More

    ಅಪಘಾನಿಸ್ತಾನದಿಂದ ಕನ್ನಡಿಗರು ಶೀಘ್ರ ವಾಪಾಸ್, ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ

    ಮಂಗಳೂರು: ಅಪಘಾನಿಸ್ತಾನದಲ್ಲಿರುವ ಭಾರತೀಯರನ್ನು ದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ವ್ಯವಸ್ಥೆ ಮಾಡಿದೆ. ಅದೇ ರೀತಿ ಕನ್ನಡಿಗರಿಗಾಗಿ ರಾಜ್ಯದಲ್ಲಿ ವಿಶೇಷ ಅಧಿಕಾರಿಯಾಗಿ ಸಿಐಡಿಯಲ್ಲಿ ಕರ್ತವ್ಯದಲ್ಲಿರುವ ಉಮೇಶ್ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸರ್ಕಾರದೊಂದಿಗೆ ಅವರು ಈಗಾಗಲೇ ಸಂಪರ್ಕದಲ್ಲಿದ್ದಾರೆ. ಈ ಹಿಂದೆಯೂ ವಿದೇಶದಲ್ಲಿ ಅತಂತ್ರರಾಗಿದ್ದವರನ್ನು ಕರೆತರುವ ವಿಚಾರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

    ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಯ ದೂರವಾಣಿ ಸಂಖ್ಯೆಯನ್ನು ಈಗಗಾಲೇ ವೆಬ್‌ಸೈಟ್ ಸೇರಿದಂತೆ ಎಲ್ಲ ಕಡೆ ಪ್ರಚಾರ ಮಾಡಲಾಗಿದೆ. ಅವರನ್ನು ನೇರವಾಗಿ ಸಂಪರ್ಕಿಸಬಹುದು. ರಾಜ್ಯದವರು ಒಟ್ಟು ಎಷ್ಟು ಮಂದಿ ಇದ್ದಾರೆ ಎನ್ನುವ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಯಾವುದೇ ಸಮಸ್ಯೆಯಾಗದೆ ದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರತವಾಗಿದ್ದು, ರಾಜ್ಯದ ಅಧಿಕಾರಿಯೂ ಅವರಿಗೆ ಸಹಕಾರ ನೀಡುತ್ತಿದ್ದಾರೆ ಎಂದರು.

    ಎನ್‌ಐ ಕಚೇರಿ ಕುರಿತು ಚರ್ಚೆ: ಕರಾವಳಿಯಲ್ಲಿ ಬಹಳ ವರ್ಷಗಳಿಂದ ಭಯೋತ್ಪಾದಕರ ವಿವಿಧ ಚಟುವಟಿಕೆಯಲ್ಲಿ ನಡೆಯುತ್ತಿದೆ. ಈ ಕುರಿತು ತೀವ್ರ ನಿಗಾವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಸರ್ಕಾರವೂ ಈ ವಿಚಾರ ಗಂಭೀರವಾಗಿ ಪರಿಗಣಿಸಲಿದೆ. ಎನ್‌ಐಎ ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಭೇಟಿ ನೀಡಿದ್ದ ವೇಳೆ ಕರಾವಳಿಯ ಶಾಸಕರು, ಸಚಿವರು ಮನವಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಕಬಕ ಸ್ವಾತಂತ್ರೊೃೀತ್ಸವ ರಥಕ್ಕೆ ತಡೆಯೊಡ್ಡಿದ್ದ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದರು.

    ಗಾಳಿಯಲ್ಲಿ ಗುಂಡು ಹಾರಾಟ ತಪ್ಪು: ಕೇಂದ್ರ ಸಚಿವ ಭಗವಂತ ಖೂಬಾ ಜನಾಶೀರ್ವಾದ ಯಾತ್ರೆಯ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ. ಮಲೆನಾಡು, ಕೊಡಗು ಭಾಗದಲ್ಲಿ ಕೆಲವು ಕಡೆಗಳಲ್ಲಿ ಸಂತೋಷಕ್ಕಾಗಿ, ವಿಜಯೋತ್ಸವ ಸಂದರ್ಭ ಗಾಳಿಯಲ್ಲಿ ಫಯರ್ ಮಾಡುವ ಸಂಪ್ರದಾಯ ಇದೆ. ಇಂತಹ ಸಂಪ್ರದಾಯಗಳು ಖಂಡಿತವಾಗಿಯೂ ತಪ್ಪು, ಸಾರ್ವಜನಿಕವಾಗಿ ಮಾಡುವುದು ಸಲ್ಲದು. ಹೆಚ್ಚು ಕಡಿಮೆಯಾದರೆ ಪ್ರಾಣಾಪಾಯ ಉಂಟಾಗುವ ಸಾಧ್ಯತೆಯೂ ಇದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts