More

    ಗೃಹರಕ್ಷಕ ಸಿಬ್ಬಂದಿ ಕಂಗಾಲು: 5-6 ತಿಂಗಳಿಂದ ಕೆಲಸವಿಲ್ಲ 

    ರಾಮನಗರ: ಪೊಲೀಸ್ ಸೇರಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 200ಕ್ಕೂ ಹೆಚ್ಚು ಗೃಹರಕ್ಷಕ ಸಿಬ್ಬಂದಿ ಕಳೆದ 5-6 ತಿಂಗಳಿಂದಲೂ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.

    ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಸಿಬ್ಬಂದಿ ಕೊರತೆ ನೀಗಿಸುವಲ್ಲಿ ಹಲವು ವರ್ಷಗಳಿಂದಲೂ ಗೃಹರಕ್ಷಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ಆದರೆ, ಕರೊನಾ ಮಾರಿ ಎಲ್ಲ ರಂಗಗಳ ಮೇಲೂ ಹೊಡೆತ ನೀಡಿದಂತೆ ಗೃಹ ರಕ್ಷಕ ಸಿಬ್ಬಂದಿ ಮೇಲೂ ಪ್ರಹಾರ ಮಾಡಿದ್ದು, ಇತ್ತ ಕೆಲಸವೂ ಇಲ್ಲದೆ ಬದುಕಿಗೆ ಆಧಾರವೂ ಇಲ್ಲದೆ ಪರಿತಪಿಸುವಂತೆ ಆಗಿದೆ.

    ಬೇಡವೆಂದ ಇಲಾಖೆಗಳು: ಜಿಲ್ಲೆಯಲ್ಲಿ ಒಟ್ಟು 529 ಸಿಬ್ಬಂದಿ ಜಿಲ್ಲಾ ಪೊಲೀಸ್, ಬೆಂಗಳೂರು ಸಿಟಿ ಪೊಲೀಸ್, ಜಿಲ್ಲಾಧಿಕಾರಿ ಕಚೇರಿ, ಪ್ರವಾಸೋದ್ಯಮ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅಗ್ನಿಶಾಮಕ ದಳ ಹೀಗೆ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಕರೊನಾದಿಂದಾಗಿ ಬಹುತೇಕ ಇಲಾಖೆಗಳು ಗೃಹರಕ್ಷಕರ ಸೇವೆಯನ್ನು ಬೇಡ ಎಂದು ವಾಪಸ್ ಕಳುಹಿಸಿದ್ದರೆ ಮತ್ತೆ ಕೆಲವು ಇಲಾಖೆಗಳು ಸಂಖ್ಯೆ ಕಡಿತಗೊಳಿಸಿವೆ.

    ಜಿಲ್ಲಾ ಪೊಲೀಸ್​ಗೆ ಒಟ್ಟು 189 ಸಿಬ್ಬಂದಿ ನಿಯೋಜಿಸಲಾಗಿತ್ತು, ಇವರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕರೊನಾ ಆರಂಭಕ್ಕೂ ಮುನ್ನ ಇವರಿಗೆ 22 ಸಾವಿರ ರೂ. ಮಾಸಿಕ ವೇತನ ನೀಡಲಾಗುತ್ತಿತ್ತು. ಆದರೆ, ಕರೊನಾ ಆಘಾತಕ್ಕೆ ಆರ್ಥಿಕವಾಗಿ ಪೊಲೀಸ್ ಇಲಾಖೆಗೂ ಸಂಕಷ್ಟ ಎದುರಾದ ಕಾರಣ ರಾಮನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 89 ಮಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಯಿತು. ಇನ್ನು ಬೆಂಗಳೂರು ಪೊಲೀಸ್ ವ್ಯಾಪ್ತಿಯಲ್ಲಿದ್ದ 123 ಮಂದಿಯಲ್ಲಿ 33 ಮಂದಿಯನ್ನು ಸೇವೆಯಿಂದ ಮುಕ್ತಿಗೊಳಿಸಲಾಗಿದೆ. ಅದೇ ರೀತಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಸೇವೆ ನಿರಾಕರಿಸಲಾಗಿದೆ.

    ಬದುಕು ಅತಂತ್ರ

    ಜಿಲ್ಲೆಯಲ್ಲಿ 529 ಮಂದಿಯಲ್ಲಿ 200ಕ್ಕೂ ಹೆಚ್ಚು ಮಂದಿಗೆ ಕೆಲಸ ಇಲ್ಲದಂತಾಗಿದೆ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರಿಗಂತೂ ಬೇರೆ ಕೆಲಸಗಳಿಗೆ ಹೋಗಲಾರದ ಸ್ಥಿತಿ ಇದ್ದು, ಸರ್ಕಾರ ವಾಪಸ್ ಸೇವೆಗೆ ಕರೆಯುವುದೇನೋ ಎಂದು ಕಾಯುತ್ತ ಕುಳಿತಿದ್ದಾರೆ. ಮಹಿಳಾ ಗೃಹ ರಕ್ಷಕ ಸಿಬ್ಬಂದಿ ಮನೆಯ ಜವಾಬ್ದಾರಿಯನ್ನು ತಾವೇ ನಿಭಾಯಿಸುತ್ತಿದ್ದುದರಿಂದ ಇವರ ಕಷ್ಟವಂತೂ ಹೇಳ ತೀರದಾಗಿದೆ.

    ಕೆಲವರಿಗೆ ರೊಟೇಷನ್

    ಎಲ್ಲರಿಗೂ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕಳೆದ 5-6 ತಿಂಗಳಿಂದಲೂ ಕೆಲಸ ಇಲ್ಲದೆ ಮನೆಯಲ್ಲಿದ್ದ ಗೃಹ ರಕ್ಷಕ ಸಿಬ್ಬಂದಿಯಲ್ಲಿ 90 ಮಂದಿಯನ್ನು ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ನಿಯೋಜನೆ ಮಾಡಲಾಗಿದೆ. ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಈಗ ರಜೆ ನೀಡಲಾಗಿದ್ದು, ಕೆಲಸ ಇಲ್ಲದೆ ಇದ್ದವರಿಗೆ ಕೆಲಸ ನೀಡಲಾಗಿದೆ. ರೋಟೇಷನ್ ಮಾದರಿಯಲ್ಲಿ ಎಲ್ಲರಿಗೂ ಕೆಲಸ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ ಎನ್ನುತ್ತಾರೆ ಗೃಹ ರಕ್ಷಕ ದಳದ ಅಧಿಕಾರಿಗಳು.

    ಈ ಕೆಲಸವೇ ಆಧಾರ ವಾಗಿತ್ತು. ಕಳೆದ 4-5 ತಿಂಗಳಿಂದ ಕೆಲಸ ಇಲ್ಲದೆ ತೊಂದರೆ ಆಗಿದೆ. ಸರ್ಕಾರ ಗೃಹ ರಕ್ಷಕ ಸಿಬ್ಬಂದಿ ನೆರವಿಗೆ ಧಾವಿಸಬೇಕು, ನಮಗೆ ಹಿಂದಿನಂತೆ ಕೆಲಸ ಕೊಡಬೇಕು.

    | ಹೆಸರು ಹೇಳಲಿಚ್ಚಿಸದ ಸಿಬ್ಬಂದಿ ಗೃಹರಕ್ಷಕ ದಳ

    ಇರುವ ಸಿಬ್ಬಂದಿಗೆ ಕೆಲಸ ಕೊಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರ ನಿರ್ಧಾರವನ್ನು ನಾವು ಪಾಲಿಸಬೇಕು. ಇದರ ಹೊರತಾಗಿ ಹೆಚ್ಚಿಗೆ ಏನನ್ನೂ ಹೇಳಲಾಗದು.

    | ಹೆಸರು ಹೇಳಲಿಚ್ಚಿಸದ ಅಧಿಕಾರಿ ಗೃಹರಕ್ಷಕ ದಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts