More

    ರೈತರ ಹಿತ ಕಾಯಲು ಬದ್ಧರಾಗಿ

    ಹೊಸದುರ್ಗ: ಕೃಷಿ ಪರಿಕರ ಮಾರಾಟಗಾರರು ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಸರ್ಕಾರ ನಿಗದಿಪಡಿಸಿದ ಬೆಲೆಗೆ ಮಾರುವ ಮೂಲಕ ರೈತರ ಹಿತರಕ್ಷಿಸಬೇಕು ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಹೇಳಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕೃಷಿ ಇಲಾಖೆ ಆಯೋಜಿಸಿದ್ದ ಕೃಷಿ ಪರಿಕರಗಳ ಮಾರಾಟ ಹಾಗೂ ಸುರಕ್ಷಿತ ಕೀಟನಾಶಗಳ ಬಳಕೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ರೈತರು ಕೋವಿಡ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆಚ್ಚಿನ ಬೆಲೆಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಉದ್ದೇಶದಿಂದ ಕೃತಕ ಅಭಾವ ಸೃಷ್ಟಿಸಬಾರದು. ಸರ್ಕಾರ ನಿಗದಿಪಡಿಸಿರುವ ಬೆಲೆ ಹಾಗೂ ಮಾರ್ಗದರ್ಶಿಯಂತೆ ಅಗತ್ಯ ಕೃಷಿ ಪರಿಕರಗಳನ್ನು ರೈತರಿಗೆ ಒದಗಿಸಬೇಕು ಎಂದರು.

    ರೈತರು ಹಾಗೂ ಸರ್ಕಾರದ ನಡುವೆ ಕೊಂಡಿಯಾಗಿರುವ ರಸಗೊಬ್ಬರ ಮಾರಾಟಗಾರರು ಕೃಷಿಕರ ಹಿತ ಕಾಯುವ ಕೆಲಸ ಮಾಡಬೇಕು ಎಂದು ತಿಳಿಸಿದರು.

    ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮಾತನಾಡಿ, ಹೊಸದುರ್ಗ ತಾಲೂಕು 30ಕ್ಕೂ ಹೆಚ್ಚು ವಿವಿಧ ತಳಿ ಬೆಳೆ ಬೆಳೆಯುವ ಮೂಲಕ ವಿಶಿಷ್ಟ ಸ್ಥಾನ ಪಡೆದಿದೆ. ಪ್ರತಿ ಬೆಳೆಗೂ ವಿಭಿನ್ನವಾದ ಗೊಬ್ಬರ ಹಾಗೂ ಪೋಷಕಾಂಶ ಒದಗಿಸಬೇಕು ಎಂದರು.

    ಬಿತ್ತನೆ ಬೀಜ ಹಾಗೂ ಗೊಬ್ಬರದ 35 ಕೋಟಿ ರೂ. ವ್ಯವಹಾರ ತಾಲೂಕಿನಲ್ಲಿ ನಡೆಯುತ್ತದೆ. ಮುಂಗಾರು ಹಂಗಾಮಿನಲ್ಲಿ ಶೇ.70ರಷ್ಟು ವಹಿವಾಟು ನಡೆಯುತ್ತದೆ. ಮಾರಾಟಗಾರರು ಸರ್ಕಾರದ ಆದೇಶಗಳನ್ನು ಪಾಲಿಸದಿದ್ದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಸಹಾಯಕ ನಿರ್ದೇಶಕರಾದ ಸಿ.ಎಸ್.ಈಶ್ವರ್, ಪ್ರಸನ್ನಕುಮಾರ್, ಎ.ಟಿ.ತಿಮ್ಮಯ್ಯ, ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಬಿ.ವಿ.ಲವಕುಮಾರ್ ಮತ್ತಿತರರಿದ್ದರು.

    ಕಳೆದ ವರ್ಷ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ರೈತರು ಗಲಾಟೆ ಮಾಡಿದ್ದರು. ರಸಗೊಬ್ಬರ ಸಾಗಣೆ ಹಾಗೂ ಹಮಾಲಿ ವೆಚ್ಚವನ್ನು ರೈತರಿಂದ ವಸೂಲಿ ಮಾಡಲಾಗಿತ್ತು. ಇಂತಹ ಘಟನೆ ಮರುಕಳಿಸದಂತೆ ಕೃಷಿ ಇಲಾಖೆ ಜಾಗ್ರತೆ ವಹಿಸಬೇಕು.
    ಗೂಳಿಹಟ್ಟಿ ಡಿ.ಶೇಖರ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts