ಹೊಸದುರ್ಗ: ಪುರಸಭೆ ಆಡಳಿತವು ಉತ್ತಮ ತಂತ್ರಜ್ಞಾನ ಬಳಸಿ ಪಟ್ಟಣವನ್ನು ಸ್ವಚ್ಛವಾಗಿಡುವ ಜತೆಗೆ ಪೌರಕಾರ್ಮಿಕರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.
ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು. ಕರೊನಾ ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಪಟ್ಟಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅವಶ್ಯಕತೆ ಇದೆ. ಪುರಸಭೆ ಅಧಿಕಾರಿಗಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಸ್ವಚ್ಛತೆ ಕೆಲಸ ಮಾಡುವ ಪೌರಕಾರ್ಮಿಕರಿಗೆ ಹ್ಯಾಂಡ್‌ಗ್ಲೌಸ್, ಶೂ ಸೇರಿ ರಕ್ಷಣಾ ಸಲಕರಣೆಗಳನ್ನು ನೀಡಬೇಕು ಎಂದರು.
ಘನತ್ಯಾಜ್ಯ ವಿಲೇವಾರಿ ಘಟಕವನ್ನು ಯಾವುದೇ ಸಮಸ್ಯೆ ಆಗದಂತೆ ನಿರ್ವಹಿಸಬೇಕು. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕಸವನ್ನು ವಿಲೇವಾರಿ ಮಾಡಬೇಕು. ಪ್ರತಿ ದಿನ ಮನೆಗಳಿಂದ ಕಸ ಸಂಗ್ರಹಿಸಬೇಕು. ಚರಂಡಿಗಳು ಹಾಗೂ ರಸ್ತೆಗಳನ್ನು ಕಸವಿಲ್ಲದಂತೆ ಸ್ವಚ್ಛವಾಗಿಡಬೇಕು. ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು.
ಕರೊನಾ ರೋಗವು ವ್ಯಾಪಕವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಜನರು ವೈಯಕ್ತಿಕ ಎಚ್ಚರಿಕೆ ವಹಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸುವ ಜತೆಗೆ ಸುತ್ತಲಿನ ಪರಿಸರ ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದರು. ಪುರಸಭೆ ಮುಖ್ಯಾಧಿಕಾರಿ ಡಿ.ಉಮೇಶ್, ಪರಿಸರ ಅಭಿಯಂತರ ತಿಮ್ಮರಾಜು ಮತ್ತಿತರಿದ್ದರು.