More

    ಹಾಪ್‌ಕಾಮ್ಸ್ ಗೆ ಲಾಭದಾಯಕವಾಗಲು ಎಲ್ಲ ರೀತಿಯ ನೆರವು: ಈಶ್ವರಪ್ಪ ಭರವಸೆ

    ಶಿವಮೊಗ್ಗ: ರೈತರ ಉತ್ಪನ್ನಗಳಿಗೆ ನೇರವಾಗಿ ಮಾರುಕಟ್ಟೆ ಒದಗಿಸುವ ಹಾಪ್‌ಕಾಮ್ಸ್(ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ನಿಯಮಿತ)ಗಳು ಲಾಭದಾಯಕವಾಗಲು ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದರು.
    ಕುವೆಂಪು ರಸ್ತೆಯಲ್ಲಿ ಬುಧವಾರ ತೋಟಗಾರಿಕೆ ನಿಗಮ ಮಂಡಳಿಗಳ ಸಹಾಯಧನ ಯೋಜನೆ ಅನುದಾನದಡಿ ನಿರ್ಮಿಸಿದ ಕಿಯೋಸ್ಕ್ ಹಣ್ಣು ತರಕಾರಿ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಹಾಪ್‌ಕಾಮ್ಸ್‌ಗಳು ಲಾಭದೆಡೆಗೆ ಮುನ್ನಡೆಯುತ್ತಿರುವುದು ಸಂತೋಷದ ವಿಚಾರ ಎಂದರು.
    ಕರೊನಾ ಸಂದರ್ಭದಲ್ಲಿ ಹಾಪ್‌ಕಾಮ್ಸ್ನಿಂದ ಜನರ ಮನೆಬಾಗಿಲಿಗೆ ತರಕಾರಿ ಪೂರೈಸಲು ಅನುದಾನದ ಕೊರತೆ ಇದ್ದಾಗ ಹಾಪ್‌ಕಾಮ್ಸ್ ನಿರ್ದೇಶಕರ ಬೇಡಿಕೆ ಮೇರೆಗೆ ತೋಟಗಾರಿಕೆ ಇಲಾಖೆಯಿಂದ ತುರ್ತು ಆರ್ಥಿಕ ನೆರವು ನೀಡಲಾಗಿತ್ತು. ಮಹಾನಗರ ಪಾಲಿಕೆಯಿಂದ ಪ್ರಮುಖ ಬಡಾವಣೆಗಳಲ್ಲಿ ನಿವೇಶನ ನೀಡಿ ಮಳಿಗೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಆ ಪ್ರಕಾರ ನೂತನವಾಗಿ 6 ಮಳಿಗೆಗಳನ್ನು ನಿರ್ಮಿಸಲಾಗಿದೆ. ಇನ್ನೂ 17 ಮಳಿಗೆಗಳ ನಿರ್ಮಾಣಕ್ಕೆ ಪಾಲಿಕೆಯಿಂದ ಜಾಗ ಗುರುತಿಸಲಾಗಿದೆ ಎಂದು ಹೇಳಿದರು.
    ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಎನ್.ಎಂ.ಸೋಮಶೇಖರಪ್ಪ ಮಾತನಾಡಿ, ಜಿಲ್ಲೆಯ ವಿವಿಧೆಡೆ ಶೀಘ್ರದಲ್ಲೇ ಮಳಿಗೆಗಳನ್ನು ಪ್ರಾರಂಭಿಸಲಾಗುವುದು. ಶಾಸಕ ಕೆ.ಬಿ.ಅಶೋಕ್‌ನಾಯ್ಕ್ ಅವರು 13 ಮಳಿಗೆಗಳ ನಿರ್ಮಾಣಕ್ಕೆ ಜಾಗ ತೋರಿಸಿದ್ದಾರೆ. ಭದ್ರಾವತಿಯಲ್ಲೂ 5 ಮಳಿಗೆ ಆರಂಭಿಸಲು ಜಾಗ ಗುರುತಿಸಲಾಗಿದೆ. ತೋಟಗಾರಿಕಾ ಬೆಳೆಗೆ ಪ್ರೋತ್ಸಾಹ ನೀಡಿ ರೈತರಿಗೆ ಉತ್ತಮ ಬೆಲೆ ಸಿಗುವ ರೀತಿಯಲ್ಲಿ ಹಾಗೂ ಗ್ರಾಹಕರಿಗೆ ತಾಜಾ ತರಕಾರಿ ಮತ್ತು ಹಣ್ಣು ಸಿಗುವಂತೆ ಅತ್ಯಾಧುನಿಕ ಮಳಿಗೆ ನಿರ್ಮಾಣ ಮಾಡಲಾಗುವುದು. ಆ ಮೂಲಕ ಸೇವೆ ನೀಡಲಾಗುವುದು ಎಂದರು.
    ಕೆಎಚ್‌ಎಫ್(ಕರ್ನಾಟಕ ಸಹಕಾರಿ ತೋಟಗಾರಿಕಾ ಮಾರಾಟ ಮಹಾಮಂಡಳ ನಿಯಮಿತ) ಅಧ್ಯಕ್ಷ ಬಿ.ಡಿ.ಭೂಕಾಂತ್, ವ್ಯವಸ್ಥಾಪಕ ನಿರ್ದೇಶಕಿ ಹೇಮಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಕಾಶ್, ಹಾಪ್‌ಕಾಮ್ಸ್ ಉಪಾಧ್ಯಕ್ಷ ಕೆ.ಜೆ.ನಾಗೇಶ್ ನಾಯ್ಕ್, ನಿರ್ದೇಶಕರಾದ ಪರಶುರಾಮ್, ವಿಜಯಕುಮಾರ್, ಉಂಬ್ಳೇಬೈಲ್ ಮೋಹನ್, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಕಾರ್ಪೋರೇಟರ್‌ಗಳಾದ ಎಸ್.ಎನ್.ಚನ್ನಬಸಪ್ಪ, ಸುವರ್ಣಾ ಶಂಕರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts