More

    ಊರು ಬಿಟ್ಟರೂ ಬೆಂಬಿಡದ ಬಡತನ

    ಬೆಳಗಾವಿ/ರಾಮದುರ್ಗ: ಕಳೆದ ವರ್ಷ ಉಂಟಾದ ಪ್ರವಾಹದಿಂದ ಅತಂತ್ರರಾಗಿ ರಾಮದುರ್ಗ ಪಟ್ಟಣಕ್ಕೆ ಬಂದು ನೆಲೆಸಿದ್ದ ನೇಕಾರ ದಂಪತಿ, ಈಗ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅತ್ತ ಲಾಕ್‌ಡೌನ್‌ನಿಂದ ಕೆಲಸವೂ ಇಲ್ಲದೆ, ಇತ್ತ ತಿಂಗಳ ಹಿಂದಷ್ಟೇ ಜನಿಸಿದ ಹೆಣ್ಣು ಮಗುವಿನ ಆರೈಕೆ ಮಾಡಲಾಗದೆ ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ.

    ನಿಂಗಪ್ಪ ಮತ್ತು ಪ್ರೇಮಾ ಮಾಡಬಾಳ ದಂಪತಿ ಇದೀಗ ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ‘ನಾನು ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಗ್ರಾಮದವನು. ಅಲ್ಲಿನ ಬಾಡಿಗೆ ಮನೆಯಲ್ಲಿ ವಿದ್ಯುತ್ ಮಗ್ಗ ಹಾಕಿಕೊಂಡು, ಸೀರೆ ನೇಯ್ದು ಬದುಕು ಸಾಗಿಸುತ್ತಿದ್ದೆ. ಪ್ರವಾಹದಿಂದ ವಾಸವಿದ್ದ ಮನೆಯೂ ಮುಳುಗಿತು. ಪರಿಚಯಸ್ಥರೊಬ್ಬರ ಮೂಲಕ ರಾಮದುರ್ಗದತ್ತ ಮುಖ ಮಾಡಿದೆ. ನನ್ನ ಕಷ್ಟ ನೋಡಿ ಇಲ್ಲಿನ ಗುರುನಾಥ ಅಕ್ಷರದ ಎಂಬುವರು ಬಾಡಿಗೆ ಪಡೆಯದೆ ವಾಸಕ್ಕೊಂದು ಕೊಠಡಿ ನೀಡಿದ್ದಾರೆ. ಅದರಲ್ಲಿ ವಿದ್ಯುತ್ ಮಗ್ಗ ಹಾಕಿಕೊಂಡು ಬದುಕಿನ ಬಂಡಿ ದೂಡುತ್ತಿದ್ದೆ. ಆದರೆ, ಈಗ ದುಡಿಮೆಯೂ ನಿಂತಿದೆ. ಆದಾಯವಿಲ್ಲದ್ದರಿಂದ ಕುಟುಂಬ ನಡೆಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದು ನಿಂಗಪ್ಪ ಅಳಲು ತೋಡಿಕೊಂಡರು.

    ಮಗ್ಗವೊಂದನ್ನು ಬಿಟ್ಟರೆ, ಬೇರ‌್ಯಾವ ಆಸ್ತಿ ಇಲ್ಲ. ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ನಮಗೆ ನೆರೆ-ಹೊರೆಯ ಜನರೇ ಆಹಾರ ಸಾಮಗ್ರಿ ನೀಡಿದ್ದಾರೆ. ಆದರೆ, ಲಾಕ್‌ಡೌನ್ ತೆರವಾಗದ್ದರಿಂದ ಆತಂಕ ಹೆಚ್ಚುತ್ತಿದೆ. ಜಿಲ್ಲಾಡಳಿತ ಅಥವಾ ಯಾವುದೇ ಸಂಘ-ಸಂಸ್ಥೆ ಈ ಸಂದರ್ಭದಲ್ಲಿ ನೆರವು ನೀಡಿದರೆ ಕೃತಜ್ಞರಾಗಿರುತ್ತೇವೆ ಎನ್ನುತ್ತಾರೆ . ನಿಂಗಪ್ಪ ಮಾಡಬಾಳ (ಮೊ: 9916135318) ಸಂಪರ್ಕಿಸಬಹುದು.

    ನಾನೇ ಖುದ್ದಾಗಿ ನಿಂಗಪ್ಪ ಮಾಡಬಾಳ ಅವರ ಮನೆಗೆ ಭೇಟಿ ನೀಡಿ, ಸಂಕಷ್ಟ ಆಲಿಸುತ್ತೇನೆ. ದಾನಿಗಳ ನೆರವಿನಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಿಸುತ್ತೇನೆ. ತಾಲೂಕು ಆಡಳಿತದಿಂದ ಸಾಧ್ಯವಿರುವ ಸಹಾಯ ಮಾಡುತ್ತೇನೆ.
    | ಗಿರೀಶ ಸ್ವಾದಿ ತಹಸೀಲ್ದಾರ್ ರಾಮದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts