More

    ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಿ

    ಹೊಸದುರ್ಗ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಗಟ್ಟದಿದ್ದರೆ ಅಧಿಕಾರಿಗಳನ್ನೇ ಹೊಣೆಯಾಗಿಸಲಾಗುವುದು ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಎಚ್ಚರಿಸಿದರು.

    ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಯುವ ಕುರಿತು ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಂದಾಯ, ಅಬಕಾರಿ ಹಾಗೂ ಪೊಲೀಸ್ ಇಲಾಖೆ ಆಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದರು.

    ತಾಲೂಕಲ್ಲಿ ನಿಗದಿತ ಬೆಲೆಗಿಂತ ಹತ್ತು ಪಟ್ಟು ಹೆಚ್ಚಿನ ದರಕ್ಕೆ ಮದ್ಯ ಮಾರಲಾಗುತ್ತಿದೆ ಎಂಬ ಖಚಿತ ದೂರುಗಳಿವೆ. ಮದ್ಯದ ಅಂಗಡಿಗಳಲ್ಲಿನ ಮದ್ಯವನ್ನು ಅಕ್ರಮವಾಗಿ ಹೊರ ತೆಗೆದು ಬ್ಲಾಕ್‌ನಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ ಎಂಬ ಮಾಹಿತಿ ಇದೆ.

    ಈ ದಂಧೆಗೆ ಸಾಕ್ಷಿ ಎನ್ನುವಂತೆ ಜಾನಕಲ್ಲು ಗ್ರಾಮದ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆಯಲ್ಲಿನ ಸಿಬ್ಬಂದಿಯೇ ಅಂಗಡಿ ಬಾಗಿಲು ತೆಗೆದು ಮದ್ಯ ಕದ್ದಿದ್ದಾರೆ. ಅಬಕಾರಿ ಸಚಿವರು ಸ್ಟಾಕ್ ಹೊಂದಿಕೆಯಾಗದ ಅಂಗಡಿಗಳ ಪರವಾನಗಿ ರದ್ದುಗೊಳಿಸುವ ಹೇಳಿಕೆ ನೀಡುತ್ತಿದ್ದಂತೆ ಅಂಗಡಿಯಲ್ಲಿರುವ ಮದ್ಯವನ್ನು ಮಾರಾಟ ಮಾಡಿದವರು ಕಳ್ಳತನ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಇಂತಹ ಪ್ರಕರಣ ಕುರಿತು ವಿಶೇಷ ತನಿಖೆ ನಡೆಸಬೇಕು ಎಂದು ಸೂಚಿಸಿದರು.

    ತಹಸೀಲ್ದಾರ್ ತಿಪ್ಪೇಸ್ವಾಮಿ, ಸಿಪಿಐ ಫೈಜುಲ್ಲಾ, ಪಿಎಸ್‌ಐ ಶಿವಕುಮಾರ್, ಅಬಕಾರಿ ಎಸ್‌ಐ ಪ್ರಮೀಳಾ, ತಾಪಂ ಎಡಿ ರಂಗನಾಥ್ ಮತ್ತಿತರರಿದ್ದರು.

    ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ಏ.22ರಂದು ವಿಸೃತ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಶಾಸಕರು ತುರ್ತು ಸಭೆ ಕರೆದು ಕ್ರಮಕೈಗೊಂಡಿದ್ದಾರೆ.

    ಸ್ಟಾಕ್ ಪರಿಶೀಲಿಸಿ ಮಾರಾಟಕ್ಕೆ ಅನುಮತಿ ನೀಡಿ: ಕಳ್ಳತನವಾದ ಮದ್ಯದಂಗಡಿ ಮಾಲೀಕರು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿದರೆ ನಿಜ ಹೊರಬರಲಿದೆ. ಲಾಕ್‌ಡೌನ್ ಬಳಿಕ ಕಂದಾಯ, ಪೊಲೀಸ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಅಂಗಡಿ ಬಳಿ ಹಾಜರಿದ್ದು, ಸ್ಟಾಕ್ ಪರಿಶೀಲಿಸಿ ನಂತರ ಮಾರಾಟಕ್ಕೆ ಅವಕಾಶ ನೀಡಬೇಕು. ಹಳ್ಳಿಗಳಲ್ಲಿ ಯಾವುದೇ ಕಾರಣಕ್ಕೂ ಅಕ್ರಮ ಮದ್ಯ ಮಾರಾಟ ನಡೆಯದಂತೆ ಕ್ರಮವಹಿಸಬೇಕು ಎಂದು ಶಾಸಕರು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts