More

    ಕಲಿತ ಅಕ್ಷರ ಒಳ್ಳೆ ಕೆಲಸಕ್ಕೆ ಮೀಸಲಿರಲಿ

    ಹೊಳಲ್ಕೆರೆ: ಸಮಾಜದ ಸ್ವಾಸ್ಥೃ ಕಾಪಾಡುವ ಕಾರ್ಯದಲ್ಲಿ ತೊಡಗಿದಾಗ ಮಾತ್ರ ಪಡೆದ ಶಿಕ್ಷಣದ ಉದ್ದೇಶ ಸಾಫಲ್ಯಗೊಳ್ಳುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಡಾ.ಕೆ.ವೆಂಕಟೇಶ್ ಹೇಳಿದರು.

    ತಾಲೂಕಿನ ಮಲ್ಲಾಡಿಹಳ್ಳಿಯಲ್ಲಿ ಶನಿವಾರ ಅನಾಥಸೇವಾಶ್ರಮದ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ ಸಾಂಸ್ಕೃತಿಕ ಸಂಘ ಉದ್ಘಾಟಿಸಿ ಮಾತನಾಡಿ, ಕಲಿತ ಶಿಕ್ಷಣ ಒಳ್ಳೆ ಕಾರ್ಯಕ್ಕೆ ಮೀಸಲಿಡಬೇಕು ಎಂದರು.

    ವಿದ್ಯಾರ್ಥಿ ಸಾಂಸ್ಕೃತಿಕ ಸಂಘಗಳ ಮೂಲಕ ಕೈಗೊಳ್ಳುವ ಚಟುವಟಿಕೆಗಳು ಜ್ಞಾನಾರ್ಜನೆ ಜತೆಯಲ್ಲಿ ನಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿಸುತ್ತವೆ. ಇದರ ಯಶಸ್ಸಿಗೆ ಆಡಳಿತ ಮಂಡಳಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಶ್ರಮಿಸುವ ಅಗತ್ಯತೆ ಇದೆ ಎಂದು ಹೇಳಿದರು.

    ತಾಪಂ ಇಒ ತಾರಾನಾಥ್ ಮಾತನಾಡಿ, ಬಿ.ಇಡಿ ಪದವಿ ಶಿಕ್ಷಣದ ರಂಗದಲ್ಲಿ ವೃತ್ತಿ ಮಾಡುವವರಿಗೆ ಅನಿವಾರ್ಯವಾಗಿದೆ. ಈ ಕ್ಷೇತ್ರ ಸೇರುವವರಿಗೆ ಆಳ ಅಧ್ಯಯನ ಅಗತ್ಯ ಎಂದರು.

    ಎಎಸ್‌ಟಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಿ.ಸತೀಶ್ ಮಾತನಾಡಿ, ಪ್ರಸ್ತುತ ಮಾಹಿತಿಗಿಂತ ಕೌಶಲಕ್ಕೆ ಹೆಚ್ಚು ಮನ್ನಣೆ ಇದೆ. ಹೀಗಾಗಿ ಕೌಶಲ ರೂಢಿಸಿಕೊಂಡು ಅಭಿವೃದ್ಧಿ ಸಾಧಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

    ಕಳೆದ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕೆ.ಗೋಪಿ, ಟಿ.ಸಿ.ಚಿತ್ರಲೇಖಾ, ದಿವ್ಯಾ, ಶಬನಮ್ ಪರ್ವೀನ್ ಅವರನ್ನು ಗಣ್ಯರು ಗೌರವಿಸಿದರು.

    ಅನಾಥಸೇವಾಶ್ರಮದ ವ್ಯವಸ್ಥಾಪಕ ಎಚ್.ಎಸ್.ಸಿದ್ರಾಮಸ್ವಾಮಿ, ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್, ಉಪನ್ಯಾಸಕರಾದ ಎನ್.ಧನಂಜಯ್, ಎನ್.ಎಸ್.ರುದ್ರೇಶ್, ಎಸ್.ಎನ್.ಶಂಕರ್, ಮಂಜುನಾಥ್, ಅಶ್ವಿನಿ, ಯೋಗ ತರಬೇತುದಾರ ಸಂತೋಷ್ ಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts