More

    ಕಬ್ಬಳ ಗ್ರಾಮದಲ್ಲಿ ಫೆ.15ರಿಂದ ದಿಂಡಿ ಮಹೋತ್ಸವ

    ಹೊಸದುರ್ಗ: ತಾಲೂಕಿನ ಶ್ರೀರಾಂಪುರ ಹೋಬಳಿಯ ಕಬ್ಬಳ ಗ್ರಾಮದ ಶ್ರೀ ಪಾಂಡುರಂಗ ಸ್ವಾಮಿ ರುಕ್ಮಿಣಿ ದೇವಾಲಯದಲ್ಲಿ ಫೆ.15 ಮತ್ತು 16 ರಂದು 18 ನೇ ವರ್ಷದ ದಿಂಡಿ ಮಹೋತ್ಸವ ನೆರವೇರಲಿದೆ. ಗೌರಿಗದ್ದೆ ದತ್ತಾಶ್ರಮದ ಅವಧೂತ ಶ್ರೀ ವಿನಯ ಗುರೂಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ.

    ಫೆ.15 ರ ಬೆಳಗ್ಗೆ 10 ಕ್ಕೆ ಶ್ರೀ ಜ್ಞಾನೇಶ್ವರಿ ಗ್ರಂಥದ ಪೋಥಿ ಸ್ಥಾಪನೆ, ಸಂಜೆ ದೇವಾಲಯದಲ್ಲಿ ಶ್ರೀ ಪಾಂಡುರಂಗ ಸ್ವಾಮಿ ಹಾಗೂ ರುಕ್ಮಿಣಿ ದೇವಿ ಶಿಲಾ ಮೂರ್ತಿಗೆ ಪಂಚಾಮೃತ ಅಭಿಷೇಕ, ಶೋಡಶೋಪಚಾರ ಪೂಜೆ, ಪುರುಷಸೂಕ್ತದೊಂದಿಗೆ ಬೆಣ್ಣೆ ಅಲಂಕಾರ ಸೇವೆ ನಡೆಯಲಿವೆ. 5 ಗಂಟೆಗೆ ಹರಿಪಾಠ ಭಜನೆ, 6 ಕ್ಕೆ ಪ್ರವಚನ, 7 ಕ್ಕೆ ಹರಿ ಕೀರ್ತನೆ, ಪಾಂಡುರಂಗಸ್ವಾಮಿ, ರುಕ್ಮಿಣಿ ದೇವಿ, ಕತ್ತಿ ಕಲ್ಲಾಂಭ ದೇವಿ, ಆಂಜನೇಯ ಸ್ವಾಮಿ ದೇವರುಗಳ ರಾಜಬೀದಿ ಉತ್ಸವ, ರಾತ್ರಿಯಿಡೀ ಜಾಗರಣೆ ಪ್ರಯುಕ್ತ ಪಂಚಪದಿ ಪಾವುಲ ಭಜನೆ, ಬಾರೂಡ ರೂಪಕಗಳು ನಡೆಯಲಿವೆ.

    ಫೆ.16 ರ ಮುಂಜಾನೆ ದೇವಾಲಯದಲ್ಲಿ ಕಾಕಡಾರತಿ, ಕಾಲಕೀರ್ತನೆ, ಪೂರ್ಣ ಕುಂಭ ಕಳಶದೊಂದಿಗೆ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 9 ಕ್ಕೆ ಗೌರಿಗದ್ದೆ ದತ್ತಾಶ್ರಮದ ಅವಧೂತ ಶ್ರೀ ವಿನಯ ಗುರೂಜಿ ಅವರ ಪುರ ಪ್ರವೇಶ ಹಾಗೂ ಪ್ರವಚನ. ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಆನೆಯ ಮೇಲೆ ಶ್ರೀಪಾಂಡುರಂಗ, ರುಕ್ಮಿಣಿ ಉತ್ಸವ ಮೂರ್ತಿಗಳ ದಿಂಡಿ ಉತ್ಸವ ನೆರವೇರಲಿದೆ.

    ದಿಂಡಿ ಉತ್ಸವದ ವಿಶೇಷತೆ: ಪಾಂಡುರಂಗ-ರುಕ್ಮಿಣಿ ದೇವಾಲಯಗಳಿರುವ ಗ್ರಾಮದಲ್ಲಿ ಭಾವಸಾರ ಕ್ಷತ್ರಿಯ ಸಮುದಾಯದವರು ಪೋಥಿ ಸ್ಥಾಪನೆಯೊಂದಿಗೆ ದಿಂಡಿ ಉತ್ಸವ ನೆರವೇರಿಸುವ ಸಂಪ್ರದಾಯವಿದೆ. ಆದರೆ, ಭಾವಸಾರ ಕ್ಷತ್ರಿಯ ಸಮಾಜದ ಒಂದು ಕುಟುಂಬವೂ ವಾಸವಿಲ್ಲದ ಕಬ್ಬಳ ಗ್ರಾಮದಲ್ಲಿ ಕುರುಬ, ಲಿಂಗಾಯತ, ಉಪ್ಪಾರ ಸಮುದಾಯದವರೇ ಸೇರಿ ಜಾತ್ಯತೀತವಾಗಿ ದಿಂಡಿ ಉತ್ಸವ ನೆರವೇರಿಸುವುದು ವಿಶೇಷವಾಗಿದೆ.

    ದೇವಾಲಯದ ಹಿನ್ನೆಲೆ: ಕಬ್ಬಳ ಗ್ರಾಮಸ್ಥರು ಪಾಂಡುರಂಗಸ್ವಾಮಿ ಹೆಸರಿನಲ್ಲಿ ಭಜನಾ ಮಂಡಳಿ ಸ್ಥಾಪಿಸಿಕೊಂಡು ಭಜನೆ ನಡೆಸುತ್ತಿದ್ದರು. 1972 ರಲ್ಲಿ ಪಂಢರಾಪುರಕ್ಕೆ ತೆರಳಿದ್ದಾಗ ಅಲ್ಲಿನ ಪಾಂಡುರಂಗ-ರುಕ್ಮಿಣಿ ಶೀಲಾಮೂರ್ತಿಗಳನ್ನು ತಂದು ಭಜನೆ ನಡೆಯುವ ಸ್ಥಳದಲ್ಲಿ ಮುಚ್ಚಿಟ್ಟಿದ್ದರು. ನಂತರ ಗ್ರಾಮದಲ್ಲಿ ಕೆಲ ಅಹಿತಕರ ಘಟನೆ ನಡೆದವು. ಈ ಕುರಿತು ದೇವರನ್ನು ಕೇಳಿದಾಗ ಪಾಂಡುರಂಗ ಸ್ವಾಮಿ ಪ್ರತಿಷ್ಠಾಪನೆ ಮಾಡುವಂತೆ ಆಜ್ಞೆಯಾಗಿತ್ತು. ಅದರಂತೆ 1981ರಲ್ಲಿ ಪಾಂಡುರಂಗ ಸ್ವಾಮಿ ಸ್ಥಾಪನೆಯಾಗಿರುವ ಹಿನ್ನೆಲೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts