More

    ಭದ್ರೆ ಆಗಮನಕ್ಕಿದ್ದ ಅಡ್ಡಿ ನಿವಾರಣೆ

    ಯೋಗೀಶ್ ಎಂ.ಮೇಟಿಕುರ್ಕೆ ಹೊಸದುರ್ಗ: ತಾಲೂಕಿನ ಅಜ್ಜಂಪುರ ರೈಲು ಅಳಿ ಸಮೀಪದ ಅಂಡರ್‌ಪಾಸ್ ಕಾಲುವೆ ನಿರ್ಮಿಸುವ ಕಾಮಗಾರಿಗೆ ಶುಕ್ರವಾರ ಚಾಲನೆ ದೊರೆತಿದ್ದು, ಪ್ರಗತಿ ಕಾರ್ಯ ಭರದಿಂದ ನಡೆಯುತ್ತಿದೆ.

    ಕಳೆದ ಎರಡು ವರ್ಷಗಳಿಂದ ನೆನಗುದಿಗೆ ಬಿದ್ದು ವಾಣಿವಿಲಾಸ ಸಾಗರಕ್ಕೆ ಭದ್ರಾ ನೀರು ಹರಿಸಲು ಅಡ್ಡಿಯಾಗಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಸೇತುವೆ ನಿರ್ಮಾಣ ಆರಂಭವಾಗಿದ್ದು, ತಾಲೂಕಿನ ಜನರಲ್ಲಿ ಸಂತಸ ಹೆಚ್ಚಿಸಿದೆ.

    ಸಂಸದ ನಾರಾಯಣಸ್ವಾಮಿ ಅವರ ಇಚ್ಛಾಶಕ್ತಿ ಫಲವಾಗಿ ರೈಲ್ವೆ ಅಂಡರ್ ಪಾಸ್ ಕಾಲುವೆ ಕಾಮಗಾರಿಗೆ ಎದುರಾಗಿದ್ದ ಅಡ್ಡಿ ಆತಂಕ ದೂರವಾಗಿದೆ. ರೈಲ್ವೆ ಸೇತುವೆಯಡಿ ಬೃಹತ್ ಸಿಮೆಂಟ್ ಕಾಲುವೆ ನಿರ್ಮಿಸುವ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿದೆ.

    ಶಿವನಿ-ಅಜ್ಜಂಪುರ ನಡುವೆ ರೈಲು ಓಡಾಟ ನಿಲ್ಲಿಸಿ ಕಾಲುವೆ ನಿರ್ಮಾಣಕ್ಕೆ ಅವಕಾಶ ನೀಡಬೇಕೆಂದು ಸಂಸದರು, ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವರಿಗೆ ಮನವಿ ಮಾಡಿದ್ದರು. ಇದರಿಂದ ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಎ.ಕೆ.ಸಿಂಗ್ ನೇತೃತ್ವದ ರೈಲ್ವೆ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಳದಲ್ಲಿ ಒಂದು ಕಿಮೀ ಬದಲಿ ರೈಲು ಮಾರ್ಗ ನಿರ್ಮಿಸಲು ನಿರ್ಧರಿಸಿತ್ತು.

    ಅದರಂತೆ ಬದಲಿ ರೈಲು ಮಾರ್ಗ ಹಾಗೂ ತಾತ್ಕಾಲಿಕ ಮೇಲ್ಸೇತುವೆ ನಿರ್ಮಾಣ ಕಾರ್ಯ ಮಂಗಳವಾರ ಪೂರ್ಣಗೊಂಡಿದ್ದು, ಬುಧವಾರದಿಂದ ರೈಲುಗಳ ಓಡಾಟವನ್ನು ಬದಲಿ ಮಾರ್ಗಕ್ಕೆ ವರ್ಗಾಯಿಸಲಾಗಿದೆ.

    10ಕ್ಕೂ ಹೆಚ್ಚು ಹಿಟಾಚಿ ಯಂತ್ರಗಳು ಕಾಲುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿವೆ. 5 ಸಾವಿರ ಟನ್ ತೂಕವಿರುವ ಸಿಮೆಂಟ್ ಕಾಲುವೆ ಬ್ಲಾಕನ್ನು ಹೈಡ್ರಾಲಿಕ್ ಜಾಕ್‌ಗಳ ಮೂಲಕ ಸೇತುವೆಯ ಕೆಳ ಭಾಗಕ್ಕೆ ತಳ್ಳುವ ಕೆಲಸ ನಡೆಯುತ್ತಿದೆ. 120 ಟನ್ ಭಾರವನ್ನು ತಳ್ಳುವ ಸಾಮರ್ಥ್ಯ ಹೊಂದಿರುವ 8 ಹೈಡ್ರಾಲಿಕ್ ಜಾಕ್‌ಗಳನ್ನು ಕಾಮಗಾರಿಗೆ ಬಳಸಲಾಗುತ್ತಿದೆ. ತಂತ್ರಜ್ಞರನ್ನು ಪಶ್ಚಿಮ ಬಂಗಾಳದಿಂದ ವಿಮಾನದ ಮೂಲಕ ಕರೆಸಿ ಕಾಮಗಾರಿ ನಡೆಸಲಾಗುತ್ತಿದೆ.

    ಸಂಸದ ನಾರಾಯಣಸ್ವಾಮಿ ಪ್ರತಿ ಎರಡು ದಿನಗಳಿಗೊಮ್ಮೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲಿಸುವ ಜತೆಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಅಂತರ್ಜಲದ ಸಮಸ್ಯೆ ಸೃಷ್ಟಿಯಾಗಿದ್ದು, ಮೂರು ಪಂಪ್‌ಸೆಟ್ ಬಳಸಿ ನೀರನ್ನು ಹೊರಹಾಕಲಾಗುತ್ತಿದೆ. ಮಳೆಯ ಅಡಚಣೆಯಾಗದಿದ್ದರೆ ಐದು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

    ರೈಲ್ವೆ ಇಲಾಖೆ ಇತಿಹಾಸದಲ್ಲಿ ಮೊದಲು: ರೈಲ್ವೆ ಇಲಾಖೆಯ ಇತಿಹಾಸದಲ್ಲಿಯೇ ಕಾಮಗಾರಿಗಾಗಿ ಬದಲಿ ರೈಲು ಮಾರ್ಗ ನಿರ್ಮಿಸಿ ರೈಲುಗಳ ಓಡಾಟವನ್ನು ಬದಲಿಸಿದ ಉದಾಹರಣೆಗಳಿಲ್ಲ. ರೈಲ್ವೆ ಮಾರ್ಗ ನಿರ್ಮಾಣವಾಗದಿದ್ದರೆ ಎರಡು ವರ್ಷವಾದರೂ ಕಾಮಗಾರಿ ಪೂರ್ಣಗೊಳ್ಳುತ್ತಿರಲಿಲ್ಲ ಎನ್ನುತ್ತಾರೆ ಗುತ್ತಿಗೆದಾರ ಕೋಟೆಶ್ವರರಾವ್.

    ಜಿಲ್ಲೆಯ ಜನರಿಗೆ ನೀರು ಕೊಡುವುದು ನನ್ನ ಕರ್ತವ್ಯ. ಅಜ್ಜಂಪುರ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಸವಾಲಿನ ಕೆಲಸವಾಗಿತ್ತು. ರೈಲ್ವೆ ಇಲಾಖೆ ಹಾಗೂ ಗುತ್ತಿಗೆದಾರರ ಸಹಕಾರದಿಂದ ಕಾಮಗಾರಿ ಆರಂಭವಾಗಿದೆ. ಕೆಲಸ ಮುಗಿಸಿ ವಾಣಿವಿಲಾಸ ಸಾಗರಕ್ಕೆ 10 ಟಿಎಂಸಿ ಅಡಿ ನೀರು ಹರಿಸುವುದೇ ನಮ್ಮ ಗುರಿ.
    ಎ.ನಾರಾಯಣಸ್ವಾಮಿ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts