೆ ಸಂಜೆ ಹಾಗೂ ಬಲಿಪಾಡ್ಯಮಿ ಪೂಜೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

    ಬೆಳಕಿನ ಹಬ್ಬಕ್ಕೆ ವಿಜಯನಗರ ಜಿಲ್ಲೆಯಲ್ಲಿ ಭರದ ಸಿದ್ಧತೆ

    ಎರಡು ವರ್ಷಗಳಿಗಿಂತ ಈ ಬಾರಿ ಪಟಾಕಿ ವ್ಯಾಪಾರ ಉತ್ತಮವಾಗಿದೆ. ಜನರು ಕೂಡ ಆಸಕ್ತಿಯಿಂದ ಖರೀದಿಸುತ್ತಿದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ನಡೆದರೆ, ಲಾಭ ಸಾಧ್ಯವಾಗುತ್ತದೆ. ಕೋವಿಡ್ ಮತ್ತಿತರೆ ಕಾರಣಗಳಿಂದಾಗಿ ದರಗಳಲ್ಲಿ ತುಸು ಏರಿಕೆಯಾಗಿದೆ.
    | ನಾಗರಾಜ, ಪಟಾಕಿ ಮಳಿಗೆದಾರ

    ಸತತ ಮಳೆಯಿಂದಾಗಿ ತರಕಾರಿ, ಹೂವು ಮತ್ತು ಹಣ್ಣಿನ ಬೆಳೆಗಳು ಬಹುತೇಕ ಹಾನಿಯಾಗಿದೆ. ಹಣ್ಣು, ಹೂವು ಹೊರತಾಗಿ ಬಾಳೆ ದಿಂಡು, ಮತ್ತಿತರೆ ಪೂಜಾಸಾಮಗ್ರಿಗಳ ಬೆಲೆಗಳು ಯಥಾಸ್ಥಿತಿಯಲ್ಲಿವೆ.
    | ವಾಸು, ಬೀದಿ ಬದಿ ವ್ಯಾಪಾರಿ

    ಹಿಂದಿನ ವರ್ಷಗಳಿಗೆ ಹೋಲಿಸಿದರೆ ಎಲ್ಲ ಬೆಲೆಗಳು ಹೆಚ್ಚಳವಾಗಿವೆ. ಪಟಾಕಿ ಮಾರಾಟಗಾರರು ಡಿಸ್ಕೌಂಟ್ ನೀಡಿದರೂ, 1500 ರೂ. ನೀಡಿದರೂ, ಸಣ್ಣ ಕ್ಯಾರಿಬ್ಯಾಗ್ ತುಂಬುತ್ತಿಲ್ಲ. ದೀಪಾವಳಿಯಲ್ಲಿ ಪಟಾಕಿಗಳಿಗೆ ಮೊದಲಾಧ್ಯತೆ. ಪಟಾಕಿ ಹಾರಿಸಿದರೆ, ಮಕ್ಕಳಿಗೆ ಸಂಭ್ರಮ. ಬೆಲೆ ಏಷ್ಟೇ ಆದರೂ, ಖರೀದಿಸಿರುವುದು ಅನಿವಾರ್ಯ.
    | ಪ್ರಕಾಶ, ಗ್ರಾಹಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts