More

    ಹೊಸಕಿತ್ತೂರ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

    ಗುತ್ತಲ: ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕೊರಡೂರ ಗ್ರಾಮಸ್ಥರು ಹೊಸಕಿತ್ತೂರ ಗ್ರಾಪಂ ಕಚೇರಿಗೆ ಸೋಮವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.

    ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಕಾಲನಿಯಲ್ಲಿ 27ಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿವೆ. ಈ ಕುರಿತು ಗ್ರಾಪಂ ಪಿಡಿಒ, ಅಧಿಕಾರಿಗಳು, ಸರ್ವೆ ಮಾಡಿ ತಹಸೀಲ್ದಾರ್​ಗೆ ವರದಿ ಸಲ್ಲಿಸಿದ್ದರು. ಆದರೆ, ಯಾರೊಬ್ಬರನ್ನೂ ಫಲಾನುಭವಿಗಳೆಂದು ಎ, ಬಿ, ಸಿ ಕೆಟಗರಿ ಪರಿಹಾರಕ್ಕೆ ಪರಿಗಣಿಸಿಲ್ಲ. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

    ನಮ್ಮ ಬಿದ್ದ ಮನೆಗಳು ಪಾಳು ಬಿದ್ದಿದ್ದವು. ಅವುಗಳಿಗೆ ಪರಿಹಾರ ನೀಡಲು ಬರುವುದಿಲ್ಲ ಎಂದು ತಹಸೀಲ್ದಾರರು ಗ್ರಾಪಂ ಪಿಡಿಒಗೆ ಹೇಳಿದ್ದಾರಂತೆ. ಯಾವುದೋ ಒಂದು ಪಾಳು ಬಿದ್ದಿರಬಹುದಾದ ಮನೆಯನ್ನೇ ಮಾನದಂಡ ಮಾಡಿಕೊಂಡು ನಮಗೆ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾನಿರತ ಮಹದೇವಪ್ಪ ಸಣ್ಣತಂಗೇರ ಆಕ್ರೋಶ ವ್ಯಕ್ತಪಡಿಸಿದರು.

    ಪಿಡಿಒ ಬಿಟ್ಟರೆ ಯಾರೂ ಪ್ರತಿಭಟನೆ ಸ್ಥಳಕ್ಕೆ ಬರಲಿಲ್ಲ. ಅದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಪಂ ಎದುರೇ ಅಡುಗೆ ತಯಾರಿಸಿ, ಊಟ ಮಾಡಿ ಪ್ರತಿಭಟನೆ ಮುಂದುವರಿಸಿದ್ದಾರೆ.

    ನಿಂಗಪ್ಪ ಮಾಳಗಿ, ಫಕೀರೇಶ ಮತ್ತೂರ, ಚನ್ನಪ್ಪ ಸಣ್ಣತಂಗೇರ, ದೇವಪ್ಪ ಮಾಳಗಿ, ನಾಗರಾಜ ಸಣ್ಣತಂಗೇರ, ರತ್ನವ್ವ ಅಡಿವೆಮ್ಮನವರ, ಗೌರವ್ವ ಮುದಕಪ್ಪನವರ, ಮಾಳವ್ವ ಸಣ್ಣತಂಗೇರ, ಶಾಂತವ್ವ ಸಣ್ಣತಂಗೇರ ಇತರರಿದ್ದರು.

    ಕಳೆದ ವರ್ಷ ಅತಿಯಾದ ಮಳೆಯಿಂದ ಕೊರಡೂರ ಗ್ರಾಮದಲ್ಲಿ ಅನೇಕ ಮನೆಗಳು ಹಾನಿಗೊಳಗಾಗಿದ್ದವು. ಸರ್ವೆ ನಡೆಸಿ ಹಾನಿ ಪ್ರಮಾಣ ನಮೂದಿಸಿ ತಹಸೀಲ್ದಾರ್​ಗೆ ವರದಿ ನೀಡಿದ್ದೇವೆ. ಆದರೆ, ಅದರನ್ವಯ ಯಾರನ್ನೂ ಫಲಾನುಭವಿ ಅಂತ ಗಣನೆಗೆ ತೆಗೆದುಕೊಳ್ಳದಿರುವುದು ಗೊತ್ತಿಲ್ಲ.

    | ಶಾರದಾ ಜಾಲವಾಡಿ, ಹೊಸ ಕಿತ್ತೂರ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts