More

    ಮನೆ ಇದ್ದರೂ ಬರುವ ಜನರಿಗಿಲ್ಲ ಮರ್ಯಾದೆ !

    ಕುಷ್ಟಗಿ: ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಶೌಚಗೃಹ ನಿರ್ಮಿಸಲಾಗಿದೆ. ಶೌಚಗೃಹಕ್ಕೆ ‘ಮರ್ಯಾದೆ ಮನೆ’ ಎಂಬ ಹೆಸರಿಟ್ಟು ‘ಚಿನ್ನಕ್ಕಿಂತ ಅನ್ನ ಲೇಸು, ಅನ್ನಕ್ಕಿಂತ ಶೌಚಗೃಹ ಲೇಸು’ ಎನ್ನುವ ಸಾಲುಗಳನ್ನು ಬರೆಯಲಾಗಿದೆ. ಹೀಗೆ ಬರೆಯಲಾಗಿರುವ ಕಟ್ಟಡದ ಸುತ್ತ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ !

    ಪಟ್ಟಣದಲ್ಲಿರುವ ತಾಲೂಕು ದಂಡಾಧಿಕಾರಿಗಳ ಕಚೇರಿ(ಮಿನಿ ವಿಧಾನಸೌಧ) ಆವರಣದಲ್ಲಿ ಪ್ರಮುಖವಾಗಿ ಸಾರ್ವಜನಿಕರಿಗೆ ಮೂತ್ರಗೃಹ, ಶೌಚಗೃಹ ಹಾಗೂ ಕುಡಿವ ನೀರಿನ ವ್ಯವಸ್ಥೆ ಇಲ್ಲವಾಗಿದೆ.

    ಇದನ್ನೂ ಓದಿ: ಮಾರುಕಟ್ಟೆಗಿಂತ ಕಡೆ ಮಿನಿ ವಿಧಾನಸೌಧ

    ಕಚೇರಿ ಆವರಣದಲ್ಲಿ ಪುರಸಭೆ ಅನುದಾನದಲ್ಲಿ ನಿರ್ಮಿಸಲಾಗಿರುವ ಶೌಚಗೃಹ ಕಟ್ಟಡ ಬೀಗ ಹಾಕಿದ ಸ್ಥಿತಿಯಲ್ಲಿದ್ದು, ಕಚೇರಿಗೆ ಬರುವ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

    ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕಾಗಿ ಸರ್ಕಾರ ಸ್ವಚ್ಛಭಾರತ ಅಭಿಯಾನದಂತಹ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸುತ್ತಿದೆ. ಬಯಲುಬಹಿರ್ದೆಸೆ ಮುಕ್ತವನ್ನಾಗಿಸಲು ಕಾಲಕಾಲಕ್ಕೆ ಆದೇಶ ಹೊರಡಿಸಲಾಗುತ್ತಿದೆ. ಈ ಸಂಬಂಧ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿ ಹೇಳುವ ಕಾರ್ಯ ಮಾಡುತ್ತಿದ್ದಾರಾದರೂ ಅಂತಹ ಅಧಿಕಾರಿಗಳಿಗೆ ಕಚೇರಿ ಆವರಣದಲ್ಲಿ ಶೌಚಗೃಹಗಳಿಲ್ಲದಿರುವುದು ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತೆ ಮಾಡಿದೆ.

    ಪಟ್ಟಣದ ಮಿನಿ ವಿಧಾನ ಸೌಧಕ್ಕೆ ವಿವಿಧ ಕೆಲಸಕ್ಕೆಂದು ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಿಂದ ನಿತ್ಯ ನೂರಾರು ಜನ ಬಂದು ಹೋಗುತ್ತಾರೆ. ಅಧಿಕಾರಿಗಳನ್ನು ಭೇಟಿ ಮಾಡಿ ಕೆಲಸ ಆಗುವವರೆಗೆ ಕಾಯುವ ಜನರಿಗೆ ಕುಡಿವ ನೀರಿನ ಸೌಕರ್ಯ ಇಲ್ಲವಾಗಿದೆ. 2014-15ನೇ ಸಾಲಿನ ಹೈ.ಕ.ಪ್ರದೇಶಾಭಿವೃದ್ಧಿ ಯೋಜನೆಯಡಿ ಕುಡಿವ ನೀರಿನ ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ದೊಡ್ಡನಗೌಡ ಪಾಟೀಲ್ ಶಾಸಕರಿದ್ದಾಗ ನಿರ್ಮಿಸಿರುವ ಘಟಕಕ್ಕೆ ಉದ್ಘಾಟನೆ ಭಾಗ್ಯ ಈಗಲೂ ಕೂಡಿಬಂದಿಲ್ಲ. ಘಟಕದ ನಿರುಪಯುಕ್ತ ಕಟ್ಟಡ ಪಾಳು ಬೀಳುತ್ತಿದ್ದರೂ ಉದ್ಘಾಟಿಸಿಲ್ಲ.

    ಕಚೇರಿಗೆ ಬರುವ ಸಾರ್ವಜನಿಕರು ಮೂತ್ರ ವಿಸರ್ಜನೆಗೆ ಕಟ್ಟಡಗಳ ಗೋಡೆಗಳ ಮೊರೆ ಹೋಗುತ್ತಿದ್ದಾರೆ. 2017-18ನೇ ಸಾಲಿನ ಪುರಸಭೆಯ 14ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಲಾಗಿದೆಯಾದರೂ ನಿರ್ಮಿಸಿ ಬಹುದಿನಗಳಾದರೂ ಆರಂಭಿಸಿಲ್ಲ. ಬೀಗ ಹಾಕಿದ ಶೌಚಗೃಹದ ಪಕ್ಕದಲ್ಲಿಯೇ ಪುರುಷರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

    ಮಲಿನ ವಾತಾವರಣ

    ಅಲ್ಲದೆ ಶುದ್ಧೀಕರಣ ಘಟಕದ ಸುತ್ತಲೂ ಸಹ ಮಲಿನ ವಾತಾವರಣ ಸೃಷ್ಟಿಯಾಗಿದೆ. ಪಟ್ಟಣದಲ್ಲಿರುವ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಶೌಚ-ಮೂತ್ರಗೃಹ ಸಮಸ್ಯೆ ಎದ್ದು ಕಾಣುತ್ತಿದೆ. ಇದರಿಂದ ಕೆಲ ಇಲಾಖೆ ಕಚೇರಿಗಳಲ್ಲಿ ಅಧಿಕಾರಿಗಳು ಸೇರಿ ಬರುವ ಸಾರ್ವಜನಿಕರಿಂದ ಕಚೇರಿ ಗೋಡೆಗಳ ಸುತ್ತ ಮಲಿನ ವಾತಾವರಣ ಸೃಷ್ಟಿಯಾಗುತ್ತಿದೆ. ಕೆಲ ಕಚೇರಿಗಳಲ್ಲಿ ಶೌಚಗೃಹ ಇದ್ದರೂ ನಿರ್ವಹಣೆ ಇಲ್ಲದೆ ಇದ್ದೂ ಇಲ್ಲದಂತಿರುವುದು ಮಹಿಳಾ ಸಿಬ್ಬಂದಿಯನ್ನು ಮುಜುಗರಕ್ಕೀಡು ಮಾಡುತ್ತಿದೆ.

    ತಹಸಿಲ್ ಕಚೇರಿಗೆ ಬೇರೆ ಕಚೇರಿಗಳಿಂತ ಹೆಚ್ಚು ಜನ ಬಂದು ಹೋಗುತ್ತಾರೆ. ಬರುವ ಜನರಿಗೆ ಮೂಲ ಸೌಕರ್ಯ ಕಲ್ಪಿಸುವ ಕಾರ್ಯವನ್ನು ತಾಲೂಕು ಆಡಳಿತ ಮಾಡಬೇಕಿದೆ. ಕುಡಿವ ನೀರು ಹಾಗೂ ಶೌಚಗೃಹದ ವ್ಯವಸ್ಥೆಯಾದರೂ ಆಗಬೇಕಿದೆ.


    ಬಸವರಾಜ ಅರಳೆಲೆಮಠ


    ಕುಷ್ಟಗಿ ನಿವಾಸಿ.

    ತಹಸಿಲ್ ಕಚೇರಿಯ ಆವರಣದಲ್ಲಿ ಪುರಸಭೆಯ 14ನೇ ಹಣಕಾಸು ಯೋಜನೆಯ ಅನುದಾನದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಗೃಹಕ್ಕೆ ನೀರು ಪೂರೈಕೆ ಮಾಡುವುದು ಬಾಕಿ ಇರುವುದರಿಂದ ಇನ್ನೂ ಆರಂಭಿಸಿಲ್ಲ. ಹೈ.ಕ.ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿರುವ ಕುಡಿವ ನೀರಿನ ಶುದ್ಧೀಕರಣ ಘಟಕವನ್ನು ಪುರಸಭೆಗೆ ಹಸ್ತಾಂತರಿಸಿಲ್ಲ.


    ಜಿ.ಕೆ.ಹಿರೇಮಠ

    ಪುರಸಭೆ ಅಧ್ಯಕ್ಷ, ಕುಷ್ಟಗಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts