More

    ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಭದ್ರಾ ಮೇಲ್ದಂಡೆ ಯೋಜನೆ ಕುಂಠಿತ

    ಜಗಳೂರು: ತಾಲೂಕು ನಿರಂತರ ಬರದ ಬವಣೆ ಅನುಭವಿಸುತ್ತಿದ್ದರೂ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರಾವರಿ ಒಳಪಡಿಸಲು ಸಾಧ್ಯವಾಗದೇ ಇರುವುದಕ್ಕೆ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಕಾರಣ ಎಂದು ಹೋರಾಟಗಾರ, ಸಾಹಿತಿ ಡಾ.ಯಾದವರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕಿಗೆ ಸಮಗ್ರ ನೀರಾವರಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಏ. 13ರಂದು ಹಮ್ಮಿಕೊಂಡಿರುವ ಜಗಳೂರು ಬಂದ್ ಸಂಬಂಧ ಸೋಮವಾರ ಪಟ್ಟಣದ ಹಳೇ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    1967ರಿಂದಲೂ ಭದ್ರಾ ನೀರಿಗಾಗಿ ಹೋರಾಟ ನಡೆಯುತ್ತಿದೆ. ಈಗಾಗಲೇ ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು, ನಾಯಕನಟ್ಟಿ ಮತ್ತಿತರ ಕಡೆ ಸ್ವಯಂ ಪ್ರೇರಿತ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗಿದೆ. ಹಾಗಾಗಿ, ಜಗಳೂರಿನ ಜನರು ಸ್ವಯಂಪ್ರೇರಿತರಾಗಿ ಬಂದ್ ಮಾಡಿ ಸಂಪೂರ್ಣ ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

    ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಿದ್ದೇವೆಂದು ಕೇಂದ್ರ ಸರ್ಕಾರ ಸುಳ್ಳು ಮಾಹಿತಿ ನೀಡಿ ಜನರನ್ನು ದಿಕ್ಕು ತಪ್ಪಿಸಿದೆ. ಈಗಾಗಲೇ ಯೋಜನೆ ಹಳ್ಳ ಹಿಡಿದಿದೆ. ಎರಡು ಸರ್ಕಾರಗಳು ಜನರಿಗೆ ಮೋಸ ಮಾಡುತ್ತಿವೆ. ಆದ್ದರಿಂದ ಹೋರಾಟಕ್ಕೆ ಸಿದ್ಧರಾಗಿ, ಬಂದ್‌ಗೆ ಎಲ್ಲ ಕಡೆಯಿಂದಲೂ ಸ್ಪಂದನೆ ಸಿಗಲಿ ಎಂದರು.

    ಕಾಲದ ಮಿತಿ ಮೀರಿ ಹೋಗಿದೆ. ಇಷ್ಟೊಂದು ವಿಳಂಬಕ್ಕೆ ಪ್ರಬಲ ನಾಯಕತ್ವದ ಮತ್ತು ಇಚ್ಛಾಶಕ್ತಿಯ ಕೊರತೆ ಕಾರಣ. ಶಾಸನ ಸಭೆಗಳಲ್ಲಿ ನಮ್ಮ ಭಾಗದ ಶಾಸಕರು ಮಾತನಾಡುತ್ತಿಲ್ಲ ಎಂದು ರಾಜಕಾರಣಿಗಳ ವಿರುದ್ಧ ಹರಿಹಾಯ್ದರು.

    ಹೋರಾಟ ಸಮಿತಿ ತಾಲೂಕು ಕಾರ್ಯದರ್ಶಿ ಆರ್.ಓಬಳೇಶ್ ಮಾತನಾಡಿ, ಭದ್ರಾ ಯೋಜನೆಗೆ ತಾಲೂಕಿನಲ್ಲಿ ದೊಡ್ಡಮಟ್ಟದಲ್ಲಿ ಹೋರಾಟಗಳು ನಡೆದಿಲ್ಲ. ತಾಲೂಕಿಗೆ 57 ಕೆರೆಗಳು ಸಮರ್ಪಕವಾಗಿ ಬಂದಿಲ್ಲ. ಒಟ್ಟಾರೆ ನಮ್ಮ ತಾಲೂಕಿಗೆ ಅನ್ಯಾಯವಾಗಿದೆ. ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ನಮ್ಮ ಸಮಸ್ಯೆಗೆ ಎಲ್ಲರೂ ಕೈಜೋಡಿಸಿ ಎಂದರು.

    ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ, ವಿಶ್ರಾಂತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್, ಪ್ರಾಂಶುಪಾಲ ಪ್ರೊ.ನಾಗಲಿಂಗಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್‌ಎಸ್.ರಾಜು, ವಾಲಿಬಾಲ್ ತಿಮ್ಮಾರೆಡ್ಡಿ, ಇಂದಿರಮ್ಮ ಸಿದ್ದಮ್ಮನಹಳ್ಳಿ, ಕರುನಾಡ ವನ ನಿರ್ಮಾಣ ವೇದಿಕೆ ಅಧ್ಯಕ್ಷ ಮಹಾಲಿಂಗಪ್ಪ ಮಾತನಾಡಿದರು.

    ಏ. 12ರಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪಥ ಸಂಚಲನ ಮಾಡುವ ಮೂಲಕ ಜಾಗೃತಿ ಮೂಡಿಸಲಿದ್ದಾರೆ.
    ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್, ವಿಶ್ರಾಂತ ಪ್ರಾಚಾರ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts