More

    ಜನರಿಗೆ ಶುದ್ಧ ನೀರು ಪೂರೈಕೆ

    ಹೊಸದುರ್ಗ: ಪಟ್ಟಣದ ಎರಡನೇ ಮುಖ್ಯರಸ್ತೆಯಲ್ಲಿ 12ನೇ ವಾರ್ಡ್‌ನ ಸಾರ್ವಜನಿಕರಿಗಾಗಿ ಪುರಸಭೆ ಸದಸ್ಯೆ ಡಾ.ಸ್ವಾತಿ ಪ್ರದೀಪ್ ಸ್ವಂತ ಹಣದಲ್ಲಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಿದ್ದು, ಸೋಮವಾರ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಉದ್ಘಾಟಿಸಿದರು.

    ಪುರಸಭೆ ಸದಸ್ಯೆಯೂ ಆದ ಡಾ.ಸ್ವಾತಿ ಪ್ರದೀಪ್ ಹಾಗೂ ಅವರ ಪತಿ, ವಾಸವಿ ಹೆಲ್ತ್‌ಕೇರ್ ಕಂಪನಿ ಮಾಲೀಕ ಡಿ.ಎಸ್.ಪ್ರದೀಪ್, 12ನೇ ವಾರ್ಡ್‌ನಲ್ಲಿ ಮಳಿಗೆಯೊಂದನ್ನು ಬಾಡಿಗೆಗೆ ಪಡೆದು ಅಲ್ಲಿ ಜನಸಂಪರ್ಕ ಕಚೇರಿ ಹಾಗೂ ಐದು ಲಕ್ಷ ರೂ. ವೆಚ್ಚದಲ್ಲಿ 2 ಸಾವಿರ ಲೀಟರ್ ಸಾಮರ್ಥ್ಯದ ಶುದ್ಧ ನೀರಿನ ಘಟಕ ಸ್ಥಾಪಿಸಿದ್ದಾರೆ. ಮುಂಜಾನೆಯಿಂದ ಸಂಜೆ ವರೆಗೆ ಘಟಕವನ್ನು ಚಾಲನೆಯಲ್ಲಿಟ್ಟು ನೀರೊದಗಿಸುವ ವ್ಯವಸ್ಥೆ ಮಾಡಿದ್ದಾರೆ.

    ವಾರ್ಡ್ ಎಲ್ಲ ಮನೆಗಳನ್ನು ಸಮೀಕ್ಷೆ ನಡೆಸಲಾಗಿದ್ದು, ಯಾವ ಮನೆಯಲ್ಲೂ ವಾಟರ್ ಪ್ಯೂರಿಪೈರ್ ಇಲ್ಲದ್ದನ್ನು ಗಮನಿಸಿ ಈ ಕಾರ್ಯ ಕೈಗೊಂಡಿದ್ದಾರೆ. ಒಟ್ಟು 160 ಮನೆಗಳಲ್ಲಿರುವ 400 ಕುಟುಂಬಗಳಿಗೆ ಸ್ಮಾರ್ಟ್‌ಕಾರ್ಡ್ ಒದಗಿಸಿ 20 ಲೀಟರ್ ನೀರು ದೊರಕುವ ವ್ಯವಸ್ಥೆ ಮಾಡಲಾಗಿದೆ.

    ಪುರಸಭೆ ಸದಸ್ಯರಾಗಿ 2 ವರ್ಷ ಕಳೆದರೂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆಯದೆ ಸರ್ಕಾರದ ಅನುದಾನವೂ ದೊರೆಯದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ಅನುದಾನಕ್ಕಾಗಿ ಕಾಯದೆ ಜನರಿಗೆ ಮೂಲ ಸೌಲಭ್ಯ ಒದಗಿಸಬೇಕೆಂಬ ಅಪೇಕ್ಷೆಯಂತೆ ಪತಿ ಡಿ.ಎಸ್.ಪ್ರದೀಪ್ ಅವರ ಸಹಕಾರದಿಂದ ಡಾ.ಸ್ವಾತಿ ಪ್ರದೀಪ್ ನೀರಿನ ಘಟಕ ಸ್ಥಾಪಿಸಿ ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.

    ನಿಸ್ವಾರ್ಥಿಗಳ ಸೇವೆ ಮಾದರಿ: ಡಿ.ಎಸ್.ಪ್ರದೀಪ್ ಹಾಗೂ ಡಾ.ಸ್ವಾತಿ ಪ್ರದೀಪ್ ದಂಪತಿ ಸ್ವಂತ ಹಣದಲ್ಲಿ ಜನರಿಗೆ ನೀರು ಒದಗಿಸಲು ಶುದ್ಧ ನೀರಿನ ಘಟಕ ಸ್ಥಾಪಿಸಿರುವುದು ಶ್ಲಾಘನಾರ್ಹ ಕಾರ್ಯ. ಸ್ವಾರ್ಥವನ್ನೆ ಚಿಂತಿಸುವ ರಾಜಕಾರಣಿಗಳ ನಡುವೆ ಡಾ.ಸ್ವಾತಿ ಅಪರೂಪದ ರಾಜಕಾರಣಿಯಾಗಿದ್ದಾರೆ. ಇವರ ಜನಪರ ಸೇವೆ ಇತರರಿಗೆ ಮಾದರಿಯಾಗಿದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪುರಸಭೆ ಸದಸ್ಯೆ ಡಾ.ಸ್ವಾತಿ ಪ್ರದೀಪ್ ಹೇಳಿಕೆ: ವಾರ್ಡ್ ಜನರಿಗೆ ಮೂಲ ಸೌಲಭ್ಯ ಒದಗಿಸುವುದು ನನ್ನ ಆದ್ಯತೆಯಾಗಿತ್ತು. ಸರ್ಕಾರದಿಂದ ಅನುದಾನಕ್ಕೆ ಕಾಯುತ್ತಾ ಕುಳಿತರೆ ಸೌಲಭ್ಯ ಒದಗಿಸಲು ತಡವಾಗುತ್ತದೆ ಎಂದು ಚಿಂತಿಸಿ ಕುಟುಂಬದ ಸಹಕಾರ ಪಡೆದು ಶುದ್ಧ ನೀರಿನ ಘಟಕ ಸ್ಥಾಪಿಸಿದ್ದೇನೆ. ಈ ಕಾರ್ಯ ನನಗೂ ನನ್ನ ಕುಟುಂಬಕ್ಕೆ ನೆಮ್ಮದಿ ತಂದುಕೊಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts