More

    ಜಿಲ್ಲೆಯ 11000 ರೈತರಿಗೆ 10 ಕೋಟಿ ರೂ.ಪರಿಹಾರ

    ಹೊನ್ನಾಳಿ: ಮಳೆಯಿಂದ ಬೆಳೆ ನಷ್ಟ ಅನುಭವಿಸಿದ ಜಿಲ್ಲೆಯ 11 ಸಾವಿರ ರೈತರ ಖಾತೆಗೆ 10 ಕೋಟಿ ರೂ.ಪರಿಹಾರ ಜಮಾ ಆಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ತಿಳಿಸಿದರು.

    ತಾಲೂಕು ಕಚೇರಿಗೆ ಮಂಗಳವಾರ ಭೇಟಿ ನೀಡಿ ಸಾರ್ವಜನಿಕರಿಂದ ಅವಹಾಲು ಸ್ವೀಕರಿಸಿ ಮಾತನಾಡಿ, ರಾಷ್ಟ್ರೀಯ ವಿಪ್ಪತ್ತು ನಿಧಿ, ರಾಜ್ಯ ಸರ್ಕಾರದಿಂದ ಒಂದು ಹೆಕ್ಟೇರ್‌ಗೆ 13,500 ರೂ.ಪರಿಹಾರ ಜಮಾ ಆಗಿದೆ. ಅತಿವೃಷ್ಟಿಯಿಂದ ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ ಅತಿ ಹೆಚ್ಚು ಬೆಳೆ ಹಾನಿಯಾಗಿದ್ದು, ಸಂಬಂಧಿತ ರೈತರಿಗೆ ಶೇ.75ರಷ್ಟು ಪರಿಹಾರ ಸಿಕ್ಕಿದೆ ಎಂದರು.

    ಇದೇ ವೇಳೆ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಹಳೇ ಗ್ರಾಮಠಾಣ ಜಾಗ ಹರಾಜು ಮಾಡುತ್ತಿದ್ದು, ಅದನ್ನು ತಡೆಯಬೇಕು. ಇದು ಸರ್ಕಾರದ ಆಸ್ತಿ ಎಂದು ಯಕ್ಕನಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದರು.

    ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಯಕ್ಕನಹಳ್ಳಿ ಪಿಡಿಒ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ಗ್ರಾಮದ ಎಲ್ಲ ಆಸ್ತಿ ಕಂದಾಯ ಇಲಾಖೆಗೆ ಸೇರಿರುತ್ತದೆ. ಅದನ್ನು ನೀವು ಹೇಗೆ ಹರಾಜು ಮಾಡುತ್ತೀರಿ? ಎನ್ನುತ್ತ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಕಚೇರಿಗೆ ಬರುವಂತೆ ಸೂಚಿಸಿದರು.

    ತಾಲೂಕಿನ ಎಸ್.ಮಲ್ಲಾಪುರ ಗ್ರಾಮದ ಜಮೀನುಗಳಲ್ಲಿ ಹಂದಿಗಳ ಹಾವಳಿ ಹೆಚ್ಚಿದೆ. ಈ ಬಗ್ಗೆ ಹಲವು ಬಾರಿ ಅರ್ಜಿ ಕೊಟ್ಟರೂ ಆರ್‌ಎಫ್‌ಒ ಈ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ. ನೀವಾದರೂ ಅರಣ್ಯ ಭೂಮಿಗೆ ಫೆನ್ಸಿಂಗ್ ಹಾಕಿಸಿ ಕಾಟ ತಡೆಯುವಂತೆ ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಆರ್‌ಎಫ್‌ಒ ಚೇತನ್‌ಕುಮಾರ್, ಫೆನ್ಸಿಂಗ್ ಹಾಕಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

    ಸಾಮಾಜಿಕ ಕಾರ್ಯಕರ್ತ ಕತ್ತಿಗೆ ನಾಗರಾಜ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ಕುಡಿಯುವ ನೀರು ಹಾಗೂ ಶೌಚಗೃಹ ಕಲ್ಪಿಸುವಂತೆ ಮನವಿ ಮಾಡಿದರು. ಉಪವಿಭಾಗಾಧಿಕಾರಿಗೆ ಸೂಚಿಸಿ ತಕ್ಷಣ ಸೌಕರ್ಯ ಒದಗಿಸಬೇಕೆಂದು ಡಿಸಿ ಸೂಚಿಸಿದರು. ಸಾರ್ವಜನಿಕರು ಸಲ್ಲಿಸಿದ 8 ಅರ್ಜಿಗಳಲ್ಲಿ 7 ಮನವಿಗಳನ್ನು ಸ್ಥಳದಲ್ಲೇ ಇತ್ಯರ್ಥಗೊಳಿಸಿದರು.

    ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಅಧಿಕಾರಿಗಳಾದ ಟಿಎಚ್‌ಒ ಡಾ.ಕೆಂಚಪ್ಪ, ಎಇಇಗಳಾದ ಅಜ್ಜಪ್ಪ, ರವೀಶ್ ಅರಾಧ್ಯ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ವೀರಭದ್ರಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಯ್ಯ, ಗ್ರೇಡ್ 2 ತಹಸೀಲ್ದಾರ್ ಸುರೇಶ್, ಉಪ ತಹಸೀಲ್ದಾರ್ ನೇತ್ರಾವತಿ, ರಾಜಸ್ವ ನಿರೀಕ್ಷಕರಾದ ದಿನೇಶ್, ಗುರುಪ್ರಸಾದ್, ರಮೇಶ್, ಜಯಪ್ರಕಾಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts