More

    ಲಿಂಬೆರಸ, ಕೊಬ್ಬರಿ ಎಣ್ಣೆ, ಸ್ಟೀಮ್, ಬಿಸಿ ನೀರು: ಕರೊನಾಗೆ ಮನೆಮದ್ದು- ಡಾ. ವಿಜಯ ಸಂಕೇಶ್ವರ ಸಲಹೆ

    ಕರೊನಾ ಎರಡನೇ ಹಂತದ ಅಲೆ ಅಪ್ಪಳಿಸಿದ ಬಳಿಕ ಹಲವು ಜನರ ಜೀವ ಬಲಿಪಡೆದಿರುವ ಆಮ್ಲಜನಕ(ಆಕ್ಸಿಜನ್)ಸಮಸ್ಯೆ ಪರಿಹಾರಕ್ಕೆ ಲಿಂಬೆರಸ ರಾಮಬಾಣ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಹೇಳಿದರು. ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಮೂಗಿನಲ್ಲಿ ನಾಲ್ಕು ಹನಿ ಲಿಂಬೆರಸ ಹಾಕಿಕೊಂಡರೆ ಕೂಡಲೇ ಆಕ್ಸಿಜನ್ ಸಮಸ್ಯೆ ಕಡಿಮೆಯಾಗುತ್ತದೆ ಎಂಬ ಸಂದೇಶ ನನಗೆ ಬಂದಿತ್ತು. ನನಗೆ ಕರೊನಾ ಇಲ್ಲದಿದ್ದರೂ ಮೊದಲು ಪ್ರಯೋಗಿಸಿ ನೋಡಿದೆ. ಕರೊನಾದಿಂದ ಬಳಲುತ್ತಿದ್ದ ಪರಿಚಯಸ್ಥ 200ಕ್ಕೂ ಅಧಿಕ ಜನರ ಮೇಲೆ ಪ್ರಯೋಗ ಮಾಡಿದ್ದೇನೆ. ಇದರಿಂದಾಗಿ ಸಕಾರಾತ್ಮಕ- ಅದ್ಭುತ ಫಲಿತಾಂಶ ಬಂದಿದೆ. ಲಿಂಬೆರಸ ಹಾಕಿಕೊಂಡ ಅರ್ಧಗಂಟೆಯೊಳಗೆ ಶ್ವಾಸಕೋಶದಿಂದ ಕಫ, ಜಿಗುಟು ಹೊರಗೆ ಬಂದು ಚೇತರಿಕೆ ಕಂಡಿದ್ದಾರೆ. ಮುಖಕ್ಕೆ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಬೇಕು. ಮೂಗಿನಲ್ಲಿ ಕೊಬ್ಬರಿ ಎಣ್ಣೆ ಸವರಿಕೊಳ್ಳಬೇಕು. ಇದರಿಂದ ಯಾವುದೇ ವೈರಸ್ ತಗುಲುವುದಿಲ್ಲ’ ಎಂದರು.

    ಕಳೆದ ವರ್ಷಕ್ಕಿಂತ ಈ ಬಾರಿ 4 ಪಟ್ಟು ಹೆಚ್ಚು ದೇಶಾದ್ಯಂತ ಓಡಾಡಿದ್ದೇನೆ. ನಿತ್ಯ 100ರಿಂದ 500 ಜನರನ್ನು ಭೇಟಿ ಮಾಡುತ್ತಿರುತ್ತೇನೆ. ಆದರೂ ಯಾವುದೇ ವ್ಯತಿರಿಕ್ತ ಪರಿಣಾಮ ಆಗಿಲ್ಲ. ಹಾಗಾಗಿ, ಎಲ್ಲರೂ ಈ ಮನೆಮದ್ದು ಬಳಸಿ.

    | ಡಾ.ವಿಜಯ ಸಂಕೇಶ್ವರ ಚೇರ್ಮನ್, ವಿಆರ್​ಎಲ್ ಸಮೂಹ ಸಂಸ್ಥೆಗಳು

    ಹುಬ್ಬಳ್ಳಿ: ಕರೊನಾ ವೈರಸ್ ಜಗತ್ತಿನ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಈ ಸೋಂಕಿನ ಎರಡನೇ ಅಲೆಯಲ್ಲಿ ಆಕ್ಸಿಜನ್ (ಆಮ್ಲಜನಕ) ಸಮಸ್ಯೆಯಿಂದ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆಕ್ಸಿಜನ್ ಸಮಸ್ಯೆ ನಿವಾರಿಸುವಲ್ಲಿ ಲಿಂಬೆ ರಸವು ರಾಮಬಾಣದಂತೆ ಕೆಲಸ ಮಾಡುತ್ತದೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ತಿಳಿಸಿದರು.

    ಭಾನುವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಗಿನ ಎರಡೂ ಬದಿಗೆ ತಲಾ ನಾಲ್ಕು ಹನಿ ಲಿಂಬೆರಸ ಹಾಕಿಕೊಂಡರೆ ಕೂಡಲೇ ಆಕ್ಸಿಜನ್ ಸಮಸ್ಯೆ ಕಡಿಮೆಯಾಗುತ್ತದೆ ಎಂಬ ಸಂದೇಶ ನನಗೆ ಬಂದಿತ್ತು. ನನಗೆ ಕರೊನಾ ಇಲ್ಲದಿದ್ದರೂ ಮೊದಲು ಪ್ರಯೋಗಿಸಿ ನೋಡಿದೆ. ಕರೊನಾದಿಂದ ಬಳಲುತ್ತಿದ್ದ ಪರಿಚಯಸ್ಥ 200ಕ್ಕೂ ಅಧಿಕ ಜನರ ಮೇಲೆ ಪ್ರಯೋಗ ಮಾಡಿದ್ದೇನೆ. ಇದರಿಂದಾಗಿ ಸಕಾರಾತ್ಮಕ- ಅದ್ಭುತ ಫಲಿತಾಂಶ ಬಂದಿದೆ ಎಂದರು.

    ನಾಲ್ಕೈದು ದಿನಗಳ ಹಿಂದೆ ನನ್ನ ಮಿತ್ರ ಗುರು ಶಾಸ್ತ್ರೀಮಠ ಕುಟುಂಬದ 6 ಜನರಿಗೆ ಕರೊನಾ ಪಾಸಿಟಿವ್ ಆಗಿತ್ತು. ಬೆಡ್ ಇಲ್ಲದ ಕಾರಣ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಹೇಳಿದಂತೆ ಚಿಕಿತ್ಸೆ ಮುಂದುವರಿಸಿ ಎಂದು ತಿಳಿಸಿದೆ. ಅದರ ಜತೆಗೆ ಮೂಗಿನ ಎರಡೂ ಬದಿಗೆ ತಲಾ ನಾಲ್ಕು ಹನಿ ಲಿಂಬೆರಸ ಹಾಕಿಕೊಳ್ಳಿ ಎಂದೂ ಹೇಳಿದ್ದೆ. ಅದರಂತೆ ಎಲ್ಲರೂ ಲಿಂಬೆರಸ ಹಾಕಿಕೊಂಡರು. ಅರ್ಧ ಗಂಟೆಯೊಳಗೆ ಒಬ್ಬೊಬ್ಬರ ಲಂಗ್ಸ್​ನಿಂದ (ಶ್ವಾಸಕೋಶದಿಂದ) ಕಫ, ಜಿಗುಟು ಹೊರಗೆ ಬಂದು ಗುಣಮುಖರಾದರು ಎಂದು ತಿಳಿಸಿದರು.

    ಕರೊನಾದಿಂದ ನಮ್ಮ ಕಂಪನಿಯ ಕೆಲಸ ಏರುಪೇರಾಗಿವೆ. ನಮ್ಮ ಕಂಪನಿಯ ಉನ್ನತ ಹುದ್ದೆಯಲ್ಲಿರುವ ಒಬ್ಬರು ಕರೆ ಮಾಡಿ ಆಕ್ಸಿಜನ್ ಸಿಗುತ್ತಿಲ್ಲ ಎಂದು ಹೇಳಿದರು. ನನ್ನ ಸಲಹೆ ಮೇರೆಗೆ 6 ಹನಿ ಲಿಂಬೆರಸ ಹಾಕಿಕೊಂಡರು. 85 ಇದ್ದ ಆಕ್ಸಿಜನ್ ಲೆವೆಲ್, ಅರ್ಧ ಗಂಟೆಯಲ್ಲಿ 96ಕ್ಕೆ ಬಂತು. ನಮ್ಮ ಕಂಪನಿಯ ದೆಹಲಿಯ ಸೋನಿಯಾ ದತ್ ಎಂಬುವರು ಆಕ್ಸಿಜನ್ ತೊಂದರೆಯಿಂದ ಬಳಲುತ್ತಿದ್ದರು. ಲಿಂಬೆರಸ ಬಳಸಿ ನೋಡಿ ಎಂದು ಹೇಳಿದ್ದೆ. 83ಕ್ಕೆ ಇಳಿದಿದ್ದ ಆಕ್ಸಿಜನ್ ಅರ್ಧ ಗಂಟೆಯಲ್ಲಿ 96ಕ್ಕೆ ಏರಿತ್ತು ಎಂದು ಉದಾಹರಣೆ ಸಮೇತ ವಿವರಿಸಿದರು.

    ವೈದ್ಯರು ಹೇಳಿದಂತೆ ಕರೊನಾಗೆ ಔಷಧ, ಆಹಾರ ಕ್ರಮ, ಚಿಕಿತ್ಸೆ ಮಾಡಬೇಕು. ಜತೆಗೆ, ಲಿಂಬೆರಸವನ್ನು ಮೂಗಿನಲ್ಲಿ ಹಾಕಿಕೊಂಡರೆ, ಆಕ್ಸಿಜನ್ ಕೊರತೆಯಿಂದ ಸಾವಿಗೀಡಾಗುವುದನ್ನು ಸಾಧ್ಯವಾದ ಮಟ್ಟಿಗೆ ತಪ್ಪಿಸಬಹುದು ಎಂಬುದು ನನ್ನ ಅಭಿಪ್ರಾಯ ಎಂದರು.

    ಡಾ. ಆರ್.ಕೆ. ಅಜೀಬ್ ಅವರು ಯುನಾನಿ ಪದ್ಧತಿಯಲ್ಲಿ ಡ್ರಾಪ್ಸ್ ಕಂಡು ಹಿಡಿದಿದ್ದಾರೆ. ಸ್ಟೀಮ್ ತೆಗೆದುಕೊಳ್ಳುವಾಗ ಬಿಸಿ ನೀರಲ್ಲಿ ಅಥವಾ ಮೂಗಿನಲ್ಲಿ ಒಂದೆರೆಡು ಹನಿ ಹಾಕಿಕೊಳ್ಳಬಹುದು. ಇದರಿಂದ ಕರೊನಾ ತಡೆಯಬಹುದು. ಆಯುಷ್ ಇಲಾಖೆ ಕೂಡ ಇದಕ್ಕೆ ಮನ್ನಣೆ ನೀಡಿದೆ ಎಂದರು. ಸಾಕಷ್ಟು ಜನರಲ್ಲಿ ಜಾಗೃತಿ ಕಡಿಮೆ ಇದೆ. ಮಾಸ್ಕ್ ಇಲ್ಲದೆ ಓಡಾಡುತ್ತಾರೆ. ಮದುವೆಗಳಲ್ಲಿ ಜನಜಂಗುಳಿ ಇದೆ. ಈ ಕುರಿತು ಕಠಿಣ ನಿರ್ಧಾರ ತೆಗೆದುಕೊಳ್ಳುವಲ್ಲಿ ಮುಖ್ಯಮಂತ್ರಿಗಳು ತಡ ಮಾಡಿದರೂ ಸದ್ಯ ಎಚ್ಚೆತ್ತಿದ್ದಾರೆ. ಕರೊನಾ ಪಸರಿಸುತ್ತಿರುವ ಇಂತಹ ಸಂದರ್ಭದಲ್ಲಿ ಚುನಾವಣೆ ರ್ಯಾಲಿ, ಕುಂಭ ಮೇಳ ಮಾಡಿದ್ದು ಸರಿಯಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

    ಕೊಬ್ಬರಿ ಎಣ್ಣೆ ಬಳಸಿ, ಸ್ಟೀಮ್ ತೆಗೆದುಕೊಳ್ಳಿ: ಡಾ. ಬಿ.ಎಂ. ಹೆಗಡೆ ಹೇಳುವ ಪ್ರಕಾರ, ಮುಖಕ್ಕೆ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಬೇಕು. ಮೂಗಿನಲ್ಲಿ ಕೊಬ್ಬರಿ ಎಣ್ಣೆ ಸವರಿಕೊಳ್ಳಬೇಕು. ಇದರಿಂದ ಯಾವುದೇ ವೈರಸ್ ತಗುಲುವುದಿಲ್ಲ. ಸಿಪ್ಲಾ ಕಂಪನಿ ಚೇರ್ಮನ್ ಯುಸೂಫ್ ಹಮೀದ್ ಹೇಳುವ ಪ್ರಕಾರ ಬಿಸಿ ನೀರಿನ ಹಬೆ (ಸ್ಟೀಮ್ ತೆಗೆದುಕೊಳ್ಳಬೇಕು. ನಮ್ಮ ಮನೆಯ ಸದಸ್ಯರೆಲ್ಲ ನಿತ್ಯ ಎರಡ್ಮೂರು ಬಾರಿ ಹಬೆ ತೆಗೆದುಕೊಳ್ಳುತ್ತೇವೆ. ಇಂತಹ ಸಣ್ಣಪುಟ್ಟ ಮುಂಜಾಗ್ರತೆ ಕ್ರಮ ಅನುಸರಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು.

    ಬಿಸಿ ನೀರನ್ನು ಸೇವಿಸಿ: ಯಾವಾಗಲೂ ಮಾಸ್ಕ್ ಹಾಕುವುದರಿಂದ ದೇಹಕ್ಕೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಹಾಗಾಗಿ, ಒಬ್ಬರೇ ಇದ್ದಾಗ ಮಾಸ್ಕ್ ಬಳಸುವುದನ್ನು ಕಡಿಮೆ ಮಾಡಬೇಕು. ಎಲ್ಲರೂ ಬಿಸಿ ನೀರು ಸೇವಿಸಬೇಕು. ಸ್ಟೀಮ್ ತೆಗೆದುಕೊಳ್ಳಬೇಕು. ನಿಯಮಿತವಾಗಿ ಕಷಾಯ ಕುಡಿಯಬೇಕು. ಅಲ್ಕಲೈನ್ ಇರುವ ಲಿಂಬೆ ಹಣ್ಣು, ಬೆಳ್ಳುಳ್ಳಿ, ಆವಾಕೋಡ ಹಣ್ಣು ಮತ್ತಿತರ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಇದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು.

    ಪ್ರಾಣಾಯಾಮದಿಂದ ರೋಗನಿರೋಧಕ ಶಕ್ತಿ: ಎರಡನೇ ಅಲೆಯಲ್ಲಿ ಯುವಕರಿಗೆ ಹೆಚ್ಚು ಕರೊನಾ ಬಾಧಿಸುತ್ತಿದೆ. ಕಂಪ್ಯೂಟರ್, ಟಿವಿ, ಮೊಬೈಲ್​ಫೋನ್ ಹೆಚ್ಚು ಬಳಸುವವರ, ಒಂದೇ ಕಡೆ 8- 10 ತಾಸು ಕುಳಿತು ಕೆಲಸ ಮಾಡುವವರ ಶ್ವಾಸಕೋಶ ದುರ್ಬಲವಾಗುತ್ತದೆ. ಹಾಗಾಗಿ, ಬಾಬಾ ರಾಮದೇವಜಿ ಹೇಳುವಂತೆ ಹೆಚ್ಚು ಪ್ರಾಣಾಯಾಮ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಡಾ. ವಿಜಯ ಸಂಕೇಶ್ವರ ಸಲಹೆ ನೀಡಿದರು.

    ಉಚಿತ ಸೌಲಭ್ಯದಿಂದ ಉತ್ಪಾದನೆ ಕುಂಠಿತ: ಕರೊನಾದಿಂದ ಸಾರಿಗೆ ಉದ್ಯಮ ಸೇರಿ ಎಲ್ಲ ಉದ್ಯಮಗಳಿಗೆ ಹೊಡೆತ ಬಿದ್ದಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಚಿತ ಪಡಿತರ ಕೊಡುವ ಮೂಲಕ ಸರ್ಕಾರ ದೊಡ್ಡ ತಪ್ಪು ಮಾಡುತ್ತಿದೆ. ಮೋದಿ ಅವರು ಕಾಯಕವೇ ಕೈಲಾಸ ಎಂಬುದನ್ನು ನಂಬಿದವರು. ಕಳೆದ ವರ್ಷ ಲಾಕ್​ಡೌನ್ ವೇಳೆ 3 ತಿಂಗಳು ರೇಷನ್ ನೀಡಿದರು. ಲಾಕ್​ಡೌನ್ ಬಳಿಕವೂ ಮೂರು ತಿಂಗಳು ರೇಷನ್ ಕೊಟ್ಟರು. ಹೀಗಾಗಿ, ಕೆಲಸಗಾರರು ಮನೆಯಲ್ಲೇ ಕುಳಿತರು. ಪುಕ್ಕಟೆ ತಿನ್ನುವವರು ಹೆಚ್ಚಾದರು. ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಕೆಲಸ ಮಾಡುತ್ತಿರುವುದು ಯಾಕೆ ಎಂದು ಅರ್ಥವಾಗುತ್ತಿಲ್ಲ. ಕಡುಬಡವರಿಗೆ ಮಾತ್ರ ಉಚಿತ ರೇಷನ್ ನೀಡಲಿ. ಆದರೆ, 80 ಕೋಟಿ ಜನರಿಗೆ ರೇಷನ್ ಕೊಡುವುದರಿಂದ ಜನ ಕೆಲಸ ಮಾಡುವುದಿಲ್ಲ. ಇದರಿಂದ ದೇಶದ ಉತ್ಪಾದನೆಗೆ ಹೊಡೆತ ಬೀಳುತ್ತದೆ ಎಂದು ಡಾ. ವಿಜಯ ಸಂಕೇಶ್ವರ ಎಚ್ಚರಿಕೆ ನೀಡಿದರು.

    ಸರ್ಕಾರಗಳಿಂದ ಉತ್ತಮ ಕೆಲಸ: ಪ್ರಧಾನಿ ನರೇಂದ್ರ ಮೋದಿ ಹಾಗೂ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಕೋವಿಡ್ ನಿಯಂತ್ರಣಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ವಾರಿಯರ್​ಗಳು ಜೀವ ಪಣಕ್ಕಿಟ್ಟು ಹಗಲು- ರಾತ್ರಿ ಕೆಲಸ ಮಾಡುತ್ತಿದ್ದಾರೆ. ನೂರಾರು ವೈದ್ಯರು, ಸಿಬ್ಬಂದಿ ಕೋವಿಡ್​ನಿಂದ ಮೃತಪಟ್ಟಿದ್ದಾರೆ. ಎಲ್ಲೋ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿರುತ್ತವೆ. ಕೆಲವರು ಇದನ್ನೇ ಬಳಸಿಕೊಂಡು ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಡಾ. ವಿಜಯ ಸಂಕೇಶ್ವರ ಬೇಸರ ವ್ಯಕ್ತಪಡಿಸಿದರು.

    ಪ್ರಧಾನಿ ಮೋದಿ ಅವರು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ಫಾರ್ವ ಕಂಪನಿಗಳಿಗೆ ಪ್ರೋತ್ಸಾಹಿಸಿ ಉತ್ತಮವಾದ ಲಸಿಕೆಯನ್ನು ಯೋಗ್ಯ ಬೆಲೆಗೆ ಸಿಗುವ ಹಾಗೆ ಮಾಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಸಿಗುವಂತೆ ನೋಡಿಕೊಂಡಿದ್ದು, ಹಲವು ದೇಶಗಳಿಗೂ ರಫ್ತು ಮಾಡಲು ಕ್ರಮ ಕೈಗೊಂಡಿದ್ದಾರೆ. ಈ ನಡುವೆ , ಅಲ್ಲೊಂದು ಇಲ್ಲೊಂದು ಅಹಿತಕರ ಘಟನೆ ನಡೆದಿರಬಹುದು. ಕೆಲ ಕಳ್ಳ-ಕಾಕರು ಹಣ ಮಾಡಿರಬಹುದು. ಆದರೆ, ಲಸಿಕೆಯು ಯಶಸ್ವಿಯಾಗಿದೆ. ಮರಣ ಪ್ರಮಾಣವು ಭಾರತದಲ್ಲಿ ಕಡಿಮೆಯಾಗಿದೆ. ಆದರೆ, 130 ಕೋಟಿ ಜನಸಂಖ್ಯೆಗೆ ಎಲ್ಲರಿಗೂ ಲಸಿಕೆ ನೀಡುವುದು ಮತ್ತು ಅದನ್ನು ಮೇಲುಸ್ತುವಾರಿ ಮಾಡುವುದು ನಮ್ಮಂಥ ದೇಶದಲ್ಲಿ ಕಷ್ಟದ ಕೆಲಸ. ಲಸಿಕೆ ಲಭ್ಯತೆ ನಿಟ್ಟಿನಲ್ಲಿ ಸರ್ಕಾರವು ಉತ್ತಮ ಕೆಲಸ ಮಾಡುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts