More

  ಶನಿ ಸಂಚಾರ ಯಾರಿಗೆ ವರ, ಯಾರಿಗೆ ಗ್ರಹಚಾರ

  ಶುಕ್ರವಾರ 33 ವರ್ಷದ ನಂತರ ಶನಿ ತನ್ನ ಮನೆಗೆ ಬರುತ್ತಾನೆ. ಒಂದು ಮನೆಯಿಂದ ಮತ್ತೊಂದು ಮನೆಗೆ ದಾಟಲು 2 ವರ್ಷ 8 ತಿಂಗಳು ಸಮಯ ಬೇಕು. ಅದೇ ರೀತಿ 12 ಮನೆ ದಾಟಿ ಬರಲು 33 ವರ್ಷ ಬೇಕು. ಈ ಸಮಯದಲ್ಲಿ ರಾಜ್ಯ, ರಾಷ್ಟ್ರ ರಾಜಕಾರಣ ಹಾಗೂ ಸಮಾಜದ ಬಗ್ಗೆ ರಾಜಗುರು ಎಂದೇ ಖ್ಯಾತರಾದ ದೈವಚಿಂತಕ ಬಿ.ಎಸ್. ದ್ವಾರಕಾನಾಥ್ ಅವರು ವಿಜಯವಾಣಿ ಜತೆಗೆ ಮಾತನಾಡಿದ್ದಾರೆ.

  ಶನಿ ಕೆಟ್ಟವನೆಂದು ತೀರ್ವನಿಸಬಾರದು. ಜೀವನದಲ್ಲಿ ಮನುಷ್ಯ ಧರ್ಮ-ಕರ್ಮ ಕಲಿತುಕೊಳ್ಳಲು ಶನಿ ಇರಬೇಕು. ಶನಿ ಸಾಕ್ಷಾತ್ ಈಶ್ವರನ ಸೃಷ್ಟಿ. ಮಾನವರು ಲಗಾಮು ತಪ್ಪಿ ನಡೆದಾಗ ಬೇರೆಯವರಿಗೆ ನೋವು ಕೊಡುತ್ತಾರೆ, ಕೊಲೆ, ಸುಲಿಗೆ ಮಾಡುತ್ತಾರೆ. ಅದಕ್ಕೆ ದಂಡಿಸಲು ಶನಿ ಸೃಷ್ಟಿ ಮಾಡಲಾಗಿದೆ. ಶನಿ ಬಂದ ಎಂದು ಹೆದರಬಾರದು. ನಾವು ಸರಿಯಾಗಿದ್ದರೆ ಅವನೇನೂ ಮಾಡುವುದಿಲ್ಲ. ಧರ್ಮ-ಕರ್ಮಗಳನ್ನು ಸರಿಯಾಗಿ ಮಾಡಬೇಕು. ಶುಕ್ರವಾರ ರಾತ್ರಿ ಗುರು ಮನೆ ಬಿಟ್ಟು ಮಕರ ರಾಶಿಗೆ ಶನಿ ಪ್ರವೇಶಿಸುತ್ತಾನೆ. ಮುಂದೆ 2 ವರ್ಷ 8 ತಿಂಗಳ ನಂತರ ಕುಂಭಕ್ಕೆ ಪ್ರವೇಶಿಸುತ್ತಾನೆ. ಮಕರ, ಕುಂಭಕ್ಕೆ ಶನಿಯೇ ಅಧಿಪತಿ. ಮಕರ, ಕುಂಭದಲ್ಲಿ ಒಟ್ಟು 5.4 ವರ್ಷ ಶನಿ ಇರುತ್ತಾನೆ. ಈ ಸಮಯದಲ್ಲಿ ಧರ್ಮ, ಕರ್ಮಗಳಿಗೆ ತಕ್ಕ ಒಳಿತು ಹಾಗೂ ಶಿಕ್ಷೆ ನೀಡುತ್ತಾನೆ.

  2025ರ ವೇಳೆಗೆ ಶನಿ ತನ್ನ ಪ್ರಭಾವ ತೋರಿಸುತ್ತಾನೆ. ದೇಶದ ಆರ್ಥಿಕತೆ ಕುಸಿದಿದೆ ಎಂಬುದು ನಿಜ. ಆದರೆ ಭಾರತ ಮಾತ್ರವೇ ಅಲ್ಲ, ಇಡೀ ವಿಶ್ವ ಸಂಕಷ್ಟದಲ್ಲಿದೆ. ಮಾರ್ಚ್ ವೇಳೆಗೆ ದೇಶದ ಆರ್ಥಿಕತೆ ಒಂದು ಹಂತಕ್ಕೆ ಬರುತ್ತದೆ. 2020ರ ಜೂನ್ ವೇಳೆಗೆ ಆರ್ಥಿಕತೆ ಪುನಶ್ಚೇತನಗೊಳ್ಳುತ್ತದೆ. ಆದರೆ ಈ ಮುಂಬರುವ ಬಜೆಟ್​ನಲ್ಲಿ ಉದ್ಯೋಗ ಸೃಷ್ಟಿಗೆ ಸರ್ಕಾರ ಆದ್ಯತೆ ನೀಡಬೇಕು. ಬ್ಯಾಂಕ್​ಗಳನ್ನು ವಿಲೀನ ಮಾಡುವ ಕ್ರಮ ಸರಿಯಲ್ಲ. ರಾಜಕೀಯವಾಗಿ ಯಾವುದೇ ವಿಚಾರವಿರಲಿ, ಸುಬ್ರಹ್ಮಣ್ಯಂ ಸ್ವಾಮಿಯವರನ್ನು ಆರ್ಥಿಕ ವಿಚಾರವಾಗಿ ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹಣಕಾಸು ಸಚಿವರನ್ನು ಬದಲಾಯಿಸಿದರೂ ತೊಂದರೆಯಿಲ್ಲ. ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ಖಾತೆಯನ್ನು ಸಾಕಷ್ಟು ಉತ್ತಮವಾಗಿ ನಿರ್ವಹಿಸಿದ್ದರು. ಆದರೆ ಹಣಕಾಸು ಇಲಾಖೆ ಸ್ಥಾನ ಸಾಕಷ್ಟು ಕಷ್ಟಕರವಾದದ್ದು. ಹಣ ಕ್ರೋಡೀಕರಿಸಬೇಕು, ಆರ್ಥಿಕತೆ ಉತ್ತಮಗೊಳಿಸಬೇಕು. ಆರ್ಥಿಕತೆ ಉತ್ತೇಜನಕ್ಕೆ ಬೇಕಾದ ಯಾವುದೇ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು. ಶನಿ ಸಂಚಾರವಿರುವ ಕಾರಣ ಮಳೆ, ಬೆಳೆ ಸ್ಥಿರವಾಗಿರುವುದಿಲ್ಲ. ಕೃಷಿ ಬಗ್ಗೆ ಪ್ರಧಾನಿ ಹೆಚ್ಚಿನ ಗಮನ ನೀಡಬೇಕು. ಬಜೆಟ್​ನಲ್ಲಿ ಇದಕ್ಕೆ ವಿಶೇಷ ಆದ್ಯತೆ ನೀಡಬೇಕು.

  ಪುನರುಜ್ಜೀವನಕ್ಕೆ ಸಕಾಲ: ರಾಷ್ಟ್ರದ ಮೇಲೆ ಮೊಘಲ್ ರಾಜರು ದಾಳಿ ಮಾಡಿ 40 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳನ್ನು ನಾಶ ಮಾಡಿದರು. ಬ್ರಿಟಿಷರು 200 ವರ್ಷ ಇಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆದರು. ಬ್ರಿಟಿಷರು ಇಷ್ಟು ಕದ್ದೊಯ್ದರೂ ನಾವು ಬದುಕಿದ್ದೇವೆ ಎಂದರೆ ಅದಕ್ಕೆ ಇಲ್ಲಿನ ಧರ್ಮ ಕಾರಣ. ಈ ಧರ್ಮ ಕಾಪಾಡಲು ಮೋದಿ ಮುಂದಾಗಬೇಕು. ಈ ದೇಶದಲ್ಲಿರುವ ಮುಸ್ಲಿಂ ಸಮುದಾಯವೂ ತಮ್ಮ ಪೂರ್ವಜರು ಮಾಡಿರುವ ತಪ್ಪನ್ನು ಸ್ವಯಂಪ್ರೇರಿತವಾಗಿ ತಿದ್ದಿಕೊಳ್ಳಬೇಕು. ಔರಂಗಜೇಬ್ ಕಾಶಿ ವಿಶ್ವನಾಥ ದೇವಸ್ಥಾನವನ್ನು ನಾಶ ಮಾಡಿದ, ಅಲ್ಲಿ ಜ್ಞಾನವ್ಯಾಪಿ ಮಸೀದಿ ಇದೆ. ಕಾಶಿಯಲ್ಲೇ ಇದ್ದ ಮಾಧವನ ದೇವಸ್ಥಾನ ಈಗ ಆಲಾಂಗೀರ್ ಮಸೀದಿಯಾಗಿದೆ. ಮುಸ್ಲಿಂ ಸಮುದಾಯದವರೆಲ್ಲರೂ ಸೇರಿಕೊಂಡು, ದೊಡ್ಡ ಮನಸ್ಸು ಮಾಡಿ ಅವರೇ ಔದಾರ್ಯದಿಂದ ಈ ಸ್ಥಳಗಳನ್ನು ಬಿಟ್ಟುಕೊಡಲು ಮುಂದೆ ಬಂದರೆ ಉತ್ತಮ. ಅವರ ಮನವೊಲಿಸಲು ಮೋದಿ ಮುಂದಾಗಬೇಕು. ವಿರೋಧ ಪಕ್ಷಗಳೂ ಇದಕ್ಕೆ ಬೆಂಬಲ ನೀಡಬೇಕು.

  ಅಯೋಧ್ಯೆ ಕೆಲಸ ಸದ್ಯದಲ್ಲೇ ಆರಂಭವಾಗಲಿದೆ. ಸರ್ಕಾರದಿಂದ ಹಣ ನೀಡುವುದು ಬೇಡ. ನಾನು ಕಟ್ಟಿದೆ ಎನ್ನುವುದು ಯಾರಿಗೂ ಬರಬಾರದು. ಶ್ರೀರಾಮ ನಿಧಿ ಸ್ಥಾಪಿಸಿ ಜನರಿಂದ ಹಣ ಕೇಳಿ. ಎಲ್ಲ ಪೀಠಗಳು, ಜನರು ಹಣ ನೀಡುತ್ತಾರೆ. ಶೃಂಗೇರಿ ಪೀಠದ ಹಾಗೂ ಸ್ವಾಮೀಜಿಯವರ ಆಶೀರ್ವಾದ ಅದಕ್ಕೆ ಬೇಕು. ಅಲ್ಲಿಂದಲೇ ಮಂತ್ರಾಕ್ಷತೆ ಕೊಂಡೊಯ್ದು ಭೂಮಿ ಪೂಜೆ ನೆರವೇರಿಸಬೇಕು.

  ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬ್ರಿಟಿಷರು ಹದಗೆಡಿಸಿಟ್ಟಿದ್ದಾರೆ. ನಮ್ಮ ಶಾಲೆಗಳಲ್ಲಿ ಭಗವದ್ಗೀತೆ ಏಕೆ ಬೋಧಿಸಬಾರದು? ಭಗವದ್ಗೀತೆ ಓದಿ ಯಾರೂ ಕೆಟ್ಟಕೆಲಸ ಮಾಡುವುದಿಲ್ಲ ಎಂಬುದು ನೆನಪಿರಲಿ. ಸಂಸ್ಕೃತವನ್ನು ಎರಡನೇ ಭಾಷೆಯಾಗಿ ಕಡ್ಡಾಯ ಮಾಡಬೇಕು, ಕಾಶ್ಮೀರಿ ಭಾಷೆಯನ್ನು ಪುನರುಜ್ಜೀವನಗೊಳಿಸಲು ಎಲ್ಲ ಸಹಕಾರ ನೀಡಬೇಕು. ಪಾಕಿಸ್ತಾನ, ಚೀನಾ ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು ಹಿಂಪಡೆಯಲು ಮೋದಿ ಅವರಿಗೆ ಇದು ಸಕಾಲ, ಅದನ್ನು ಮೋದಿ ಸಾಧಿಸಿ ತೋರಿಸುತ್ತಾರೆ.

  ರಾಜ್ಯಗಳಿಗೆ ಚಿಂತೆ ಬೇಡ: ಮೋದಿ ಅವರನ್ನು ಯಾರು ಬೆಳೆಸಿದ್ದೂ ಅಲ್ಲ, ಹುಟ್ಟುಹಾಕಿದ್ದೂ ಅಲ್ಲ. ದೇವರೇ ಅವರನ್ನು ತಂದು ಕೂರಿಸಿದ್ದಾನೆ. ನಿಮ್ಮ ಕೈನಲ್ಲಿ ಮುನ್ನೂರಕ್ಕಿಂತ ಹೆಚ್ಚಿನ ಸ್ಥಾನ ಇದೆ. 2025ರವರೆಗೆ ಮೋದಿಯವರನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಅವರಿಗೆ ಶನಿಯ ಸಂಪೂರ್ಣ ಬಲವಿರುತ್ತದೆ. ಇಷ್ಟೆಲ್ಲ ಇದ್ದರೂ ಮತ್ಯಾಕೆ ರಾಜ್ಯಗಳ ಮೇಲೆ ಹಂಬಲ? ನೀವು ಭಾರತವನ್ನು ಸರಿಯಾಗಿ ಆಳಿದರೆ ಎಲ್ಲರೂ ನಿಮಗೇ ಮತ ಹಾಕುತ್ತಾರೆ. ಪ್ರಧಾನಿ ಎಲ್ಲ ಕಡೆ ಏಕೆ ಹೋಗಬೇಕು? ನೀವು ಹೋದಾಗಲೂ ಕೆಲವು ರಾಜ್ಯಗಳು ಸೋತವು. ಆಗ ನಿಮ್ಮ ಕೆಲಸವೇ ಸರಿಯಿಲ್ಲ ಎಂಬ ಆರೋಪ ಬರುತ್ತದೆ. ನಿಸ್ವಾರ್ಥಿಗಳನ್ನು ಸ್ಥಾನದಲ್ಲಿ ಕೂರಿಸಿ, ರಾಜ್ಯಭಾರ ಮಾಡಿದರೆ ಸಾಕು.

  ಪ್ರತಿಪಕ್ಷಗಳ ಧೋರಣೆಯೂ ಸರಿಯಿಲ್ಲ. ಯಾವುದೋ ದೇಶದಿಂದ ಬಂದವರಿಗೆ ಸೊಸೆ ಎನ್ನುತ್ತೀರ, ತಮಿಳುನಾಡಿನಲ್ಲಿ ಅಮ್ಮ ಎನ್ನುತ್ತೀರ, ಬಂಗಾಳದಲ್ಲಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದವರಿಗೆ ದೀದಿ ಎನ್ನುತ್ತೀರ. ಹಾಗಾದರೆ ಮೋದಿಯನ್ನೇಕೆ ಈ ಮಣ್ಣಿನ ಮಗ ಎನ್ನಬಾರದು? ಅವರಿಗೆ ಔದಾರ್ಯ ಬೇಕು. 70 ವರ್ಷದಲ್ಲಿ ಆಗದ ಕೆಲಸವನ್ನು ಮೋದಿ ಕೈನಿಂದ ಶನಿ ಮಾಡಿಸುತ್ತಿದ್ದಾನೆ. ಇನ್ನು ಸ್ವಂತ ಮನೆಗೆ ಬಂದ ಶನಿ ಬಿಡುತ್ತಾನೆಯೇ? ಅವನೇ ಧರ್ಮ-ಕರ್ವಧಿಪತಿ. ಕೊನೆಗೆ ಯಾರೂ ಮಾಡದಿದ್ದರೆ ಅವನೇ ಬೇರೆ ರೂಪದಲ್ಲಿ ಬಂದು ಮಾಡುತ್ತಾನೆ. ದೇಶಾದ್ಯಂತ ಸಿಎಎ ಬೇಡ ಎಂದು ಪ್ರಚಾರ ಮಾಡುತ್ತಿದ್ದಾರೆ. ಮನೆಮನೆಗೆ ಹೋಗುತ್ತಾರೆ, ದಾಖಲೆ ಕೇಳುತ್ತಾರೆ. ಅದರಲ್ಲಿ ತಪ್ಪೇನಿದೆ? ದೇಶದಲ್ಲಿ ಅಶಾಂತಿ ನೆಲೆಸಬಾರದು ಎಂಬುದು ಪ್ರತಿಪಕ್ಷಕ್ಕೂ, ಸರ್ಕಾರಕ್ಕೂ ಗೊತ್ತಿರಬೇಕು.

  (ನಿರೂಪಣೆ: ರಮೇಶ ದೊಡ್ಡಪುರ)

  ಪ್ರಧಾನಿಗೆ ಆತಂಕವಿದೆ

  ಪ್ರಧಾನಿಗೆ ಆತಂಕ ಇದ್ದೇ ಇದೆ. ಅವರ ಮೇಲೆ ದಾಳಿ ಮಾಡುವ ಪ್ರಯತ್ನಗಳು ನಡೆಯುವ ಸಾಧ್ಯತೆಯಿದೆ. ಯಾರೇ ಒಳಸಂಚು ಮಾಡಿ ಪ್ರಧಾನಿಗೆ ಅಪಾಯ ಮಾಡಿದರೆ ಈ ದೇಶಕ್ಕೂ ಬೆಲೆ ಇಲ್ಲದಂತಾಗುತ್ತದೆ. ಜನರು ಇದಕ್ಕೆ ಅವಕಾಶ ನೀಡಬಾರದು. ಪ್ರಧಾನಿ ಎಚ್ಚರವಹಿಸಬೇಕು. ಮಾರ್ಚ್​ನಿಂದ ಕುಜ ಮತ್ತು ಶನಿ ಮತ್ತೆ ಒಂದಾಗುತ್ತಾರೆ. ಆಗ ದೇಶದಲ್ಲಿ ಯುದ್ಧಭೀತಿ ಬರುತ್ತದೆ. ವಿರೋಧಿಗಳು ಭಾರತ ತಮಗೆ ಸಿಗಲಿದೆ ಎಂದು ಊಹಿಸಿದ್ದರೆ ಹಗಲುಗನಸು. ಕುಕ್ಕೆ ಸುಬ್ರಹ್ಮಣ್ಯ, ಗಾಣಗಾಪುರ, ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಮೋದಿ ದರ್ಶನ ನೀಡಬೇಕು. ಶನಿ ಕುಂಭ ರಾಶಿಗೆ, ಅಲ್ಲಿಂದ ಮೀನಕ್ಕೆ ಪ್ರಯಾಣಿಸುತ್ತಾನೆ. 2030ರ ವೇಳೆಗೆ ಭಾರತದಲ್ಲಿರುವ ಧರ್ಮದಿಂದ ಮಾತ್ರವೇ ಮನುಷ್ಯನ ಏಳಿಗೆ ಎಂದು ಸಾಬೀತಾಗುತ್ತದೆ.

  ಅತ್ಯಾಚಾರ ಹೆಚ್ಚಳ

  ಮುಂದಿನ ದಿನಗಳಲ್ಲಿ ಹೆಣ್ಣಿನ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚುವ ಸಾಧ್ಯತೆಯಿದೆ. ದ್ರೌಪದಿಯ ವಸ್ತ್ರಾಪಹರಣ ತಡೆಯದೆ ಸುಮ್ಮನಿದ್ದ ಭೀಷ್ಮರಿಗೆ ಶರಶಯ್ಯೆಯ ಶಿಕ್ಷೆ ನೀಡಿದ ದೇಶ ಇದು. ಅಂದ ಮೇಲೆ ತಪು್ಪ ಮಾಡಿದವರನ್ನು ಕ್ಷಮಿಸಿ ಎಂದರೆ ಹೇಗೆ? ಕಠಿಣ ಕಾನೂನು ಮಾಡಬೇಕು. ಇದಕ್ಕಾಗಿ ಆಯಾ ರಾಜ್ಯದಲ್ಲಿ ದ್ವಿಸದಸ್ಯ ಪೀಠ ಸ್ಥಾಪಿಸಬೇಕು. 30 ದಿನ ಅಥವಾ 48 ದಿನದಲ್ಲಿ ತೀರ್ಪು ಬರುವಂತಿರಬೇಕು.

  ಮಾ.20ರವರೆಗೆ ಬಿಎಸ್​ವೈಗೆ ಸಂಕಷ್ಟ

  ತತ್ಕಾಲದಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವುದಿಲ್ಲ. ಯಾರೂ ಅವರನ್ನು ಬದಲಾವಣೆ ಮಾಡಲು ಕೈ ಹಾಕಬಾರದು. ಅವರಿಗೆ ಇಷ್ಟ ಬಂದಂತೆ ಕೆಲಸ ಮಾಡಲಿ. ಒಂದು ತಂಡಕ್ಕೆ ಕ್ಯಾಪ್ಟನ್ ಮಾಡಿ, ಬೌಲಿಂಗ್ ಬ್ಯಾಟಿಂಗ್ ಬರದವರನ್ನು ನೀಡಿದರೆ ಹೇಗೆ? ಯಡಿಯೂರಪ್ಪ ಇಡೀ ಅವಧಿ ಮುಕ್ತಾಯಗೊಳಿಸಬೇಕು. ಮುಂದಿನ ಚುನಾವಣೆಯಲ್ಲಿ ಗೆದ್ದು, ಬಿಜೆಪಿಯನ್ನು ಮತ್ತೆ ತಂದಿದ್ದೀನಿ ಎಂದು ಹೇಳಿ ಬಿಟ್ಟುಕೊಡಬೇಕು. ಆಗ ಅವರು ಪರಾಕ್ರಮಿ ಎನ್ನಿಸಿಕೊಳ್ಳುತ್ತಾರೆ. ಆದರೆ, ಮಾರ್ಚ್ 20ರವರೆಗೆ ಅವರು ತಾಳ್ಮೆಯಿಂದ ಇರಬೇಕು. ಅಲ್ಲಿವರೆಗೆ ಕಿರಿಕಿರಿ ಇದ್ದೇ ಇರುತ್ತದೆ. ರಾಜ್ಯದಲ್ಲಿ ವರುಣ ಆರ್ಭಟಿಸುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ನೀರಿನಿಂದ ಅಪಾಯವಾಗಬಹುದು. ಪೌರತ್ವ ಕಾಯ್ದೆ ಕುರಿತು ತುಸು ಗಲಾಟೆಗಳು ಆಗಬಹುದು. ಸಿಎಂ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಕಷ್ಟವಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts