More

    ಕೃಷಿ ಮತ್ತು ತೋಟಗಾರಿಕೆ ವಿವಿಯಿಂದ ಬಿಎಸ್‌ವೈಗೆ ಗೌರವ ಡಾಕ್ಟರೇಟ್

    ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ಜು.21ರಂದು ಸಂಜೆ 4ಕ್ಕೆ ಇರುವಕ್ಕಿಯಲ್ಲಿ ನಡೆಯುವ 8ನೇ ಘಟಿಕೋತ್ಸವದಲ್ಲಿ ವಿವಿ ಕುಲಾಧಿಪತಿ ಥಾವರಚಂದ್ ಗೆಹಲೋತ್ ಅವರು ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.

    ಮಲೆನಾಡಲ್ಲಿ ಕೃಷಿ ಶಿಕ್ಷಣ, ಸಂಶೋಧನೆ, ವಿಸ್ತರಣೆಯ ಅಗತ್ಯ ಮನಗಂಡು ಕೃಷಿ ಮತ್ತು ತೋಟಗಾರಿಕೆ ವಿವಿ ಆರಂಭಕ್ಕೆ ಮುನ್ನುಡಿ ಬರೆದ ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿರುವುದು ಖುಷಿಯ ಸಂಗತಿಯಾಗಿದೆ ಎಂದು ಗುರುವಾರ ಕುಲಪತಿ ಡಾ. ಆರ್.ಸಿ.ಜಗದೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಬಿ.ಎಸ್.ಯಡಿಯೂರಪ್ಪ ಅವರು ನಾಡುಕಂಡ ಧೀಮಂತ ರಾಜಕಾರಣಿಯಾಗಿದ್ದಾರೆ. ರೈತ ನಾಯಕ ಎನಿಸಿಕೊಂಡ ಅವರು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ದೇಶಕ್ಕೆ ಮಾದರಿಯಾದವರು. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ವಿನೂತನ ಯೋಜನೆಗಳನ್ನು ಸಾಕಾರಗೊಳಿಸಿದ ಸಮಾಜಮುಖಿ ಚಿಂತಕರಾಗಿದ್ದು ವಿಶ್ವವಿದ್ಯಾಲಯ ಪ್ರಾರಂಭಗೊಂಡು 8 ವರ್ಷದ ಬಳಿಕ ಎರಡನೇ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವುದು ವಿಶೇಷವಾಗಿದೆ. ಈ ಬಾರಿ ಯಡಿಯೂರಪ್ಪ ಸೇರಿ ಮೂವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿತ್ತು. ಅದರಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡುವ ಬಗ್ಗೆ ಗುರುವಾರ ಆದೇಶ ಬಂದಿದೆ. ಶುಕ್ರವಾರ ಸಂಜೆ 4ಕ್ಕೆ ಕುಲಾಧಿಪತಿ ಥಾವರಚಂದ್ ಗೆಹಲೋತ್ ಅವರು ಘಟಿಕೋತ್ಸವಕ್ಕೆ ಚಾಲನೆ ನೀಡಲಿದ್ದು ಕೃಷಿ ಸಚಿವ, ಸಹ ಕುಲಾಧಿಪತಿಯೂ ಆದ ಎಸ್.ಚೆಲುವರಾಯಸ್ವಾಮಿ ಅವರು ಪಾಲ್ಗೊಳ್ಳುವರು. ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಘಟಿಕೋತ್ಸವ ಭಾಷಣ ಮಾಡುವರು ಎಂದು ಹೇಳಿದರು.
    409 ವಿದ್ಯಾರ್ಥಿಗಳು ಕೃಷಿ, ತೋಟಗಾರಿಕೆ, ಅರಣ್ಯ ವಿಭಾಗಗಳಲ್ಲಿ ಪದವಿ, 101 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಹಾಗೂ 23 ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಪಡೆದಿದ್ದು ಇದರಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ 8 ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಒಟ್ಟಾರೆ ಘಟಿಕೋತ್ಸವದಲ್ಲಿ 37 ಚಿನ್ನದ ಪದಕಗಳನ್ನು ನೀಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts