More

    ಮಲ್ಲಿಕಾ ಘಂಟಿ ಅವಧಿಯಲ್ಲಿ ಅಕ್ರಮ ನೇಮಕಾತಿ: ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ ಆರೋಪ

    ಹೊಸಪೇಟೆ: ನನ್ನ ಅವಧಿಯಲ್ಲಿ ಅಕ್ರಮ ನೇಮಕ ನಡೆದಿಲ್ಲ. ಹಿಂದಿನ ಕುಲಪತಿ ಡಾ.ಮಲ್ಲಿಕಾ ಘಂಟಿ ಅವಧಿಯಲ್ಲಿ ನಿಯಮಬಾಹಿರ ನೇಮಕಾತಿ ನಡೆದಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಆರೋಪಿಸಿದ್ದಾರೆ.

    ವಿವಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದಿನ ಕುಲಪತಿ ಅವಧಿಯಲ್ಲಿ ಅರ್ಹರಿಗೆ ಅನ್ಯಾಯವಾಗಿದೆ. ಹಿಂದಿನ ನೇಮಕಾತಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಪ್ರಾಧಿಕಾರದ ಅನುಮೋದನೆ ಪಡೆದು ಅಭ್ಯರ್ಥಿಗಳ ವಿದ್ಯಾರ್ಹತೆ ಸೇರಿದಂತೆ ಮತ್ತಿತರ ದಾಖಲೆಗಳನ್ನು ಒದಗಿಸುವಂತೆ ಸರ್ಕಾರ ಕೋರಿದೆ. ಸದ್ಯದಲ್ಲಿಯೇ ಸಮಿತಿ ರಚಿಸಿ, ಅದರ ವರದಿ ಆಧರಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು. ಆದರೆ, ಡಾ.ಎಸ್.ಮಲ್ಲಿಕಾ ಘಂಟಿ ಅವರೇ ನ್ಯಾಯಾಂಗ ತನಿಖೆ ನಡೆಸಲು ತಿಳಿಸಿದ್ದಾರೆ. ನ್ಯಾಯಾಂಗ ತನಿಖೆಗೆ ಒಪ್ಪಿಸುವ ಅಧಿಕಾರ ವಿವಿಗಿಲ್ಲ. ಆದ್ದರಿಂದ ಸಿಂಡಿಕೇಟ್ ಸಭೆ ಮತ್ತು ಸರ್ಕಾರದೊಂದಿಗೆ ಚರ್ಚಿಸಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಒಪ್ಪಿಸಲಾಗುವುದು ಎಂದರು.

    ಘಂಟಿಯವರ ಅವಧಿಯಲ್ಲಿ ಸಿಬ್ಬಂದಿ ನೇಮಕ ಆದೇಶದಲ್ಲಿ ಕುಲಾಧಿಪತಿ ಅನುಮೋದನೆ ನೀಡಿದ ನಂತರ ನೇಮಕಾತಿ ಸಿಂಧುಗೊಳ್ಳಲಿದೆ ಎಂದು ವಿಧಿಸಿದ್ದ ಷರತ್ತನ್ನು ಅಭ್ಯರ್ಥಿಗಳು ಒಪ್ಪಿಕೊಂಡು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ಇದುವರೆಗೆ ಕುಲಾಧಿಪತಿಯವರ ಅನುಮೋದನೆ ದೊರೆತಿಲ್ಲ. ನೇಮಕಾತಿಗಳೇ ಸಿಂಧುಗೊಳ್ಳದ ಸಿಬ್ಬಂದಿ ಸೇವಾಪೂರ್ವ ಅವಧಿಯನ್ನು ಘೋಷಿಸುವುದು ಮತ್ತು ಸಂಘಟನೆಗಳು ಒತ್ತಡ ತರುವ ಪ್ರಕ್ರಿಯೆಗಳು ನಿಯಮಬಾಹಿರವಾದುದು. ಹೋರಾಟ ಮತ್ತು ಮಾಧ್ಯಮಗಳಿಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ನಿಯಮಬಾಹಿರ ಕ್ರಮಕ್ಕೆ ಒತ್ತಡ ತರಲಾಗುತ್ತಿದೆ ಎಂದು ಆಪಾದಿಸಿದರು.

    ಮಿಸ್ಸಿಂಗ್ ರೋಸ್ಟರ್ ಪ್ರಕ್ರಿಯೆ ಆಧರಿಸಿ ನೇಮಕಾತಿ: 2017ರ ಮೊದಲ ಹಂತದ ನೇಮಕಾತಿಯಲ್ಲಿ ನಿಗದಿಪಡಿಸಿದ್ದ ಮಿಸ್ಸಿಂಗ್ ರೋಸ್ಟರ್ ಪ್ರಕ್ರಿಯೆ ಆಧರಿಸಿ 2021ರಲ್ಲಿ ಎರಡನೇ ಹಂತದ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಸರ್ಕಾರ ನಿರ್ದೇಶಿಸಿದಂತೆ ಮೀಸಲು ನಿಗದಿಗೊಳಿಸಲು ಸಮಾಜ ಕಲ್ಯಾಣ ಇಲಾಖೆಗೆ ಉನ್ನತ ಶಿಕ್ಷಣ ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರ ನಿರ್ಣಯ ಆಧರಿಸಿ ಕ್ರಮವಹಿಸಲಾಗುವುದು. ಇನ್ನೂ ನೇಮಕಾತಿ ಪ್ರಕ್ರಿಯೆ ಆರಂಭವೇ ಆಗಿಲ್ಲ, ಅಂಥದರಲ್ಲಿ ಅಕ್ರಮ, ಹಣದ ಆಮಿಷ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು. ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ಡೀನ್‌ಗಳಾದ ಡಾ.ಕೆ.ರವೀಂದ್ರನಾಥ, ರಮೇಶ ನಾಯಕ ಇದ್ದರು.

    ಯಾರ‌್ಯಾರು ನನ್ನ ವಿರುದ್ಧ ಆರೋಪಗಳನ್ನು ಮಾಡಿದ್ದಾರೋ ಅವರ ವಿರುದ್ಧ ಕೆಲವೇ ದಿನಗಳಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವೆ. ನನ್ನ ವಿರುದ್ಧದ ಆರೋಪ ಮಾಡುವ ಬದಲು ದಾಖಲೆಗಳಿದ್ದರೆ ಸಾಬೀತುಪಡಿಸಲಿ.
    | ಡಾ.ಸ.ಚಿ.ರಮೇಶ, ಕನ್ನಡ ವಿವಿ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts