More

    ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮದ್ಯ ಮಾರಾಟ

    ಹೊಸದುರ್ಗ: ಲಾಕ್‌ಡೌನ್ ಸಂದರ್ಭ ದುರುಪಯೋಗಪಡಿಸಿಕೊಳ್ಳುತ್ತಿರುವ ತಾಲೂಕಿನ ಕೆಲವು ಮದ್ಯ ಮಾರಾಟಗಾರರು ಅಕ್ರಮವಾಗಿ ಸಂಗ್ರಹಿಸಿದ ಮದ್ಯವನ್ನು ದುಬಾರಿ ಬೆಲೆಗೆ ಮಾರಿ ಗಂಟು ಮಾಡಿಕೊಳ್ಳುವ ಧಂದೆಗಿಳಿದಿದ್ದಾರೆ.

    ಇದನ್ನು ತಡೆಯಬೇಕಿರುವ ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿವೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.

    ಅಕ್ರಮ ಮದ್ಯ ಮಾರಾಟಕ್ಕೆ ದಾಖಲೆ ಒದಗಿಸುವ ಘಟನೆ ತಾಲೂಕಿನ ಜಾನಕಲ್ಲಿನಲ್ಲಿ ನಡೆದಿದೆ. ಎಂಎಸ್‌ಐಎಲ್‌ಗೆ ಸೇರಿದ ಮದ್ಯದಂಗಡಿ ಸಿಬ್ಬಂದಿ ಶುಕ್ರವಾರ ರಾತ್ರಿ ಶಾಪ್‌ನ ಬಾಗಿಲು ತೆರೆದು 9.5ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ ಮದ್ಯದ ಬಾಟಲ್‌ಗಳನ್ನು ವಾಹನದಲ್ಲಿ ತುಂಬಿ ಸಾಗಿಸಿದ್ದಾರೆ.

    ವೈನ್‌ಶಾಪ್ ಮುಂಭಾಗದ ಮನೆಯೊಂದರ ಸಿಸಿ ಟಿವಿ ಕ್ಯಾಮರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಈ ಪ್ರಕರಣ ಬೆಳಕಿಗೆ ಬರಲು ಪ್ರಮುಖ ಸಾಕ್ಷಿಯಾಗಿದೆ.

    ಗ್ರಾಮಸ್ಥರ ಒತ್ತಾಯದ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಗ್ರಾಮಸ್ಥರ ಬಿಗಿಪಟ್ಟಿನಿಂದ ಭಾನುವಾರ ರಾತ್ರಿ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣ ದಾಖಲಾಗಿದೆ.

    ಎರಡು ದಿನ ವಿಳಂಬ ನೀತಿ ಅನುಸರಿಸಿದ ಅಬಕಾರಿ ಇಲಾಖೆ ಪ್ರಕರಣವನ್ನು ಪೊಲೀಸರಿಗೆ ವರ್ಗಾಯಿಸಿದೆ. ಎಂಎಸ್‌ಐಎಲ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸ್ ಇಲಾಖೆ, ಎಂಎಸ್‌ಐಎಲ್‌ನ ಮೂವರು ಸಿಬ್ಬಂದಿ ವಶಕ್ಕೆ ಪಡೆದಿದೆ.

    ಮದ್ಯ ಮಾರಾಟ ಬಂದ್ ಆಗಿದ್ದರಿಂದ ಸರ್ಕಾರಕ್ಕೆ ನಷ್ಟವಾಗುತ್ತಿರುವ ತೆರಿಗೆ ಹಣದ ಜತೆಗೆ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದಿಂದ ಕಾಳಧನ ಧಂದೆಕೋರರ ತಿಜೋರಿ ತುಂಬಿಸುತ್ತಿದೆ.

    ಮೂಲ ಬೆಲೆಗಿಂತ ಐದು ಪಟ್ಟು ಹೆಚ್ಚಿನ ದರಕ್ಕೆ ಮದ್ಯ ಮಾರಲಾಗುತ್ತಿದೆ. ಮಾತ್ರವಲ್ಲ ತಾಲೂಕಿನ ಹಲವಾರು ಅಂಗಡಿಗಳಿಂದ ಅಕ್ರಮವಾಗಿ ಮದ್ಯ ತೆಗೆದು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರ ವಲಯದಲ್ಲಿದೆ.

    ಅಕ್ರಮ ಮದ್ಯ ಮಾರಾಟದ ಭರಾಟೆ ಜೋರಾಗಿದ್ದರೂ ಅಬಕಾರಿ ಇಲಾಖೆ ಮಾತ್ರ ಯಾವುದೇ ಅಕ್ರಮಗಳಿಗೆ ಅವಕಾಶ ನೀಡಿಲ್ಲ ಎನ್ನುವಂತೆ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಜಾಣ ನಡೆ ಅನುಸರಿಸುತ್ತಿದೆ. ಲಾಕ್‌ಡೌನ್ ಮುಗಿದು ಮದ್ಯದ ಅಂಗಡಿ ಬಾಗಿಲು ತೆರೆದಾಗ ದಾಸ್ತಾನಿನ ಲೆಕ್ಕ ತಾಳೆಯಾಗುತ್ತದೆಯೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts