More

    ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

    ಹೊಸದುರ್ಗ: ಪಟ್ಟಣದ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ವಾಣಿ ವಿಲಾಸ ಸಾಗರದ ಹಿನ್ನೀರಿನಿಂದ ನೀರು ತರಲು ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.

    ಕುಡಿವ ನೀರಿನ ಸಮಸ್ಯೆ ಕುರಿತು ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಸೋಮವಾರ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಹೆಚ್ಚು ಮಳೆಯಿಂದ ಕೆಲ್ಲೋಡು ಬ್ಯಾರೇಜ್ ಒಡೆದು ಹೋಗಿ ನೀರು ಖಾಲಿಯಾಗಿದೆ. ಭದ್ರಾ ಯೋಜನೆ ಕಾಲುವೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ 2 ತಿಂಗಳು ನೀರು ಲಭ್ಯವಾಗುವುದಿಲ್ಲ ಎಂಬ ಮಾಹಿತಿಯಿದೆ ಎಂದರು.

    ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗಿರುವುದರಿಂದ ಬರಪೀಡಿತ ಪ್ರದೇಶಗಳಿಗೆ ಸರ್ಕಾರ ನೀಡುವ ಅನುದಾನ ಕೂಡ ದೊರೆಯುತ್ತಿಲ್ಲ. ಇದು ನಮ್ಮನ್ನು ಸಂಕಷ್ಟಕ್ಕೆ ಸಿಲುಕಿದೆ ಎಂದು ತಿಳಿಸಿದರು.

    ಲಭ್ಯವಿರುವ ಅನುದಾನದಲ್ಲೇ ಕೊಳವೆಬಾವಿ ಹಾಗೂ ಪೈಪ್‌ಲೈನ್ ಸರಿಪಡಿಸಿಕೊಂಡು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಈ ಕಾರ್ಯಕ್ಕೆ ಆರು ಟ್ಯಾಂಕರ್ ಲಭ್ಯ ಇವೆ. ಪಟ್ಟಣದ ಕುಡಿವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಪುರಸಭೆಯ 14ನೇ ಹಣಕಾಸು ಹಾಗೂ ಡಿಎಂಎಫ್ ನಿಧಿ ಬಳಸಿಕೊಂಡು ನಾಗಯ್ಯನಹಟ್ಟಿಯಿಂದ ವಾಣಿ ವಿಲಾಸ ಸಾಗರದ ಹಿನ್ನೀರಿಂದ ಪಟ್ಟಣಕ್ಕೆ ನೀರು ತರಲು ಯೋಜನೆ ರೂಪಿಸಲಾಗಿದೆ ಎಂದರು.

    ಪಟ್ಟಣವಲ್ಲದೇ ಹಳ್ಳಿಗಳಿಗೂ ನೀರೊದಗಿಸುವ ಚಿಂತನೆಯಿದೆ. ನಾಳೆಯಿಂದಲೇ ಸರ್ವೆ ಕಾರ್ಯ ಆರಂಭಿಸಲಾಗುತ್ತಿದ್ದು, ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ವಿಲೇಜ್ ಟೂರಿಸಂ ಯೋಜನೆಯಡಿ ವಾಣಿ ವಿಲಾಸ ಸಾಗರದ ಹಿನ್ನೀರು ಬಳಿಯ ನಾಗಯ್ಯನಹಟ್ಟಿಯಲ್ಲಿ ಪ್ರವಾಸೋದ್ಯಮ ಕೇಂದ್ರ ತೆರೆದು ಪ್ರವಾಸಿಗರನ್ನು ಆಕರ್ಷಿಸಿ ಸ್ಥಳೀಯರಿಗೆ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದರು.

    ಬಹುಗ್ರಾಮ ಕುಡಿವ ನೀರು ಯೋಜನೆ: ಭದ್ರಾ ಜಲಾಶಯದಿಂದ ತಾಲೂಕಿನ ಹಳ್ಳಿಗಳಿಗೆ ಕುಡಿವ ನೀರು ಸರಬರಾಜು ಮಾಡುವ ಯೋಜನೆಗೆ ಕಳೆದ ಸರ್ಕಾರ ತುರಾತುರಿಯಲ್ಲಿ ಟೆಂಡರ್ ಕರೆದ ಹಿನ್ನೆಲೆಯಲ್ಲಿ ಒಬ್ಬರೇ ಬಿಡ್‌ದಾರರು ಭಾಗವಹಿಸಿದ್ದು, ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣಕ್ಕೆ ಬಿಡ್ ಸಲ್ಲಿಸಿದ್ದರಿಂದ ಟೆಂಡರ್ ಸ್ಥಗಿತಗೊಂಡಿದೆ. ಯೋಜನಾ ವೆಚ್ಚ ಹೆಚ್ಚಾಗಿರುವ ಕಾರಣ ಮತ್ತೆ ಸಚಿವ ಸಂಪುಟದ ಅನುಮೋದನೆ ಪಡೆದು ಟೆಂಡರ್ ಕರೆಯಬೇಕಾಗಿರುವುದರಿಂದ ಯೋಜನೆ ಅನುಷ್ಠಾನ ತಡವಾಗಲಿದೆ ಎಂದು ಶಾಸಕರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts