More

    ಶ್ರೀಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಶೂನ್ಯಪೀಠಾರೋಹಣ 24ಕ್ಕೆ ನಡೆಸುವುದಾಗಿ ವಳ್ಳಬಳ್ಳಾರಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಘೋಷಣೆ

    ಹೊಸಪೇಟೆ: ನಗರದ ಶ್ರೀ ಕೊಟ್ಟೂರುಸ್ವಾಮಿ ಮಠದ ಲಿಂಗೈಕ್ಯ ಜಗದ್ಗುರು ಡಾ.ಸಂಗನಬಸವ ಮಹಾಶಿವಯೋಗಿಗಳವರ ಇಚ್ಛೆಯಂತೆ ಮಠದ 20ನೇ ಜಗದ್ಗುರುಗಳಾಗಿ ಶ್ರೀ ಮ.ನಿ.ಪ್ರ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳಿಗೆ ಮಾ.24 ರಂದು ಶೂನ್ಯಸಿಂಹಾಸನರೋಹಣ ಹಾಗೂ ಅಧಿಕಾರ ಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಳ್ಳಬಳ್ಳಾರಿ ಶ್ರೀ ಸುವರ್ಣಗಿರಿ ವಿರಕ್ತಮಠದ ಮ.ನಿ.ಪ್ರ. ಸಿದ್ಧಲಿಂಗ ಮಹಾಸ್ವಾಮಿಗಳು ತಿಳಿಸಿದರು.

    ನಗರದ ಕೊಟ್ಟೂರುಸ್ವಾಮಿ ಮಠದಲ್ಲಿ ಶ್ರೀಗಳ ಶೂನ್ಯಪೀಠಾರೋಹಣ ಹಾಗೂ ಅಧಿಕಾರ ಗ್ರಹಣ ಕುರಿತು ಸೋಮವಾರ ಸಮುದಾಯದ ಮುಖಂಡರೊಂದಿಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಹಾಲಕರೆ ಶಿವಯೋಗಮಂದಿರದಲ್ಲಿ ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳಿಗೆ ಪಟ್ಟಾಭಿಷೇಕ ಕಾರ್ಯಕ್ರಮ ನಡೆದಿದೆ. ಹೊಸಪೇಟೆ ಕೊಟ್ಟೂರುಸ್ವಾಮಿ ಮಠದಲ್ಲಿ ಶೂನ್ಯಸಿಂಹಾಸನರೋಹಣ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಕೆಲ ಭಕ್ತರು ಅತ್ಯಂತ ವಿಜೃಂಭಣೆಯಿಂದ ಮಾಡಲು ಸಮಯ ಕೇಳಿದ್ದಾರೆ. ಆದರೆ, ಮಠದಿಂದ ನಡೆಯುವ ಅನೇಕ ಕಾರ್ಯಕ್ರಮಗಳು ನನೆಗುದಿಗೆ ಬೀಳಬಾರದೆಂಬ ಸದುದ್ದೇಶದಿಂದ ಸರ್ವಧರ್ಮ ಸಮನ್ವಯ ರಥೋತ್ಸವ ದಿನದಂದೇ ಶೂನ್ಯ ಪೀಠಾರೋಹಣ, ಅಧಿಕಾರ ಗ್ರಹಣ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದರು.

    ಸಂತೆಕೆಲ್ಲೂರು ಶ್ರೀ ಘನಮಠದಾರ್ಯಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು ಮಾತನಾಡಿದರು. ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿ, ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ, ಕೊಟ್ಟೂರು ದೇಶಿಕರು, ನಿರಂಜನಪ್ಪರಭು ದೇವರು, ಸದಾಶಿವ ದೇವರು, ಸಿದ್ಧಲಿಂಗ ದೇವರು, ಮರಿಕೊಟ್ಟೂರು ದೇವರು, ಸಿದ್ದೇಶ್ವರ ದೇವರು ಇದ್ದರು.

    ವೀರಶೈವ ಲಿಂಗಾಯತ ಸಮುದಾಯದ ತಾಲೂಕು ಅಧ್ಯಕ್ಷ ಶರಣಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಕೊಟ್ರೇಶ, ಹಿರಿಯ ಮುಖಂಡರಾದ ಚಂದ್ರಶೇಖರಪ್ಪ, ಸಾಲಿಸಿದ್ದಯ್ಯಸ್ವಾಮಿ, ಸಾಹಿತಿ ಮೃತ್ಯುಂಜಯ ರುಮಾಲೆ, ಎನ್.ಎಸ್.ರೇವಣಸಿದ್ದಪ್ಪ ಇತರರು ಅಭಿಪ್ರಾಯ ಹಂಚಿಕೊಂಡರು. ಕಾರ್ಯದರ್ಶಿ ಕೆ.ರವಿಶಂಕರ ಹಾಗೂ ಮುಖಂಡರು ಇದ್ದರು. ಮಠದ ಶರಣಸ್ವಾಮಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts