More

    ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ಆರಂಭದಲ್ಲೇ ವಿಘ್ನ

    ಬೆಳಗಾವಿ: ನಗರದ ಪುರಾತನ ಮತ್ತು ಐತಿಹಾಸಿಕ ಸ್ಥಳಗಳ ಸಂರಕ್ಷಣೆ, ಅಭಿವೃದ್ಧಿಗೆ ಆರಂಭದಲ್ಲೇ ವಿಘ್ನ ಉಂಟಾಗಿದೆ. ವರ್ಷ ಕಳೆಯುತ್ತ ಬಂದರೂ ದಂಡು ಮಂಡಳಿಯಿಂದ ಎನ್‌ಒಸಿ ಸಿಕ್ಕಿಲ್ಲ.

    ಹೌದು. ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಯಡಿ ಬೆಳಗಾವಿ ನಗರದ ಕೋಟೆ ಸೇರಿ ಪುರಾತನ ಮತ್ತು ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ 25 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ಧಗೊಳಿಸಲಾಗಿತ್ತು. ಆದರೆ, ಈ ಪುರಾತನ ಮತ್ತು ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ಕೇಂದ್ರ ರಕ್ಷಣಾ ಇಲಾಖೆ ಅಧೀನದಲ್ಲಿರುವ ದಂಡು ಮಂಡಳಿಯಿಂದ ಒಪ್ಪಿಗೆ ಸಿಗದ ಕಾರಣ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಯೋಜನೆಯನ್ನು ಕೈಬಿಟ್ಟಿದ್ದಾರೆ.

    ಯೋಜನೆಯಿಂದ ಡಬಲ್ ಲಾಭ: ಮೂರು ರಾಜ್ಯಗಳ ಕೇಂದ್ರ ಸ್ಥಾನವಾಗಿರುವ ಬೆಳಗಾವಿ ನಗರದಲ್ಲಿರುವ ಪುರಾತನ ಮತ್ತು ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ನಗರಕ್ಕೆ ಹೆಸರು ಬರುವುದರ ಜತೆಗೆ, ಪ್ರವಾಸಿ, ಹೋಟೆಲ್, ಸಾರಿಗೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯಾಗುತ್ತವೆ ಎಂಬ ಉದ್ದೇಶದಿಂದ ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ, ತಾಂತ್ರಿಕ ಅನುಮತಿ ಸಿಗದ ಕಾರಣ ಅಧಿಕಾರಿಗಳು ಯೋಜನೆಯಿಂದ ಹಿಂದೆ ಸರಿದಿದ್ದಾರೆ.

    ವಿವಿಧ ಕಾಮಗಾರಿ: ಈಗಾಗಲೇ ಸ್ಮಾರ್ಟ್‌ಸಿಟಿ ಯೋಜನೆಯಡಿ 41 ಕಿಮೀ ಸ್ಮಾರ್ಟ್ ರಸ್ತೆಗಳ ನಿರ್ಮಾಣ, ಟಿಳಕವಾಡಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ, 182 ಕಿಮೀ ಯುಜಿ ಕೇಬಲ್, ಸಿಟಿ ಬಸ್ ನಿಲ್ದಾಣ, ವಂಟಮುರಿಯಲ್ಲಿ 30 ಹಾಸಿಗೆಯುಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರ ಅಭಿವೃದ್ಧಿ, ಕಣಬರ್ಗಿ ಕೆರೆ ಅಭಿವೃದ್ಧಿ ಸೇರಿ ಒಟ್ಟು 568 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಮುಂದಿನ 3 ತಿಂಗಳಲ್ಲಿ 78.11 ಕೋಟಿ ರೂ. ವೆಚ್ಚದ 16 ಕಾಮಗಾರಿಗಳು, ಮುಂದಿನ 9 ತಿಂಗಳಲ್ಲಿ 124.74 ಕೋಟಿ ರೂಪಾಯಿ ವೆಚ್ಚದ 6 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಯೋಜನೆಯಲ್ಲಿ 173.77 ಕೋಟಿ ರೂ. ಕಾಮಗಾರಿಗಳು

    ಸ್ಮಾರ್ಟ್‌ಸಿಟಿ ಯೋಜನೆಯಡಿ 3.18 ಕೋಟಿ ರೂ. ವೆಚ್ಚದಲ್ಲಿ ವ್ಯಾಕ್ಸಿನ್ ಡಿಪೋದಲ್ಲಿ ಪಾರಂಪರಿಕ ಉದ್ಯಾನ, 162.72 ಕೋಟಿ ರೂ. ವೆಚ್ಚದಲ್ಲಿ 29.51 ಕಿಮೀ ರಸ್ತೆ ಕಾಮಗಾರಿ, 100 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ಮೇಲ್ಸೇತುವೆ ನಿರ್ಮಾಣ ಸೇರಿ ಒಟ್ಟು 232 ಕೋಟಿ ರೂ. ವೆಚ್ಚದ ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. 3.29 ಕೋಟಿ ರೂ. ವೆಚ್ಚದಲ್ಲಿ ಸಸಿ ನೆಡುವುದು, 12.58 ಕೋಟಿ ರೂ. ವೆಚ್ಚದಲ್ಲಿ ಯುಜಿ ಕೇಬಲ್, ಬೀದಿ ದೀಪ ಅಳವಡಿಕೆ, 14 ಕೋಟಿ ರೂ. ವೆಚ್ಚದಲ್ಲಿ ಮಹಾಂತೇಶ ನಗರದಲ್ಲಿ ಆರ್ಟ್ ಗ್ಯಾಲರಿ, ವಿಜ್ಞಾನ ಉದ್ಯಾನ, 90 ಲಕ್ಷ ರೂ. ವೆಚ್ಚದಲ್ಲಿ ಮಳೆ ನೀರು ಕೊಯ್ಲು ಘಟಕ, 8 ಕೋಟಿ ರೂ. ವೆಚ್ಚದಲ್ಲಿ ಕೋಟಿ ಕೆರೆ ಅಭಿವೃದ್ಧಿ ಸೇರಿ 173.77 ಕೋಟಿ ರೂ. ವೆಚ್ಚದ ಕಾಮಗಾರಿ ವರ್ಷಗಳಿಂದ ಯೋಜನಾ ಹಂತದಲ್ಲಿವೆ.

    ನಗರದಲ್ಲಿ ಪುರಾತನ ಮತ್ತು ಐತಿಹಾಸಿಕ ಸ್ಥಳಗಳ ಸಂರಕ್ಷಣೆ, ಅಭಿವೃದ್ಧಿಗೆ ಸ್ಮಾರ್ಟ್‌ಸಿಟಿ ಯೋಜನೆಯಡಿ 25 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸಲಾಗಿತ್ತು. ಯೋಜನೆಗೆ ದಂಡುಮಂಡಳಿಯಿಂದ ಎನ್‌ಒಸಿ ಸಿಕ್ಕಿಲ್ಲ. ಪರ್ಯಾಯವಾಗಿ 50 ಎಕರೆ ಜಮೀನು ಬೇಡಿಕೆಯಿಟ್ಟಿರುವುದಿರಂದ ಯೋಜನೆಯನ್ನು ಕೈಬಿಡಲಾಗಿದೆ.
    |ಶಶಿಧರ ಕುರೇರ ಸ್ಮಾರ್ಟ್‌ಸಿಟಿ ಎಂ.ಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts