More

    ಹೊಸಹಳ್ಳಿ ಅಥವಾ ಮತ್ತೂರಿನಲ್ಲಿ ಗಮಕ ಅಧ್ಯಯನ ಪೀಠ

    ಶಿವಮೊಗ್ಗ: ಹೊಸಹಳ್ಳಿ ಅಥವಾ ಮತ್ತೂರಿನಲ್ಲಿ ಗಮಕ ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಒಂದು ಕೋಟಿ ರೂ. ಅನುದಾನ ನೀಡುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಸಮ್ಮತಿ ನೀಡಬೇಕಿದೆ ಎಂದು ಮಾಜಿ ಎಂಎಲ್‌ಸಿ ಎಂ.ಬಿ.ಭಾನುಪ್ರಕಾಶ್ ಹೇಳಿದರು.
    ಹೊಸಹಳ್ಳಿಯ ಗಮಕ ಭವನದಲ್ಲಿ ಭಾನುವಾರ ಪದ್ಮಶ್ರೀ ಪುರಸ್ಕೃತ ಎಚ್.ಆರ್.ಕೇಶವಮೂರ್ತಿ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಆರನೇ ಅಹೋರಾತ್ರಿ ಗಮಕ ಕಾರ್ಯಕ್ರಮ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಗಮಕವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಧ್ಯಯನ ಪೀಠ ಮಹತ್ವದ ಪಾತ್ರ ವಹಿಸಲಿದೆ ಎಂದರು.
    ಚುನಾವಣೆಗೂ ಮುನ್ನವೇ ಅಧ್ಯಯನ ಪೀಠಕ್ಕೆ ಅನುದಾನ ಪಡೆಯಲು ಅಗತ್ಯ ಪ್ರಯತ್ನ ನಡೆಸಲಾಗಿದೆ. ಎಚ್.ಆರ್.ಕೇಶವಮೂರ್ತಿ ಅವರಿಂದಲೇ ಈ ಅಧ್ಯಯನ ಪೀಠ ಉದ್ಘಾಟಿಸಲು ಆಲೋಚಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಗಮಕ ಅಧ್ಯಯನ ಪೀಠ ಸ್ಥಾಪನೆಯಾದ ಬಳಿಕ ಗಮಕಾಸಕ್ತರು ಕೇಶವಮೂರ್ತಿ ಅವರ ಜೀವನ, ಗಮಕಕ್ಕೆ ಅವರು ನೀಡಿದ ಕೊಡುಗೆ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆಯುವುದೇ ಅವರಿಗೆ ನಾವು ಸಲ್ಲಿಸುವ ದೊಡ್ಡ ಗೌರವ ಎಂದು ಹೇಳಿದರು.
    ಗಮಕ ಕಲಾ ಪರಿಷತ್ ಅಧ್ಯಕ್ಷ ಎಚ್.ಎಸ್.ಸತ್ಯನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗದ ಗಮಕ ವಾಚಕಿ ಚಂಪಕಾ ಶ್ರೀಧರ್ ಮತ್ತು ಸಾಗರದ ವ್ಯಾಖ್ಯಾನಕಾರ ಕೆ.ಆರ್.ಕೃಷ್ಣಯ್ಯ ಅವರಿಗೆ ಡಾ. ಎಚ್.ಶಾಂತರಾಮ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಚ್.ಎಸ್.ಸತ್ಯನಾರಾಯಣ್, ಎಚ್.ಕೆ.ಕೇಶವಮೂರ್ತಿ, ಎಸ್.ನಾಗರಾಜ್, ಅಶ್ವತ್ಥನಾರಾಯಣ ಶೆಟ್ಟಿ, ಎಚ್.ಎಲ್.ರಾಜಾರಾಂ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts