More

    ಅತಿವೃಷ್ಟಿ ತರಿಸಿದೆ ಈರುಳ್ಳಿ ಬೆಳೆಗಾರರಿಗೆ ಕಣ್ಣೀರು

    ಶ್ರೀನಿವಾಸ್ ಹೊನ್ನಾಳಿ: ಹದಿನೈದು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ನ್ಯಾಮತಿ ಹಾಗೂ ಹೊನ್ನಾಳಿ ಅವಳಿ ತಾಲೂಕುಗಳ ವ್ಯಾಪ್ತಿಯಲ್ಲಿ 367 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು, ಕೈಗೆ ಬಂದ ಫಸಲು ಕಳೆದುಕೊಂಡ ನೂರಾರು ರೈತರು ಸಂಕಷ್ಟಕ್ಕೀಡಾಗಿದ್ದಾರೆ.

    ಅರಬಗಟ್ಟೆ, ಆರುಂಡಿ, ಮಲ್ಲಿಗೇನಹಳ್ಳಿ, ಕೆಂಚಿಕೊಪ್ಪ, ಯರಗನಾಳ್ ಹಾಗೂ ಸುರಹೊನ್ನೆ ಗ್ರಾಮಗಳು ಸೇರಿದಂತೆ ಹಲವೆಡೆ ಈರುಳ್ಳಿ ಹೊಲಗಳಲ್ಲಿ ನೀರು ನಿಂತು ಗಡ್ಡೆಗಳು ಕೊಳೆತಿದೆ.

    ಪ್ರತಿಯೊಬ್ಬ ರೈತರು ಎಕರೆಗೆ ಕನಿಷ್ಠ 20 ಸಾವಿರ ಖರ್ಚು ಮಾಡಿದ್ದಾರೆ. ಜಮೀನು ಹಸನುಗೊಳಿಸಿ, ಈರುಳ್ಳಿ ಬೀಜ, ಗೊಬ್ಬರ, ಕಳೆ-ಕೀಟನಾಶಕಗಳನ್ನು ಖರೀದಿಸಿ, ತಿಂಗಳುಗಟ್ಟಲೇ ಶ್ರಮವಹಿಸಿದ್ದಾರೆ. ಇದೀಗ ಅತಿವೃಷ್ಟಿಯಿಂದಾಗಿ ಬೆಳೆದ ಫಸಲು ಕೈ ಸೇರುವ ಹಂತದಲ್ಲಿ ನೀರುಪಾಲಾಗಿದೆ. 25 ಲಕ್ಷ ರೂ. ಹೊಳೆಯಲ್ಲಿ ಕೊಚ್ಚಿ ಹೋಗಿದೆ.

    ಉಳಿದೆಡೆ ಸಹ ಜಮೀನಲ್ಲಿ ನೀರು ನಿಂತು ಕೊಳೆ ರೋಗದಿಂದ ಗಡ್ಡೆ ಹಾಳಾಗಿದೆ. ಗಾಳಿಯಿಂದ ಮಜ್ಜಿಗೆ ರೋಗ ಸಹ ಬಾಧಿಸುತ್ತಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆಂದು ಅರಬಗಟ್ಟೆ ಗ್ರಾಮದ ರೈತ ಕೆ.ಜಿ.ಬಸವರಾಜಪ್ಪ ಅಳಲು ತೋಡಿಕೊಂಡರು.

    ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಹಾಳಾಗಿರುವ ಈರುಳ್ಳಿ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಶಾಸಕ ಎಂ.ಪಿ. ರೇಣುಕಾಚಾರ್ಯ ಈರುಳ್ಳಿ ಹೊಲಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಸರ್ಕಾರದಿಂದ ಬರುವ ಪರಿಹಾರ ದೊರಕಿಸಿಕೊಡಬೇಕೆಂದು ಅರಬಗಟ್ಟೆ ಗ್ರಾಮದ ರೈತರಾದ ಚಿಲವಾಡಿ ದಾನೇಶ್, ಪಿ.ಜಿ.ಷಣ್ಮುಖಪ್ಪ, ಕೆ.ಮಹೇಶ್ವರಪ್ಪ, ಪೂಜಾರ ರಾಜಪ್ಪ, ಬಡದೊಡ್ಡರ ಬಸಪ್ಪ ಮತ್ತಿತರರು ಒತ್ತಾಯಿಸಿದರು.

    ಸರ್ಕಾರದ ಆದೇಶದಂತೆ ಅತಿವೃಷ್ಟಿಯಿಂದ ಹಾನಿಗೀಡಾದ ಈರುಳ್ಳಿ ಜಮೀನುಗಳಿಗೆ ನ್ಯಾಮತಿ ತಹಸೀಲ್ದಾರ್ ತನುಜಾ ಸವದತ್ತಿ ಹಾಗೂ ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ಶಂಕರ್ ಭೇಟಿ ನೀಡಿ ಪರಿಶೀಲಿಸಿ, ಸರ್ಕಾರಕ್ಕೆ ವರದಿ ನೀಡಿದ್ದಾರೆ.

    ಅವಳಿ ತಾಲೂಕುಗಳಲ್ಲಿ ಅತಿವೃಷ್ಟಿಯಿಂದ 367 ಹೆಕ್ಟೇರ್‌ನಲ್ಲಿ ಈರಳ್ಳಿ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಈ ಬಗ್ಗೆ ತಾಲೂಕು ಆಡಳಿತ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ, ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದೇವೆ. ನಷ್ಟಕ್ಕೊಳಗಾದ ರೈತರ ದಾಖಲಾತಿಗಳನ್ನು ಪಡೆದು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಶೀಘ್ರದಲ್ಲೇ ರೈತರಿಗೆ ಪರಿಹಾರ ಸಿಗಲಿದೆ.
    > ಶಂಕರ್ ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ಹೊನ್ನಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts