More

    ತಿನ್ನುವ ಮೀನಿನ ಮಾಂಸದೊಳಗೆ ಕಾರ್ಕೋಟಕ ವಿಷ..!

    | ಸುರೇಶ್ ಮರಕಾಲ ಸಾಯ್ಬರಕಟ್ಟೆ

    ಅನುಭವಸ್ಥರಾದರೆ ನಿಮಗೆ ಗೊತ್ತಿರಬಹುದು, ಪೆಟ್ಟು ತಿನ್ನುವ ಕಷ್ಟ ಏನೆಂದು! ಆದರೆ ಹೊಸಬರಾದರೆ ಕಷ್ಟ! ಹೆಚ್ಚಿನ ಲೇಖನಗಳಲ್ಲಿ ಬಾಲ್ಯದ ನೆನಪುಗಳನ್ನೇ ಕೊಡುತ್ತಿರುತ್ತೇನೆ ಅಂದುಕೊಳ್ಳಬೇಡಿ!, ನಿಮ್ಮ ಜೀವನದ ಹಿಂದಿನ ಘಟನೆಗಳನ್ನು ಒಮ್ಮೆ ಮೆಲುಕು ಹಾಕಿ, ಮೊದಲು ಧುತ್ತೆಂದು ಬರುವುದೇ ನಮ್ಮ ಬಾಲ್ಯ ಹಾಗೂ ಅಲ್ಲಿ ನಾವು ಮಾಡಿರಹುದಾದ ಕಪಿಚೇಷ್ಟೆಗಳು! ಎಷ್ಟೋ ಬಾಲ್ಯದ ಘಟನೆಗಳು ಅಂದು ನಡೆದ ಕ್ಷಣದಲ್ಲಿ ಬಿದ್ದ ಏಟಿನಿಂದಲೋ, ಬೈಗುಳದಿಂದಲೋ ದುಃಖ ಉಂಟುಮಾಡಿತ್ತಾದರೂ, ಇಂದು- ಎಷ್ಟೋ ವರ್ಷಗಳ ನಂತರ ಈಗ ನೆನೆದಾಗ ಅದು ತುಟಿಯಂಚಿನಲ್ಲಿ ಚಿಕ್ಕದೊಂದು ನಗೆ ತರಿಸಿ, ಎದೆಯೊಳಗೆ ಸಣ್ಣ ಕಚಕುಳಿ ನೀಡುತ್ತದೆ!

    ಅವಿಭಕ್ತ ಕುಟುಂಬವಾಗಿದ್ದ ನಮ್ಮ ಮನೆಯಲ್ಲಿ ಶಿಲೆಗಲ್ಲುಗಳಿಂದ ಕಟ್ಟಿದ ದೊಡ್ಡದೊಂದು ಕೆರೆ ಇದೆ. ಮಳೆಗಾಲದ ಆರಂಭದಲ್ಲಿ ನಮ್ಮೂರ ಗದ್ದೆಗಳ ತೋಡಿನಲ್ಲಿ ಓಡಾಡಿ, ನಮ್ಮ ಚೀಲಗಳ ಒಳಗೆ ಸೇರಿಕೊಳ್ಳುವ ಹತ್ತು ಮೀನು, ಏಡಿಗಳ ಯಾವತ್ತೂ ಮೂಲ ಖಜಾನೆಗಳ ಪೈಕಿ ಪ್ರಮುಖವಾದ ಮೂರು ಕೆರೆಗಳಲ್ಲಿ ನಮ್ಮ ಆ ಕೆರೆಯೂ ಒಂದು. ಬೇಸಿಗೆ ಅಖೇರಿಗೆ ಆ ಕೆರೆಯಲ್ಲಿ ನೀರು ಒಣಗಿ, ಮುಂಗಾಲು ಗಂಟಿಗೆ ಬಂದಾಗ ಗಂಡಸರೆಲ್ಲ ಸೇರಿ ಮೀನು ಹಿಡಿಯುತ್ತಿದ್ದರು. ಕೆಸರಿನ ಪಾಕದ ನೀರಿನಲ್ಲಿ ಅವರೆಲ್ಲಾ “ಹೋ ನಿನ್ ಕಾಲಡಿ ಒಂದ್ ಓಡ್ತ್ ನೋಡಾ…” ಎನ್ನುವುದೋ, ಅವನ ಮಾತು ಮುಗಿಯುವುದರೊಳಗೆ ಮತ್ತೊಬ್ಬರು ಗಬಕ್ಕನೆ ಕಾಲಡಿಯಿಂದ ಕೆಸರನ್ನು ಮೆತ್ತಿಕೊಂಡು ಮಿರಿಮಿರಿ ಮಿನುಗುವ ಮುರ್ಡು (ಮುಗುಡು) ಮೀನನ್ನೋ, ಬಾಳೆ ಮೀನನ್ನೋ, ಮರ್ಟೆ ಮೀನನ್ನೋ, ಕುಂಚನನ್ನೋ, ಅದೃಷ್ಟವಿದ್ದರೆ ರಟ್ಟೆಯುದ್ದದ ಐರ್ ಮೀನನ್ನೋ ಎರಡೂ ಕೈಗಳಿಂದ ಬಿಗಿಯಾಗಿ ಹಿಡಿದು ಮೇಲೆತ್ತುವುದೋ, ಆ ಮೀನುಗಳು ಇವರ ಹಿಡಿತದಿಂದ ಪಾರಾಗಿ ಜೀವ ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನಗಳ ಫಲವಾಗಿ ಆ ಕಡೆಗೊಮ್ಮೆ-ಈ ಕಡೆಗೊಮ್ಮೆ ಕುಣಿದಾಡುತ್ತ ಕೊನೆಗೆಲ್ಲಾ ವಿಫಲವಾಗುವುದೂ, ಕೆರೆಯೊಳಗೆ ನಿಂತುಕೊಂಡೇ ದಂಡೆಯಲ್ಲಿ ಹೆಂಗಸರಾದಿಯಾಗಿ ಎಲ್ಲರೂ ಕುತೂಹಲದಿಂದ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದ ನಮ್ಮತ್ತ ಕೆರೆಯೊಳಗಿನಿಂದಲೇ ಒಂದೇ ಎಸೆತಕ್ಕೆ ಕುಣಿಯುವ ಮೀನನ್ನು ಕೆರೆಯಿಂದ ಐದಾರು ಮಾರು ದೂರಕ್ಕೆ ಹೋಗಿ ಬೀಳುವಂತೆ ಅವರು ಎಸೆಯುತ್ತಿದ್ದುದೂ, ದೊಡ್ಡ ಮೀನುಗಳನ್ನು ಹಿಡಿದಾಗ ಹಿಡಿದವರನ್ನು ಎಲ್ಲರೂ ಮೆಚ್ಚುಗೆಯಿಂದ ಕಾಣುತ್ತಿದ್ದದ್ದೂ – ಒಟ್ಟಿನಲ್ಲಿ ಕೆರೆಯೊಳಗೆ ನೀರಿನಲ್ಲಿ ಗಂಡಸರು ಹಿಡಿದ ಮೀನು ಹಿಡಿಯುವುದು ಸಾಕ್ಷಾತ್ ಮಂಗಗಳಾಗಿದ್ದ ನಮಗೊಂದು ಅದ್ಭುತ ಸಾಹಸದ ಕಾರ್ಯವೇ ಆಗಿ ಕಾಣುತ್ತಿತ್ತು! ಅವರೆಲ್ಲಾ ಮೀನು ಹಿಡಿಯುವಲ್ಲಿ ಎಷ್ಟೊಂದು ತಲ್ಲೀನರಾಗಿರುತ್ತಿದ್ದರೆಂದರೆ, ಒಬ್ಬರನ್ನೊಬ್ಬರು ಮಾತಾಡಿಸುವಷ್ಟೂ ವ್ಯವಧಾನವಿಲ್ಲದವರಂತೆ ಕಾಲ್ಬುಡದ ಕೆಸರೊಳಗೆ ಹುದುಗಿಕೊಂಡಿರುವ, ಕಲ್ಲಿನ ಎಡೆಯ ಮಾಟೆಯೊಳಗೆ ಸೇರಿಕೊಂಡು “ಬರಲಾರೆ” ಎನ್ನುವ ಮೀನುಗಳನ್ನು ಹಿಡಿಯುವುದರಲ್ಲಿ ಅವರೆಲ್ಲ ಪ್ರಪಂಚವನ್ನೇ ಮರೆತುಬಿಡುತ್ತಿದ್ದರು! ಹೀಗಾಗಿ ಅವರ ಕೈಕಾಲುಗಳ ಅಡಿಯಲ್ಲಿ ಇವುಗಳು ಸಿಕ್ಕಿ ಸಾಯುವುದು ಬೇಡ ಎಂದು ಯಾವ ತಂದೆ-ತಾಯಂದಿರೂ ಕೆರೆಯೊಳಗೆ ನಡೆಯುವ ಅದ್ಭುತ ಸಾಹಸದ ಕಾರ್ಯವನ್ನು ಆಸೆಯ ಕಣ್ಣುಗಳಿಂದ ಕಾಣುತ್ತಿದ್ದ ನಮ್ಮನ್ನು – ಎಂದರೆ ತಡೆಯಲಾರದ ಪುಂಡುಪೋಕರಿಗಳಾಗಿದ್ದ ನಮ್ಮ ಬಾಲಸೈನ್ಯವನ್ನು ಸುತಾರಾಂ ಇಳಿಯಲು ಬಿಡುತ್ತಿರಲೇ ಇಲ್ಲ! ಆದರೆ ನಾವೋ- ಎಂತಹಾ ಮಂಗಗಳಾಗಿದ್ದೆವು ಎಂದರೆ- ಅಂತಹಾ ಏಳುಸುತ್ತಿನ ಕೋಟೆಯಂತಿದ್ದ ಅಮ್ಮಂದಿರ ಕಣ್ಣು ತಪ್ಪಿಸಿಯೋ ಅಥವಾ ಬೈಗುಳ, ಪೆಟ್ಟು ಬಿದ್ದರೆ ಅವೆಲ್ಲ ಲೆಕ್ಕದಿಂದ ಹೊರಗೆ ಎಂದುಕೊಂಡು- ಒಟ್ಟಿನಲ್ಲಿ ಯಾವ ಮಾಯಕದಿಂದಲೋ- ಕೆರೆಯೊಳಗೆ ಇಳಿದುಬಿಡುತ್ತಿದ್ದೆವು!! ಆಗೆಲ್ಲ ದೊಡ್ಡವರು ನಮ್ಮ ಕಾಟ ತಾಳಲಾರದೆ ತೋರು ಬೆರಳ ಗಾತ್ರದ ಚಿಕ್ಕ ಮೀನನ್ನು ತೊರಿಸಿ, “ಹಿಡಿಯಿರಿ” ಎನ್ನುತ್ತಿದ್ದರು. ನಾವೋ, ದೊಡ್ಡ ಮೀನನ್ನು ಹಿಡಿಯಲು ಹೇಳುವುದನ್ನು ಬಿಟ್ಟು ಈ ಸಣ್ಣ ಮೀನು ತೋರಿಸಿದ ಅವರ ಮೇಲೆ ಸ್ವಲ್ಪವೂ ಖುಷಿಗೊಳ್ಳದೇ, ಆದರೂ ಅದನ್ನು ತೋರಗೊಡದೆ, “ಈ ಸಣ್ಣ ಮೀನನ್ನು ಹಿಡಿಯುವುದು ಯಾವ ಲೆಕ್ಕ?” ಎಂದುಕೊಂಡು, ದೊಡ್ಡವರಿಗಿಂತ ನಾವೇನು ಕಮ್ಮಿ ಎಂದುಕೊಂಡು ಏನನ್ನೋ ಸಾಧಿಸ ಹೊರಟವರಂತೆ, ಲಬಕ್ಕನೆ ಆ ಮೀನನ್ನು ಹಿಡಿಯುವುದಕ್ಕೂ, ಏನಾಯ್ತೆಂಬುದು ಅರ್ಥವಾಗುವುದರೊಳಗೆ ಮುಷ್ಠಿಯೊಳಗಿದ್ದ ಮೀನೊಮ್ಮೆ ಬಲವಾಗಿ ಅಲುಗಾಡುವುದಕ್ಕೂ, ‘ಛಟೀಲ್‘ ಎಂದು ಇಡೀ ಕೈಯ್ಯೇ ಕಳಚಿ ಹೋಗುವಂತೆ ಮೀನು ದೇಹದ ಇಡೀ ನರನಾಡಿಗಳು ಹಿಂಡಿಹಿಪ್ಪೆಯಾಗುವಂತೆ ತನ್ನ ಮುಳ್ಳಿನಿಂದ ‘ಪೆಟ್ಟು’ ಕೊಡುವುದಕ್ಕೂ, ಕರೆಂಟು ಹೊಡೆದವರಂತೆ ನಾವು ಕೈ-ಕೈ ಹಿಸುಕಿಕೊಂಡು ‘ಆಯ್-ಆಯ್’ ಎನ್ನುತ್ತಾ ಇಂಗು ತಿಂದ ಮಂಗನಂತೆ- ಹೇಗೆ ಯಾರ ಕಣ್ಣಿಗೂ ಬೀಳದೇ ಕೆರೆ ಇಳಿದಿದ್ದೆವೋ- ಹಾಗೆಯೇ ಯಾರ ಕಣ್ಣಿಗೂ ಕಾಣದಂತೆ ದಂಡೆ ಹತ್ತಿ ಪರಾರಿಯಾಗುವುದೂ ಸರಿ ಹೋಗುತ್ತಿತ್ತು! ಮೀನು ಕೊಟ್ಟ ಏಟಿಗೆ ಕಣ್ಣುಕತ್ತಲೆ ಬಂದು ನಾವು ಕಾಲು ಗಂಟೆಯಾದರೂ ಎಲ್ಲೋ ಒಂದು ಕಡೆ ಕೂರುವಂತಾದ್ದರಿಂದ, ಕೆರೆಗೆ ಬಿದ್ದು ಸಾಯದಂತೆ ಕಾಯುವ ದೊಡ್ಡ ಕಷ್ಟವನ್ನು ಹೊತ್ತಿದ್ದ ಹೆಂಗಸರು ಸದ್ಯಕ್ಕೆ ಪೀಡೆ ತೊಲಗಿತಲ್ಲಾ ಎಂದು ನೆಮ್ಮದಿಯ ಉಸಿರು ಬಿಡುವಂತಾದರೆ, ಕೆರೆಯೊಳಗೆ ಮಾತ್ರ ಗಂಡಸರ ನಗು! ಆಗಲೇ ಗೊತ್ತಾಗುತ್ತಿದ್ದುದು, ನಮಗೆ ಅವರು ತೋರಿಸಿದ್ದು ಯಾವುದೋ ಸಣ್ಣ ಮೀನನ್ನಲ್ಲ, ಬದಲಿಗೆ ‘ಮೂರ್ತಿ ಚಿಕ್ಕದಾಗಿದ್ದರೂ, ಏಟು ಚೆನ್ನಾಗಿ ಕೊಡುವ’ ಸಿಂಗ ಅಥವಾ ಚಿಂಕ್ಟಿ ಎಂಬ ಮೀನನ್ನು ಎಂದು!

    ಪ್ರಪಂಚದ ಪ್ರತಿ ಜೀವಿಗೂ ದೇವರು ಅದಕ್ಕೇ ಆದ ರಕ್ಷಣಾ ತಂತ್ರವನ್ನು ಕೊಟ್ಟಿದ್ದಾನೆ. ಕೈಕಾಲುಗಳಿಲ್ಲದ- ಹೊರಗಿನಿಂದ ಅಸಹಾಯಕವಾಗಿ ಕಾಣುವ ಮೀನುಗಳಿಗೆ ಸ್ವಲ್ಪ ಹೆಚ್ಚೇ ಕೊಟ್ಟಿದ್ದಾನೆ! ಅದರಲ್ಲೂ ಜಪಾನಿನ “ಫುಗು” ಅಥವಾ “ಪಫ್ಫರ್” ಮೀನಿಗೆ ಕೊಟ್ಟಿರುವುದು ಅಂತಿಂತಹಾ ರಕ್ಷಣಾ ತಂತ್ರವಲ್ಲ. ಕೇಳಿದರೆ “ಅದರ ಸಹವಾಸವೇ ಬೇಡ ಮಾರಾಯ್ರೇ” ಎನ್ನುವಷ್ಟು ಹೆದರಿಸಬಲ್ಲ ಮೀನದು! ಜೀವಂತವಾಗಿರುವಾಗ ಅಷ್ಟೇ ಅಲ್ಲ; ಸತ್ತ ಮೇಲೂ ಬೆಂಬಿಡದ ಬೇತಾಳನಂತೆ ತನ್ನ ಹಗೆ ತೀರಿಸಿಕೊಳ್ಳಲು ಕಾಯುತ್ತಿರುತ್ತದೆ!!

    ತಿನ್ನುವ ಮೀನಿನ ಮಾಂಸದೊಳಗೆ ಕಾರ್ಕೋಟಕ ವಿಷ..!

    ಪುಗು, ಪಫ್ಫರ್ ಫಿಶ್, ಬ್ಲೋ ಫಿಶ್, ಗ್ಲೋಬ್ ಫಿಶ್ (ಗೋಳ ಮೀನು), ಬಲೂನ್ ಫಿಶ್ ಎಂದೆಲ್ಲ ಕರೆಸಿಕೊಳ್ಳುವ ಈ ಮೀನು, ತಾಗಿಫುಗು/ತಾಕಿಫುಗು ಜಾತಿಗೆ ಸೇರಿದ್ದು. ಈ ಮೀನಿನ ಘೋರ ವಿಷದ ಬಗ್ಗೆ ಹೇಳುವ ಮೊದಲು ಅತ್ಯಂತ ಆಸಕ್ತಿದಾಯಕವಾದ ಇದರ ಬದುಕಿನ ಕ್ರಮವನ್ನು ನಾವು ತಿಳಿದುಕೊಳ್ಳಲೇಬೇಕು!! ವೈರಿಗಳು ಇಲ್ಲದಿದ್ದಾಗ ಸರ್ವೇಸಾಮಾನ್ಯ ಮೀನುಗಳಂತೆಯೇ ಈ ಮೀನೂ ಕಾಣುತ್ತದೆ. ಆದರೆ ಯಾವಾಗ ಶತ್ರು ಎದುರಿಗೆ ಬಂತೋ, ತನ್ನ ಪ್ರಾಣಕ್ಕೆ ಸಂಚಕಾರ ಎಂಬುದು ಈ ಮೀನಿಗೆ ಅರಿವಾಯಿತೋ, ತಗೊಳ್ಳಿ!, ಮೀನು ತನ್ನ ಸುತ್ತಲಿನ ನೀರನ್ನು ತನ್ನ ದೇಹದೊಳಗೆ ತುಂಬಿಸಿಕೊಳ್ಳಲು- ಎಂದರೆ ಕುಡಿಯಲು ಆರಂಭಿಸುತ್ತದೆ! ಎಷ್ಟು ತುಂಬಿಸಿಕೊಳ್ಳುತ್ತದೆ ಎಂದರೆ ಉದ್ದಕ್ಕೆ ಸಾಮಾನ್ಯ ರೂಪದಲ್ಲಿದ್ದ ಈ ಮೀನಿನ ದೇಹ ಕೇವಲ ಮೂವತ್ತು ಸೆಕೆಂಡ್ ಕಳೆಯುವುದರೊಳಗೆ ನೀರು ತುಂಬಿ, ಇದನ್ನು ತಿನ್ನಲು ಬಂದ ಎದುರಿನ ಪ್ರಾಣಿಗೆ ತಲೆಕಟ್ಟು ಹೋಗಬೇಕು ಆ ರೀತಿಯಲ್ಲಿ ಸಾಕ್ಷಾತ್ ಫುಟ್ಬಾಲ್‌ನಂತೆ ಕಾಣುತ್ತದೆ!! ಇಷ್ಟೇ ಆದರೆ ಚಿಂತೆ ಇರಲಿಲ್ಲವೇನೋ!, ಕಿರೀಟಕ್ಕೆ ತುರಾಯಿ ಸಿಕ್ಕಿಸಿದಂತೆ ಮೀನಿಗೆ ‘ಸಿಟ್ಟು’ ಬರುವ ಮೊದಲು ಸಾಮಾನ್ಯವಾಗಿ ಕಾಣಿಸದೇ ಇದ್ದ ಅದರ ಮೈಮೇಲಿನ ರೋಮಗಳು, ನೀರು ತುಂಬಿ ಫುಟ್‌ಬಾಲ್‌ ಆದ ಮೀನಿನೊಂದಿಗೆ, ‘ತಾನೇನು ಕಮ್ಮಿ’ ಎಂದುಕೊಂಡು, ರೋಮಗಳು ತದ್ರೂಪಿ‌ ದೊಡ್ಡ ಮುಳ್ಳುಗಳಂತೆ ರೂಪ ತಾಳುತ್ತವೆ!! ಈಗಂತೂ ಇಡಿಯ ಮೀನು ಅಕ್ಷರಶಃ ಮುಳ್ಳಿನ ಚೆಂಡಿನಂತೆ ಎಂಥವರಿಗೂ ಹೆದರಿಸುವ ರೀತಿಯಲ್ಲಿ ಕಾಣಿಸುತ್ತದೆ!! “ಇಂದಿನ ಪುಷ್ಕಳ ಭೋಜನಕ್ಕೆ ಆಯಿತು” ಎಂದು ತಿನ್ನಲು ಬಂದ ಪ್ರಾಣಿಯು- ಮೊದಲೇ ತಲೆ ಕೆಟ್ಟು ಕೊಂಡಿದ್ದರೆ, ಫುಗು ಮೀನಿನ ಈ ಮುಳ್ಳಿನ ಉಗ್ರ ರೂಪ ನೋಡಿ, ತಿನ್ನೋದು ಹೋಗಲಿ, ತನ್ನ ಜೀವ ಉಳಿದರೆ ಸಾಕಪ್ಪಾ ಎಂದು ಕಂಬಿಕೀಳುತ್ತದೆ!! ಇತ್ತ ಫುಗು ತನ್ನ ಬುದ್ಧಿಮತ್ತೆಗೆ ತಾನೇ ಖುಷಿಪಟ್ಟು, ಜೀವ ಉಳಿಸಿಕೊಳ್ಳುತ್ತದೆ!! ಒಂದೊಮ್ಮೆ ಈ ಬೆದರಿಕೆಗೂ ಜಗ್ಗದೆ ಎದುರಾಳಿ ತನ್ನನ್ನು ನುಂಗಿಯೇ ಬಿಟ್ಟರು ಕೂಡ, ನುಂಗಿದವ ಹೆಚ್ಚು ಹೊತ್ತು ಬದುಕಲಾರ ಎಂಬುದು ಈ ಮೀನಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ!! ಏಕೆಂದರೆ ಅಷ್ಟು ವಿಷಯುಕ್ತ ಮೀನಿದು! ಆದರೆ ಮನುಷ್ಯನ ಕತೆ ಗೊತ್ತಲ್ಲಾ?!, ಈ ಮೀನನ್ನೂ ಬಿಟ್ಟಿಲ್ಲ! ಜಪಾನಿನ ಜನ ಈ ಮೀನಿನ ಮಾಂಸವೆಂದರೆ ಪ್ರಾಣ ಬಿಡುತ್ತಾರೆ, ಅನೇಕರು ಈ ಮೀನನ್ನು ತಿಂದು ಪ್ರಾಣವನ್ನೂ ಬಿಡುತ್ತಾರೆ!! ಹೌದು, ಜಗತ್ತಿನ ಕೆಲವೇ ಕೆಲವು ಅತಿ ಘೋರ ವಿಷವುಳ್ಳ ಮೀನಿದು! ಇದರ ಟೆಟ್ರೋಡೊಟಾಕ್ಸಿನ್ ಎಂಬ ಘನಘೋರ ವಿಷ ಕೆಲವೇ ಸೆಕೆಂಡುಗಳಲ್ಲಿ ನರಮಂಡಲದ ವಿದ್ಯುತ್ ತರಂಗಗಳನ್ನು ಸ್ಥಗಿತಗೊಳಿಸುವುದರಿಂದ ನೋಡ ನೋಡುತ್ತಲೆ ವ್ಯಕ್ತಿ ಉಸಿರುಗಟ್ಟಿ ಸಾವಿಗೀಡಾಗುತ್ತಾನೆ!

    ಫುಗುವಿನ ಪಿತ್ತಜನಕಾಂಗ ಅತ್ಯಂತ ರುಚಿಕರವಾಗಿದ್ದು, ಆದರೆ ಅಷ್ಟೇ ವಿಷಕಾರಿಯೂ ಆಗಿರುವುದರಿಂದ, ಈ ರುಚಿಯ ಬೆನ್ನು ಹತ್ತಿದವರು ಸಾವಿನ ಹೆಡೆಯ ನೆರಳಿನಲ್ಲೇ ತಿನ್ನಬೇಕಾಗುತ್ತದೆ! ಪಿತ್ತಜನಕಾಂಗದ ಜೊತೆಗೆ, ಫುಗು ಮೀನಿನ ಅಂಡಾಶಯ ಮತ್ತು ಚರ್ಮ ಅತ್ಯಂತ ವಿಷಯುಕ್ತವಾಗಿದ್ದು, ಈ ಮೀನಿನ ಖಾದ್ಯ ತಯಾರಿಸಲು ಮಾಂಸವನ್ನು ಅತಿ ಸೂಕ್ಷ್ಮವಾಗಿ ಬಿಡಿಸಬೇಕು. ಇದಕ್ಕೆಂದೇ ಪುಗು ಮೀನಿನ ಖಾದ್ಯ ತಯಾರಿಸುವ ಹೊಟೇಲಿನ ಅಡುಗೆಯವರು ಎರಡರಿಂದ ಮೂರು ವರ್ಷಗಳ ಕಠಿಣ ತರಬೇತಿ ಪೂರೈಸಲೇಬೇಕು. ತರಬೇತಿಯು ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಹಾಗು ಮೀನನ್ನು ಗುರುತಿಸುವ ಕಷ್ಟಕರವಾದ ಹಂತಗಳನ್ನು ಹೊಂದಿದ್ದು, ನೂರು ಜನರಿಗೆ ಕೇವಲ ಮೂವತ್ತೈದು ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದುತ್ತಾರೆ! ಪಾಸಾಗಿ ಲೈಸನ್ಸ್ ಪಡೆದವರು ಮಾತ್ರ ಫುಗುವಿನ ಖಾದ್ಯ ತಯಾರಿಸಲು ಅರ್ಹರು.

    ಪುಗು ಮೀನಿನಿಂದ ಮಾಂಸವನ್ನು ವಿಷದಿಂದ ಬೇರ್ಪಡಿಸಿ ತೆಗೆಯುವುದಕ್ಕೆ “ಉಸುಜು಼ಕರಿ ತಂತ್ರ” ಎಂದು ಕರೆಯುತ್ತಾರೆ. ಮಾಂಸವನ್ನು ತೆಳುವಾಗಿ ತೆಗೆಯಲು “ಫುಗು ಹಿಕಿ” ಎಂಬ ವಿಶಿಷ್ಟವಾದ ಅತ್ಯಂತ ತೆಳು ಹಾಗೂ ಆದರೆ ನಮ್ಮೆಲ್ಲರ ಕಲ್ಪನೆಗೇ ಸಿಗದಷ್ಟು ಹರಿತವಾದ ಚೂರಿ ಬಳಸುತ್ತಾರೆ. ಈ ಚೂರಿ ಎಷ್ಟು ತೆಳು ಹಾಗೂ ಹರಿತವಾಗಿರುತ್ತದೆ ಎಂದರೆ ಇದರಿಂದ ಕತ್ತರಿಸಿ ತೆಗೆದ ಮಾಂಸ ಕಾಗದದಷ್ಟು ತೆಳುವಾಗಿರುತ್ತದೆ. ಮೇಲಿನಿಂದ ನೋಡಿದರೆ, ತಟ್ಟೆಯ ತಳದ ಚಿತ್ರವೂ ಸ್ಪಷ್ಟವಾಗಿ ಜೋಡಿಸಿಟ್ಟ ಮಾಂಸದ ಮೂಲಕ ಕಾಣಿಸುತ್ತದೆ! ಈ ರೀತಿ ಪಾರದರ್ಶಕ ಮಾಂಸವನ್ನು ಕೊಕ್ಕರೆ, ನವಿಲು ಮೊದಲಾದ ಚಿತ್ತಾರಗಳಲ್ಲಿ ತಟ್ಟೆಯ ಮೇಲೆ ಜೋಡಿಸಲಾಗುತ್ತದೆ! ಹೆಚ್ಚಾಗಿ ಫುಗುವಿನ ಮಾಂಸವನ್ನು ಜಪಾನೀಯರು ಹಸಿಯಾಗಿ ಸೂಪ್​ಗಳಲ್ಲಿ ಮುಳುಗಿಸಿ ತಿನ್ನುತ್ತಾರೆ. ಮೀನಿನ ಮಾಂಸ ತೆಗೆದು ಗಿರಾಕಿಗೆ ಕೊಡುವ ಮಧ್ಯದಲ್ಲಿ ಬರೋಬ್ಬರಿ ಮೂವತ್ತು ಹಂತಗಳನ್ನು ಆ ಮಾಂಸ ಸಾಗಬೇಕಾಗುತ್ತದೆ! ಇಷ್ಟೆಲ್ಲ ಎಚ್ಚರಿಕೆಯಿಂದ ಮಾಂಸವನ್ನು ಬೇರ್ಪಡಿಸಿ ತೆಗೆದರೂ, ವಿಷದಿಂದ ಸಾಯುವವರ ಸಂಖ್ಯೆ ಕಡಿಮೆ ಇಲ್ಲ. ಜಪಾನಿನಲ್ಲಿ ವರ್ಷಕ್ಕೆ ಕನಿಷ್ಟ 30ರಿಂದ 40 ಜನ ಈ ವಿಷಪೂರಿತ ಮಾಂಸ ತಿಂದು ಸಾಯುತ್ತಾರೆ! ಇದಕ್ಕೆ ಮುಖ್ಯ ಕಾರಣ, ಫುಗುವಿನ ವಿಷ ಪ್ರಪಂಚದ ಭೀಕರ ವಿಷವಾದ ಸಯನೈಡ್​ಗಿಂತ 1250 ಪಟ್ಟು ಹೆಚ್ಚು ಪ್ರಾಣಾತ್ಕಾರಿಯಾಗಿರುವುದು!! ಸೂಜಿ ಮೊನೆಯ ಮೇಲಿನ ಬಿಂದು ಮಾತ್ರದ ವಿಷ ಸಲೀಸಾಗಿ ಸುಮಾರು 30 ಜನರನ್ನು ಮುಗಿಸಿಬಿಡಬಲ್ಲದು!- ಅಷ್ಟೊಂದು ಘೋರ ವಿಷವಿದು!! ಹೀಗಾಗಿ ವಿಷ ಬೆರೆತ ಖಾದ್ಯ ತಿನ್ನುವವರು ವಿಷವೇರಿ ನರಳಿ ಸಾಯುವುದಿಲ್ಲ. ಬದಲಿಗೆ ಬಾಯಲ್ಲಿ ಮಾಂಸವನ್ನು ಅಗಿಯುತ್ತಿರುವಾಗಲೇ, ಆಚೀಚೆ ನೋಡುತ್ತಾ ತಿನ್ನುತ್ತಿರುವಾಗಲೇ ಅವರ ಕೈಯ್ಯಲ್ಲಿರುವ ಚಮಚಗಳು ಇದ್ದಕ್ಕಿದ್ದಂತೆ ಹಾಗೆಯೆ ಕೆಳಗೆ ಬೀಳುತ್ತವೆ! ಮುಂದಿನ ಒಂದೆರಡು ಸೆಕೆಂಡ್​ಗಳಲ್ಲಿ ಹೇಗೆ ಕುಳಿತಿದ್ದಾರೋ, ಹಾಗೇ ಕುಳಿತುಕೊಂಡಿದ್ದೇ ಸತ್ತಿರುತ್ತಾರೆ!!

    ತಿನ್ನುವ ಮೀನಿನ ಮಾಂಸದೊಳಗೆ ಕಾರ್ಕೋಟಕ ವಿಷ..!

    ಇಷ್ಟಾಗಿಯೂ ಜಪಾನೀಯರು ಫುಗುವಿನ ಮಾಂಸಕ್ಕೆ ಎಷ್ಟು ಮುಗಿ ಬೀಳುತ್ತಾರೆ ಎಂದರೆ, ಸುಮಾರು ಒಂದೂ ಮುಕ್ಕಾಲು ಕಿಲೋ ತೂಗುವ ತೋರುಫುಗು ಮೀನಿಗೆ ಮಾರುಕಟ್ಟೆಯಲ್ಲಿ ಕಡಿಮೆಯೆಂದರೂ ನೂರು ಡಾಲರ್ ಬೆಲೆ ಇದೆ. ಎಂದರೆ ಹತ್ತಿರತ್ತಿರ ಏಳುವರೆ ಸಾವಿರ ರೂಪಾಯಿ!! ಫುಗು ಮಾಂಸದಿಂದ ತಯಾರಿಸುವ ‘ಸಶಿಮಿ’, ‘ಚೆರಿನಬೆ’ ಖಾದ್ಯಗಳಿಗೆ ಪ್ಲೇಟ್ ಒಂದಕ್ಕೆ ಸುಮಾರು 2ರಿಂದ 7 ಸಾವಿರ ರೂಪಾಯಿಗಳಿವೆ! ಅದಕ್ಕೂ ಜಪಾನೀಯರ ನೂಕುನುಗ್ಗಲು! ಚೋಟುದ್ದದ ನಾಲಗೆಯನ್ನು ತೃಪ್ತಿ ಪಡಿಸಲು ಜನ ಏನು ಮಾಡಲೂ, ಕೊನೆಗೆ ಪ್ರಾಣ ಬಿಡಲೂ ಸಿದ್ಧರಿದ್ದಾರಲ್ಲ!

    ಆರೋಗ್ಯ ಸರಿ ಇಲ್ಲವೆಂದು ವೈದ್ಯರಲ್ಲಿಗೆ ಹೋಗುತ್ತೇವೆ. ವೈದ್ಯರು ಪದೇಪದೆ ಹೇಳುತ್ತಾರೆ, “ನಿಮಗೆ ಸಕ್ಕರೆ ಖಾಯಿಲೆ ಇದೆ, ಸಿಹಿ ತಿನ್ನಬೇಡಿ, ಖಾಯಿಲೆ ಹೆಚ್ಚಾಗುತ್ತದೆ… ನಿಮಗೆ ಬಿ.ಪಿ. ಹಾಗೂ ಕೊಲೆಸ್ಟ್ರಾಲ್ ವಿಪರೀತವಾಗಿದೆ. ಎಣ್ಣೆಯಲ್ಲಿ ಕರಿದ ಪದಾರ್ಥಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ, ಸ್ವಲ್ಪ ದಿನ ಬಿಡುವುದು ಒಳ್ಳೆಯದು…” ವೈದ್ಯರಿಗೇನು?! ಹೇಳುತ್ತಾರೆ! ಹೇಳುವುದೇ ಅವರಿಗೆ ಕೆಲಸ! ನಮ್ಮ ನಾಲಗೆಯ ಕಷ್ಟ ಅವರಿಗೆಲ್ಲಿ ಗೊತ್ತಾಗಬೇಕು?! ಹುಟ್ಟಿದ ಮೇಲೆ ಸಾಯಲೇಬೇಕು! ತಿನ್ನದೇ ಸಾಯುವುದಕ್ಕಿಂತ ಸ್ವಲ್ಪ ತಿಂದು ಸಾಯೋಣ!, ಸಾಯುವುದೇ ಹೌದಾದ ಮೇಲೆ ಚೆನ್ನಾಗಿ ತಿಂದೇ ಸಾಯೋಣ!! ವೈದ್ಯರ ಸಲಹೆಗಳು, ಅವರು ಕೊಟ್ಟ ಚೀಟಿಯೊಳಗೆ ಕಣ್ಣೀರು ಹಾಕುತ್ತಾ ಎಲ್ಲೋ ಮೇಜಿನ ಮೂಲೆಯ ಫೈಲಿನೊಳಗೆ ಅಳುತ್ತಿರುತ್ತವೆ. ನಾವಿಲ್ಲಿ ತಿಂದೂ ತಿಂದೂ- ನಮಗೆ ನಾವೇ ಹಾಕಿಕೊಂಡ ಶಾಸನದಂತೆ, ಒಂದೂವರೆ ಇಂಚಿನ ನಾಲಗೆಯನ್ನು ತೃಪ್ತಿಪಡಿಸುವ ಧಾವಂತದಲ್ಲಿ ಐದೂವರೆಯೋ ಆರಡಿಯದ್ದೋ – ಒಟ್ಟಿನಲ್ಲಿ ಇಡೀ ದೇಹವೇ ಮಕಾಡೆ ಮಲಗುತ್ತದೆ! ನಾಲ್ಕು ಜನರ ಹೆಗಲ ಮೇಲೆ ಬಿದಿರಿನ ಮಂಚದಲ್ಲಿ ಮಲಗಿಕೊಂಡು, ಹೊಗೆ ಹಾಕಿಸಿಕೊಂಡು ಕೃತಾರ್ಥರಾಗುತ್ತೇವೆ! ಇತ್ತೀಚೆಗೆ ಎಲ್ಲೋ ಕೇಳಿದ ಮಾತು ‘ಜಿಹ್ವಾ ಅತಿಪ್ರಮಾತಿನಿ’- ಎಂದರೆ ನಮ್ಮ ದೇಹದಲ್ಲಿ ನಾಲಗೆಯಷ್ಟು ಕಾಟ ಕೊಡುವ ಅಂಗ ಮತ್ತೊಂದಿಲ್ಲ!! ಎಷ್ಟು ನಿಜವಲ್ಲವೆ?! ‘ಫುಗು’ ಎನ್ನುವ ಮೀನಿನ ಮಾಂಸದೊಳಗೆ ಅಡಗಿಕೊಂಡು, ನಾಲಗೆಯ ಚಪಲಕ್ಕೆ ಬಿದ್ದವರನ್ನು ಕೊಲ್ಲಲು ಸದಾ ಹೊಂಚುಹಾಕುವ ಅದರ ಕಾರ್ಕೋಟಕ ವಿಷವನ್ನು ಜ್ಞಾಪಿಸಿಕೊಂಡಾಗ ಇದೆಲ್ಲ ನೆನಪಾಯಿತು!

    ಮತ್ಸ್ಯಪ್ರಿಯರಿಗೆ ಸಕತ್​ ಖುಷಿ ಸುದ್ದಿ: ತಾಜಾತಾಜಾ ಮೀನು ಇನ್ಮುಂದೆ ಆನ್​ಲೈನ್​ನಲ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts