More

    ಸೂಕ್ತ ದಾಖಲೆ ಸಲ್ಲಿಸಿ ಇ-ಸ್ವತ್ತು ಪಡೆಯಿರಿ

    ಹೊಸದುರ್ಗ: ಗ್ರಾಮೀಣ ಪ್ರದೇಶದಲ್ಲಿರುವ ವಾಸದ ಮನೆ ಹಾಗೂ ನಿವೇಶನ ಸೇರಿ ವೈಯಕ್ತಿಕ ಆಸ್ತಿಗಳ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಗ್ರಾಪಂ ವತಿಯಿಂದ ನಿಯಮಾನುಸಾರ ಆಸ್ತಿಯ ಇ-ಸ್ವತ್ತು ಪಡೆದುಕೊಳ್ಳಬೇಕು ಎಂದು ಜಿಪಂ ಸಿಇಒ ದಿವಾಕರ್, ಸಾರ್ವಜನಿಕರಿಗೆ ಕರೆ ನೀಡಿದರು.

    ತಾಲೂಕಿನ ಕಬ್ಬಳ, ಕುರುಬರಹಳ್ಳಿ, ಬೆಲಗೂರು, ತಂಡಗ, ಮಧುರೆ ಗ್ರಾಪಂಗಳಿಗೆ ಗುರುವಾರ ಭೇಟಿ ನೀಡಿ ಮನೆ ಬಾಗಿಲಿಗೆ ಇ-ಸ್ವತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಸಾರ್ವಜನಿಕರು ತಮ್ಮ ಆಸ್ತಿಗೆ ಸಂಭಂದಿಸಿದಂತೆ ಇ-ಸ್ವತ್ತು ಪಡೆಯಲು ಸರ್ಕಾರ ನಿಗದಿಪಡಿಸಿರುವ ಶುಲ್ಕ ಮಾತ್ರ ಪಾವತಿಸಬೇಕು. ಗ್ರಾಪಂನ ಯಾವುದೇ ಅಧಿಕಾರಿ, ಸಿಬ್ಬಂದಿಗೆ ಹೆಚ್ಚಿಗೆ ಹಣ ನೀಡಬೇಕಿಲ್ಲ. ಇಂತಹ ದೂರು ಕೇಳಿ ಬಂದರೆ ಗ್ರಾಪಂ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಸಿದರು.

    ಕಂದಾಯ ಇಲಾಖೆಯ ಜಾಗಗಳು, ಗ್ರಾಮ ಠಾಣಾದ ಸರ್ಕಾರಿ ಜಾಗ, ಗೋಮಾಳ, ಕೆರೆ ಒತ್ತುವರಿ ಸಹಿಸುವುದಿಲ್ಲ. ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಕಾನೂನು ಕ್ರಮ ಜರುಗಿಸಲಾಗುವುದು. ನಕಲಿ ದಾಖಲೆ ಸಲ್ಲಿಸಿ ಇ-ಸ್ವತ್ತು ಪಡೆದರೆ ಅದು ಕಾನೂನು ಬದ್ಧ ದಾಖಲೆಯಾಗುವುದಿಲ್ಲ. ಅಂತಹವರ ವಿರುದ್ಧ ಕೂಡ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

    ಜಿಲ್ಲೆಯ 189 ಗ್ರಾಪಂಗಳಲ್ಲೂ ಇ-ಸ್ವತ್ತು ನೀಡುವುದನ್ನು ಆಂದೋಲನವಾಗಿ ನಡೆಸಿ ಪ್ರತಿಯೊಬ್ಬರ ಆಸ್ತಿಗೂ ಇ-ಸ್ವತ್ತು ಒದಗಿಸುವ ಉದ್ದೇಶ ಹೊಂದಲಾಗಿದೆ. ಎಲ್ಲರಿಗೂ ಇ-ಸ್ವತ್ತು ಒದಗಿಸಲು ಅಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಗ್ರಾಮೀಣ ಪ್ರದೇಶದ ಮನೆ ಹಾಗೂ ನಿವೇಶನಗಳ ಕಂದಾಯ, ನಲ್ಲಿ ಕಂದಾಯ ಸಕಾಲದಲ್ಲಿ ಪಾವತಿಸುವ ಮೂಲಕ ಗ್ರಾಮಗಳ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದರು.

    ಬಿಸಿಯೂಟ ತಯಾರಿಕೆ ಪರಿಶೀಲನೆ: ಕಬ್ಬಳ ಗ್ರಾಪಂ ವ್ಯಾಪ್ತಿಯ ಮಲ್ಲೆನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಸಿಇಒ ದಿವಾಕರ್, ಕಲಿಕೆಯ ಗುಣಮಟ್ಟ ಹಾಗೂ ಬಿಸಿಯೂಟ ತಯಾರಿಕೆಯನ್ನು ಪರಿಶೀಲಿಸಿದರು. ಬಿಸಿಯೂಟ ತಯಾರಿಕೆಯಲ್ಲಿ ಶುಚಿತ್ವ ಹಾಗೂ ಸ್ವಚ್ಛತೆ ಕಾಪಾಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ಕಲಿಕೆಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಶಿಕ್ಷಕರಿಗೆ ಸೂಚನೆ ನೀಡಿದರು.

    ಉತ್ತಮ ಸೇವೆ ನೀಡಲು ತಾಕೀತು: ಬೆಲಗೂರಿನ ಸರ್ಕಾರಿ ಸಾರ್ವಜನಿಕ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪಶು ಚಿಕಿತ್ಸಾ ಆಸ್ಪತ್ರೆಗೆ ಭೇಟಿ ನೀಡಿದ ಸಿಇಒ, ಅಸ್ಪತ್ರೆಗಳ ಕಾರ್ಯವೈಖರಿ, ಸ್ವಚ್ಛತೆ ಪರಿಶೀಲಿಸಿದರು. ಸಾರ್ವಜನಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಜತೆಗೆ ಆಸ್ಪತ್ರೆಯ ಪರಿಸರವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು. ರೋಗಿಗಳಿಗೆ ಯಾವುದೆ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

    ತಾಪಂ ಇಒ ವಿಶ್ವನಾಥ್, ಎಡಿ ಶಿವಮೂರ್ತಿ, ಪಿಡಿಒಗಳಾದ ವಿಶ್ವನಾಥ್, ರಂಗಸ್ವಾಮಿ, ತಾರಾ, ಶಾಂತಕುಮಾರ ಇತರರಿದ್ದರು.

    ಹಳ್ಳಿಗಳಲ್ಲಿ ಬೆಳೆಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆಯಿಲ್ಲ. ರೈತರ ಶ್ರಮದ ದುಡಿಮೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಆದ್ದರಿಂದ ಬೆಲಗೂರು ಗ್ರಾಮದಲ್ಲಿ ನಡೆಯುತ್ತಿರುವ ಹಳ್ಳಿಸಂತೆ ಕಟ್ಟೆಗಳ ನಿರ್ಮಾಣ ಕಾಮಗಾರಿಯನ್ನು ಕೆಆರ್‌ಡಿಎಲ್ ಅಧಿಕಾರಿಗಳು ಶೀಘ್ರ ಪೂರ್ಣಗೊಳಿಸಿ ಗ್ರಾಪಂಗೆ ವಹಿಸಬೇಕು.
    ದಿವಾಕರ್ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts