More

    ಶಾಂತಿ ಸಂದೇಶ ಸಾರಲು ಗಣಮೇಳ ಆಯೋಜನೆ

    ಹೊಸದುರ್ಗ: ವಿಚಾರ ಮಂಥನದ ಮೂಲಕ ಜಗತ್ತಿಗೆ ಶಾಂತಿ ಸಂದೇಶ ನೀಡುವ ಉದ್ದೇಶದಿಂದ ಫೆ.16 ರಂದು ಅಸಂಖ್ಯ ಪ್ರಮಥ ಗಣಮೇಳ ಹಾಗೂ ಸರ್ವ ಶರಣರ ಸಮ್ಮೇಳನ ಆಯೋಜಿಸಲಾಗಿದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

    ಪಟ್ಟಣದ ಗುರು ಒಪ್ಪತ್ತಿನಸ್ವಾಮಿ ವಿರಕ್ತಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಅಸಂಖ್ಯ ಪ್ರಮಥ ಗಣಮೇಳದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಸರ್ವ ಜಾತಿ, ಸಮುದಾಯಗಳನ್ನು ಒಂದುಗೂಡಿಸುವ ಉದ್ದೇಶದಿಂದ ಸಮ್ಮೇಳನ ನಡೆಸಲಾಗುತ್ತಿದೆ. ಇದು ಯಾವುದೇ ಧರ್ಮ, ಜಾತಿ ಸಮಾವೇಶವಲ್ಲ. ನಾಡಿನ ಎಲ್ಲ ದಾರ್ಶನಿಕರು, ಶರಣರು, ಧಾರ್ಮಿಕ ಮುಖಂಡರು ಒಂದೆಡೆ ಸೇರಿ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಜಗತ್ತಿಗೆ ಸಂದೇಶ ನೀಡುವ ಕೆಲಸ ನಡೆಯುತ್ತದೆ ಎಂದರು.

    ಜಗತ್ತಿನಲ್ಲಿ ಶಾಂತಿ ಸ್ಥಾಪಿಸುವ ಕೆಲಸವಾಗಬೇಕು. ಶಾಂತಿ ಮತ್ತು ಪ್ರಗತಿಯಿಂದ ಮಾತ್ರ ಜಗತ್ತಿನ ಅಭ್ಯುದಯ ಸಾಧ್ಯವಾಗುತ್ತದೆ ಎನ್ನುವ ಸತ್ಯ ಅರಿಯಬೇಕು. ಬ್ರಿಜಿಲ್‌ನಲ್ಲಿ ಶಾಂತಿ ಸ್ಥಾಪಿಸುವ ಕಾರಣಕ್ಕೆ ಅತ್ಯಾಧುನಿಕ ಬಂದೂಕು ಮತ್ತು ಅಪಾಯಕಾರಿ ಆಯುಧಗಳನ್ನು ಒಂದೆಡೆ ರಾಶಿ ಹಾಕಿ ಬುಲ್ಡೋಜರ್‌ಗಳ ಮೂಲಕ ನಾಶ ಪಡಿಸಲಾಯಿತು. ಇಂತಹ ಕೆಲಸ ವಿಶ್ವದಲ್ಲೆಡೆ ನಡೆಯಬೇಕು ಎಂದರು.

    12ನೇ ಶತಮಾನದಲ್ಲಿ ಜಾತಿ ಹಾಗೂ ವರ್ಗರಹಿತವಾದ ಕಾಯಕ ಪ್ರಧಾನ ಸಮಾಜ ಕಟ್ಟಲು ಶರಣರು ಚಳವಳಿ ನಡೆಸಿದರು. ಮಾನವೀಯ ಸಮಾಜದ ನಿರ್ಮಾಣಕ್ಕೆ ಹಲವು ಸಮಾಜ ಸುಧಾರಕರು ಆ ಕಾರ್ಯವನ್ನು ಮುಂದುವರಿಸಿದ್ದಾರೆ ಎಂದರು.

    ಭಗೀರಥ ಗುರುಪೀಠದ ಡಾ.ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರು ನಿರೂಪಿಸಿದ ಶರಣ ಸಂಸ್ಕೃತಿಯನ್ನು ಚಿತ್ರದುರ್ಗ ಮುರುಘಾ ಮಠ ಹಾಗೂ ಶ್ರೀ ಶಿವಮೂರ್ತಿ ಮುರುಘಾ ಶರಣರು ಮುಂದುವರಿಸುವ ಮೂಲಕ ಬಸವ ಪರಂಪರೆ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಸಮಾನತೆ ಹಾಗೂ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಆಯೋಜಿಸಿರುವ ಅಸಂಖ್ಯ ಪ್ರಮಥ ಗಣಮೇಳ ಹಾಗೂ ಅದರ ಸಂದೇಶ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ ಎಂದರು.

    ಮಾಜಿ ಶಾಸಕ ಟಿ.ಎಚ್.ಬಸವರಾಜಪ್ಪ, ವೀರಶೈವ ಮಹಾಸಭಾದ ಅಧ್ಯಕ್ಷ ಬಿ.ಪಿ.ಓಂಕಾರಪ್ಪ, ಕಾರ್ಯದರ್ಶಿ ಕೆ.ಎಸ್.ಕಲ್ಮಠ್, ಗೋ.ತಿಪ್ಪೇಶ್, ಜಗದೀಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts