ಹೊಸದುರ್ಗ: ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಹಿಂಭಾಗದಲ್ಲಿ ಒತ್ತುವರಿಯಾಗಿರುವ ಕಾಲೇಜಿನ ಜಾಗ ಹಾಗೂ ರಾಜಕಾಲುವೆಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.
ಒತ್ತುವರಿ ತೆರವು ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.
ಸರ್ಕಾರಿ ಜೂನಿಯರ್ ಕಾಲೇಜಿನ 18 ಎಕರೆ ಒತ್ತುವರಿ ಮಾಡಿ ನಿವೇಶನಗಳನ್ನು ರಚಿಸಿದ್ದು, ಸದ್ಗುರು ಆಶ್ರಮದಿಂದ ಹಿರಿಯೂರು ರಸ್ತೆಯವರೆಗೆ ಸಾಗುವ ರಾಜಕಾಲುವೆ ಒತ್ತುವರಿ ಮಾಡಲಾಗಿದೆ ಎಂದು ದೂರು ಕೇಳಿಬಂದಿದೆ ಎಂದರು.
ಕಂದಾಯ, ಸರ್ವೇ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಸರ್ಕಾರಿ ದಾಖಲೆಯಂತೆ ಒತ್ತುವರಿ ಜಾಗ ತೆರವುಗೊಳಿಸಿ ಕಾಲೇಜು ಆವರಣಕ್ಕೆ ತಂತಿ ಬೇಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಅಂದಾಜು 60 ಅಡಿ ರಾಜಕಾಲುವೆ ಒತ್ತುವರಿಯಿಂದ ಮೂರಡಿಗೆ ಇಳಿದಿದೆ. ಮಳೆಯ ನೀರು ಸರಾಗವಾಗಿ ಮುಂದಕ್ಕೆ ಹೋಗದೆ ಜನವಸತಿ ಪ್ರದೇಶಕ್ಕೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ಕಂದಾಯ ಇಲಾಖೆ, ಸರ್ವೇ ಇಲಾಖೆ ಹಾಗೂ ಪುರಸಭೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಹಳೆಯ ದಾಖಲೆಯಲ್ಲಿರುವಂತೆ ರಾಜಕಾಲುವೆಯ ವಿಸ್ತೀರ್ಣಕ್ಕೆ ತಕ್ಷಣ ಒತ್ತುವರಿ ತೆರವುಗೊಳಿಸಬೇಕು ಎಂದು ತಹಸೀಲ್ದಾರ್‌ಗೆ ಸೂಚಿಸಿದರು.
ಪುರಸಭೆ ಮುಖ್ಯಾಧಿಕಾರಿ ಡಿ.ಉಮೇಶ್, ಸರ್ವೇಯರ್ ಕರಿಯಪ್ಪ, ಬಿಇಒ ಎಲ್.ಜಯಪ್ಪ, ಪ್ರಾಚಾರ್ಯ ಮಲ್ಲಪ್ಪ, ಮಾಜಿ ಪುರಸಭಾ ಸದಸ್ಯ ಇ.ವಿ.ಶೀತಲ್‌ಕುಮಾರ್ ಮತ್ತಿತರಿದ್ದರು.
ಸರ್ಕಾರಿ ದಾಖಲೆಯಲ್ಲಿರುವಂತೆ ರಾಜಕಾಲುವೆ ಹಾಗೂ ಸರ್ಕಾರಿ ಜೂನಿಯರ್ ಕಾಲೇಜಿನ ಮೈದಾನವನ್ನು ಅಳತೆ ಮಾಡಿಸಿ, ಒತ್ತುವರಿಯನ್ನು ತೆರವುಗೊಳಿಸಲಾಗುವುದು. ಇಂದಿನಿಂದಲೇ ತೆರವು ಕಾರ್ಯಾಚರಣೆ ಅರಂಭಿಸಲಾಗುವುದು.
ತಿಪ್ಪೇಸ್ವಾಮಿ ತಹಸೀಲ್ದಾರ್